ಮುಂಬೈ: 2026ರ ಅತ್ಯಂತ ಕುತೂಹಲ ಕೆರಳಿಸಿರುವ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ: ಪಾರ್ಟ್ 1’ (Ramayana) ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಪ್ರಮುಖ ಬದಲಾವಣೆಗಳಾಗಿವೆ ಎಂಬ ವರದಿಗಳು ಹೊರಬಿದ್ದಿವೆ. ನಿತೀಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ದೃಶ್ಯ ವೈಭವವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಏಕಕಾಲಕ್ಕೆ ತೆರೆಕಾಣಲು ಸಜ್ಜಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡಿಗರ ಹೆಮ್ಮೆಯ ನಟ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ನವೆಂಬರ್ 5 ರಂದು ರಿಲೀಸ್ ಆಗಲಿದೆ ಸಿನಿಮಾ
ಪಿಂಕ್‌ವಿಲ್ಲಾ ವರದಿಯ ಪ್ರಕಾರ, ‘ರಾಮಾಯಣ: ಪಾರ್ಟ್ 1’ ಭಾರತದಲ್ಲಿ ನವೆಂಬರ್ 5 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ನವೆಂಬರ್ 4 ರಂದೇ ಆಯ್ದ ನಗರಗಳಲ್ಲಿ ವಿಶೇಷ ಪ್ರೀಮಿಯರ್ ಶೋಗಳು (Paid Previews) ಪ್ರದರ್ಶನಗೊಳ್ಳಲಿವೆ. ಈ ಹಿಂದೆ ಈ ಚಿತ್ರವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಅಂದರೆ ನವೆಂಬರ್ 8 ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದರು. ಆದರೆ ಈಗ ಪ್ರೇಕ್ಷಕರ ಭಾರಿ ನಿರೀಕ್ಷೆಯನ್ನು ಪರಿಗಣಿಸಿ ಬಿಡುಗಡೆ ದಿನಾಂಕವನ್ನು ನವೆಂಬರ್ 5 ಕ್ಕೆ ಮುಂಚಿತಗೊಳಿಸಲಾಗಿದೆ ಎನ್ನಲಾಗಿದೆ. ಆದಾಗ್ಯೂ, ಚಿತ್ರತಂಡದಿಂದ ಈ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದ್ದು, ಉತ್ತರ ಅಮೆರಿಕದಲ್ಲೂ ನವೆಂಬರ್ 4 ರಂದು ಪ್ರೀಮಿಯರ್ ಶೋಗಳು ನಡೆಯಲಿವೆ. ಆನಂತರ ನವೆಂಬರ್ 5 ರಂದು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ದೇಶಗಳು, ಜರ್ಮನಿ, ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕಾದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಬ್ರಿಟನ್ (UK), ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ನಲ್ಲಿ ನವೆಂಬರ್ 6 ರಂದು ಪ್ರದರ್ಶನ ಆರಂಭವಾಗಲಿದ್ದು, ಚೀನಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಹಾಗೂ ಹಾಂಗ್ ಕಾಂಗ್ ದೇಶಗಳ ಬಿಡುಗಡೆ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು.
2027ರಲ್ಲಿ ರಿಲೀಸ್ ಆಗಲಿದೆ ಎರಡನೇ ಭಾಗ
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಜಾಗತಿಕ ತಂತ್ರಜ್ಞಾನ ಸಂಸ್ಥೆ ಡಿಎನ್‌ಇಜಿ (DNEG) ಮತ್ತು ನಟ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರ ರೂಪುಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ತಂತ್ರಜ್ಞರ ದಂಡೇ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದು, ಅತ್ಯಾಧುನಿಕ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗಿದೆ. ಪ್ರಸಿದ್ಧ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವುದು ಮತ್ತೊಂದು ವಿಶೇಷ.
ಎರಡು ಭಾಗಗಳಾಗಿ ಮೂಡಿಬರಲಿರುವ ಈ ಮಹಾಕಾವ್ಯದ ಮೊದಲ ಭಾಗ ‘ರಾಮಾಯಣ: ಪಾರ್ಟ್ 1’ 2026 ರ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಎರಡನೇ ಭಾಗವಾದ ‘ರಾಮಾಯಣ: ಪಾರ್ಟ್ 2’ ಅನ್ನು 2027 ರಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.
ಇದನ್ನೂ ಓದಿ: ಕೆಜಿಎಫ್’ ಬಳಿಕ ಮತ್ತೆ ಕನ್ನಡಕ್ಕೆ ಬಂದ ರವೀನಾ ಟಂಡನ್: ಶಿವಣ್ಣನ ಚಿತ್ರದಲ್ಲಿ ನಟಿಸಲು ಗ್ರ್ಯಾಂಡ್ ಎಂಟ್ರಿ!
