ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Sandalwood) ಸದಾ ಸಕ್ರಿಯರಾಗಿ ವಿಭಿನ್ನ ರೀಲ್ಸ್‌ಗಳ ಮೂಲಕ ಗಮನ ಸೆಳೆಯುವ ಸ್ಯಾಂಡಲ್‌ವುಡ್ ನಟ ಕಿಶನ್ ಹಾಗೂ ಕಿರುತೆರೆಯ ಖ್ಯಾತ ನಟಿ ನಿವೇದಿತಾ ಗೌಡ ಅವರು ಈಗ ಕಾನೂನಿನ ಬೇಲಿ ಮುರಿದ ಆರೋಪ ಎದುರಿಸುತ್ತಿದ್ದಾರೆ. ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿ ತಯಾರಿಸಲಾದ ವಸ್ತ್ರಗಳನ್ನು ತೊಟ್ಟು ವಿಡಿಯೋ ಮಾಡಿ ಹಂಚಿಕೊಂಡಿರುವುದು ಈ ಇಬ್ಬರು ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕೃತ್ಯದ ವಿರುದ್ಧ ಪರಿಸರ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಅರಣ್ಯ ಇಲಾಖೆಗೆ ಗಂಭೀರ ದೂರು ನೀಡಿದ್ದಾರೆ.
ವ್ಯಾಪಕ ವಿರೋಧಕ್ಕೆ ಕಾರಣವಾದ ವಿಡಿಯೋ ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಫ್ಯಾಷನ್ ಉಡುಪುಗಳ ಪ್ರದರ್ಶನದ ರೀಲ್ಸ್ ಒಂದನ್ನು ಅಪ್‌ಲೋಡ್ ಮಾಡಿತ್ತು. ಆ ಉಡುಪುಗಳ ವಿನ್ಯಾಸಕ್ಕೆ ನವಿಲು ಗರಿಗಳನ್ನು ಯಥೇಚ್ಛವಾಗಿ ಬಳಸಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು, ಅದರಲ್ಲೂ ರಾಷ್ಟ್ರಪಕ್ಷಿಯ ಗರಿಗಳನ್ನು ಮನರಂಜನೆ ಹಾಗೂ ಫ್ಯಾಷನ್‌ಗಾಗಿ ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದನ್ನು ಕಂಡು ಪರಿಸರ ಪ್ರೇಮಿಗಳು ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಸಾರ್ವಜನಿಕ ವಲಯದಲ್ಲಿ ಎದ್ದ ಈ ತೀವ್ರ ಪ್ರತಿರೋಧದ ಬೆನ್ನಲ್ಲೇ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ನಿಜವಾದ ಗರಿಗಳೇ ಅಥವಾ ಕೃತಕವೇ? ತನಿಖೆಗೆ ಒತ್ತಾಯ ದೂರುದಾರರಾದ ದಿನೇಶ್ ಕಲ್ಲಹಳ್ಳಿ ಅವರು ಆ ವಿಡಿಯೋದಲ್ಲಿ ಬಳಸಿರುವ ಗರಿಗಳ ಸೂಕ್ಷ್ಮ ತನಿಖೆಗೆ ಆಗ್ರಹಿಸಿದ್ದಾರೆ. ನಟ ಕಿಶನ್ ಹಾಗೂ ನಿವೇದಿತಾ ಧರಿಸಿರುವ ಬಟ್ಟೆಗಳಲ್ಲಿರುವುದು ಅಪ್ಪಟ ನೈಜ ನವಿಲು ಗರಿಗಳೇ? ಅಥವಾ ಅವು ಪ್ಲಾಸ್ಟಿಕ್ ಹಾಗೂ ಇತರ ರಸಾಯನಿಕ ವಸ್ತುಗಳಿಂದ ಸೃಷ್ಟಿಸಲಾದ ನಕಲಿ ಗರಿಗಳೇ ಎಂಬುದನ್ನು ಅರಣ್ಯ ಇಲಾಖೆಯು ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಮೊದಲು ಪತ್ತೆಹಚ್ಚಬೇಕು ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನು ಕ್ರಮ ಹಾಗೂ ಜಪ್ತಿಗೆ ಆಗ್ರಹ ಒಂದು ವೇಳೆ ಅರಣ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಆ ಡ್ರೆಸ್‌ಗೆ ಬಳಸಿರುವುದು ನಿಜವಾದ ನವಿಲು ಗರಿಗಳೇ ಎಂದು ಸಾಬೀತಾದರೆ, ತಕ್ಷಣವೇ ಆ ವಿವಾದಿತ ಉಡುಪುಗಳನ್ನು ಇಲಾಖೆಯು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಲ್ಲಹಳ್ಳಿ ಒತ್ತಾಯಿಸಿದ್ದಾರೆ. ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಕಠಿಣ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಇಬ್ಬರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿದ್ದಾರೆ. ಸದ್ಯ ಅರಣ್ಯ ಇಲಾಖೆಯು ಈ ದೂರನ್ನು ಸ್ವೀಕರಿಸಿದ್ದು, ಅಧಿಕಾರಿಗಳು ನಡೆಸುವ ಮುಂದಿನ ತನಿಖೆಯ ಆಧಾರದ ಮೇಲೆ ಈ ಸೆಲೆಬ್ರಿಟಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಚಿಕ್ಕಣ್ಣ ಹೊಸ ಸಿನಿಮಾದ ‘ಇನ್ಮೇಲೆ’ ಮೆಲೋಡಿ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್‌ವುಡ್ ತಾರೆಯರು!
