ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಹಾಗೂ ರಹಸ್ಯ ಸ್ಟಿಂಗ್ ಆಪರೇಷನ್‌ಗಳ (Big News) ಸದ್ದು ಜೋರಾಗಿದ್ದು, ಆಡಳಿತಾರೂಢ ನಾಯಕರಲ್ಲಿ ತೀವ್ರ ಕಂಗಾಲುವಾಾತಾವರಣ ನಿರ್ಮಾಣವಾಗಿದೆ. ಸಂಪುಟ ಸಭೆಯಲ್ಲಿ ಸಚಿವರಿಗೆ ಜಾಗರೂಕರಾಗಿರುವಂತೆ ಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದ ಸುಳಿವು ಹಾಗೂ ತಮ್ಮನ್ನೇ ಸಿಲುಕಿಸಲು ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಆತಂಕ ಮತ್ತು ಚರ್ಚೆ
ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಖಾಸಗಿ ಸಂಭಾಷಣೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು, ದೃಶ್ಯಾವಳಿಗಳನ್ನು ಹರಿದುಬಿಡುವುದು ಹಾಗೂ ಹನಿಟ್ರ್ಯಾಪ್ ಯತ್ನಗಳಂತಹ ಘಟನೆಗಳು ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ರೀತಿಯ ರಹಸ್ಯ ಕಾರ್ಯಾಚರಣೆಗಳ ಬೆನ್ನತ್ತಿರುವ ಖಾಸಗಿ ಏಜೆನ್ಸಿಗಳ ಹಸ್ತಕ್ಷೇಪವು ರಾಜಕೀಯ ಕ್ಷೇತ್ರದಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ ಎಂದು ಸಾರ್ವಜನಿಕರು ಹಾಗೂ ರಾಜಕೀಯ ವಿಶ್ಲೇಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಸಿಎಂ ಎಚ್ಚರಿಕೆ ಮತ್ತು ಸ್ಫೋಟಕ ಹೇಳಿಕೆಯ ಹಿನ್ನೆಲೆ
ಸಚಿವ ಸಂಪುಟದ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ತಮ್ಮ ಸಹೋದ್ಯೋಗಿ ಸಚಿವರಿಗೆ “ರಹಸ್ಯ ಕ್ಯಾಮೆರಾ ಹಾಗೂ ಹನಿಟ್ರ್ಯಾಪ್ ತಂತ್ರಗಳ ಕುರಿತು ಎಚ್ಚರದಿಂದಿರಿ” ಎಂದು ಕಿವಿಮಾತು ಹೇಳಿದ್ದರು ಎನ್ನಲಾದ ವಿಚಾರ ವರದಿಯಾಗಿತ್ತು. ತಮ್ಮನ್ನೇ ಗುರಿಯಾಗಿಸಿಕೊಂಡು ಶರಪಂಜರ ಹೆಣೆಯುವ ಪ್ರಯತ್ನ ನಡೆದಿತ್ತು ಎಂದು ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದರ ಹಿಂದೆ ಯಾವ ಶಕ್ತಿಗಳಿವೆ ಎಂಬ ಕುರಿತು ನಿಖರ ತನಿಖೆಯಾಗಬೇಕಿದೆ ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.
ಸಿಬಿಐ ತನಿಖೆಗೆ ಕಲ್ಲಹಳ್ಳಿ ಪಟ್ಟು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಶಯಾಸ್ಪದ ವೀಡಿಯೊಗಳ ಮೂಲ, ಖಾಸಗಿ ತನಿಖಾ ಸಂಸ್ಥೆಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವು ನೀಡುತ್ತಿರುವ ವ್ಯಕ್ತಿಗಳು ಮತ್ತು ಇದರ ಹಿಂದಿರುವ ಸಂಘಟಿತ ಜಾಲವನ್ನು ಬಯಲಿಗೆಳೆಯಬೇಕಾಗಿದೆ. ರಾಜಕೀಯ ಪ್ರಭಾವದಿಂದ ಮುಕ್ತವಾದ ಹಾಗೂ ತಾಂತ್ರಿಕ ಆಧಾರದ ಮೇಲೆ ಡಿಜಿಟಲ್ ಫೋರೆನ್ಸಿಕ್ ತನಿಖೆ ನಡೆಸಬಲ್ಲ ಕೇಂದ್ರ ತನಿಖಾ ದಳದಿಂದ (CBI) ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕಲ್ಲಹಳ್ಳಿ ಅವರು ರಾಜ್ಯಪಾಲರನ್ನು ಕೋರಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾಗೆ ‘ಅಂಬಾರಿ’ ಡಬಲ್ ಡೆಕ್ಕರ್ ಧಮಾಕ: KSTDCಯಿಂದ 7 ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ!
