ಬೆಂಗಳೂರು: ಹಾಸ್ಯ ನಟನಾಗಿ ಪ್ರೇಕ್ಷಕರನ್ನು ನಗಿಸಿ, ಈಗ ಹೀರೋ ಆಗಿ ಸ್ಯಾಂಡಲ್ವುಡ್ನಲ್ಲಿ (Sandalwood) ಬ್ಯುಸಿಯಾಗಿರುವ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಅಭಿನಯದ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದ್ದು, ಸಿನಿಮಾದ ಮೊದಲ ಪ್ರೇಮಗೀತೆ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಎಎಂಬಿ ಕಪಾಲಿ ಥಿಯೇಟರ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಚಿತ್ರರಂಗದ ಎಂಟು ಜನ ಖ್ಯಾತ ನಟಿಯರು ಒಟ್ಟಾಗಿ ಸೇರಿ ‘ಇನ್ಮೇಲೆ’ ಎಂಬ ರೋಮ್ಯಾಂಟಿಕ್ ಹಾಡನ್ನು ಬಿಡುಗಡೆಗೊಳಿಸಿದರು.
ಪ್ರೇಮಿಗಳ ಸಂಭಾಷಣೆಯೇ ಹಾಡಿನ ಜೀವಾಳ: ಎ.ಪಿ. ಅರ್ಜುನ್ ಚಿತ್ರಕ್ಕೆ ಕಥೆ ಮತ್ತು ಸಾಹಿತ್ಯ ಒದಗಿಸಿರುವ ಸ್ಟಾರ್ ಡೈರೆಕ್ಟರ್ ಹಾಗೂ ನಿರ್ಮಾಪಕ ಎ.ಪಿ. ಅರ್ಜುನ್ ಮಾತನಾಡಿ, “ಸಾಮಾನ್ಯವಾಗಿ ಪ್ರೇಮಿಗಳು ತಮ್ಮ ಮಾತುಕತೆಯಲ್ಲಿ ಹೆಚ್ಚಾಗಿ ಬಳಸುವ ‘ಇನ್ಮೇಲೆ’, ‘ಆಮೇಲೆ’ ಎಂಬ ಪದಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಈ ಹಾಡನ್ನು ಬರೆಯಲಾಗಿದೆ. ಮಂಡ್ಯ ಭಾಗದ ಮಣ್ಣಿನ ಸೊಗಡನ್ನು ಹೊಂದಿರುವ ಈ ಅಪ್ಪಟ ಕನ್ನಡದ ಗೀತೆಗೆ ‘ಸರಿಗಮಪ’ ಖ್ಯಾತಿಯ, ಉತ್ತರ ಕರ್ನಾಟಕದ ಉದಯೋನ್ಮುಖ ಪ್ರತಿಭೆ ದರ್ಶನ್ ಮೇಳವಂಕಿ ಧ್ವನಿಯಾಗಿದ್ದಾರೆ. ಗಾಯಕರಾಗಿ ಇದು ಅವರಿಗೆ ಮೊದಲ ಸಿನಿಮಾವಾಗಿದ್ದು, ಇವರಿಗೆ ಗಾಯಕಿ ಪೃಥ್ವಿ ಭಟ್ ಸಾಥ್ ನೀಡಿದ್ದಾರೆ. ಹಾಡು ಕೇಳಿದ ಪ್ರತಿಯೊಬ್ಬರಿಂದಲೂ ಅತ್ಯುತ್ತಮ ಒಪಿನಿಯನ್ ಸಿಗುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ನಿರೀಕ್ಷೆಯ ಭಯವಿತ್ತು ಎಂದ ನಾಯಕ ಚಿಕ್ಕಣ್ಣ ಚಿತ್ರದ ಹೀರೊ ಚಿಕ್ಕಣ್ಣ ಮಾತನಾಡಿ, “ನನ್ನ ಮೊದಲ ಸಿನಿಮಾಗೆ ಸೂಪರ್ ಹಿಟ್ ಸಾಂಗ್ ನೀಡಿದ್ದ ಎ.ಪಿ. ಅರ್ಜುನ್ ಮತ್ತು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಜೋಡಿ ಮತ್ತೆ ಈ ಚಿತ್ರಕ್ಕಾಗಿ ಒಂದಾಗುತ್ತಿದೆ ಎಂದಾಗ, ಪ್ರೇಕ್ಷಕರ ನಿರೀಕ್ಷೆ ತಲುಪಲು ಸಾಧ್ಯವೇ ಎಂಬ ಕೊಂಚ ಆತಂಕವಿತ್ತು. ಆದರೆ ಈಗ ಹಾಡು ಮೂಡಿಬಂದಿರುವ ರೀತಿ ನೋಡಿದರೆ ಆ ಭಯ ದೂರಾಗಿದೆ. ನಮ್ಮ ಸಿನಿಮಾದ ಆಡಿಯೋ ಹಕ್ಕುಗಳನ್ನು ಖ್ಯಾತ ‘ಡಿಬೀಟ್ಸ್’ ಸಂಸ್ಥೆಯು ಅತ್ಯುತ್ತಮ ಬೆಲೆಗೆ ತನ್ನದಾಗಿಸಿಕೊಂಡಿದೆ” ಎಂದರು.
ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಈ ಹಾಡಿನಲ್ಲಿ ಚಿಕ್ಕಣ್ಣ ಹಾಗೂ ಚೊಚ್ಚಲ ಬಾರಿಗೆ ನಾಯಕಿಯಾಗಿ ಪರಿಚಯವಾಗುತ್ತಿರುವ ವಂದಿತಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ‘ಎ.ಪಿ. ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಅರ್ಜುನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರವಿಕಿರಣ್ ಗೌಡ ಸಹ-ನಿರ್ಮಾಪಕರಾಗಿದ್ದಾರೆ. ಹಿರಿಯ ನಾಯಕ ಸಂತೋಷ್ ಲಾಡ್ ಅವರ ಬೆಂಬಲ ಈ ಚಿತ್ರಕ್ಕಿದೆ. ಎ.ಪಿ. ಅರ್ಜುನ್ ಅವರ ಗರಡಿಯಲ್ಲಿ ಪಳಗಿರುವ ವಿಜಯ್ ಸ್ವಾಮಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಚಿತ್ರಕ್ಕೆ ಗಿರೀಶ್ ಆರ್. ಗೌಡ ಅವರ ಸಿನಿಮಾಟೋಗ್ರಫಿ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ. ಹಿರಿಯ ನಟಿ ತಾರಾ ಅನುರಾಧಾ, ಕುರಿ ಪ್ರತಾಪ್, ಧರ್ಮಣ್ಣ ಕಡೂರು ಒಳಗೊಂಡಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲಕ್ಷ್ಮೀಪುತ್ರ’ ತಂಡ, ಮುಂಬರುವ ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲಿ ಸಿನಿಮಾವನ್ನು ಬೆಳ್ಳಿಪರದೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ.ಚಿಕ್ಕಣ್ಣ ಹೊಸ ಸಿನಿಮಾದ ‘ಇನ್ಮೇಲೆ’ ಮೆಲೋಡಿ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್ವುಡ್ ತಾರೆಯರು!
ಇದನ್ನೂ ಓದಿ: ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಅಮೃತಾ ಫಡ್ನವಿಸ್? ವೈರಲ್ ಆಯ್ತು ವಿಡಿಯೋ
