ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ (Iran) ಸರ್ಕಾರವು ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಬಲ್ಲ ಇರಾನ್‌ನ ಈ ಅನಿರೀಕ್ಷಿತ ನಡೆ, ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿದೆ.
ಚೀನಾದ ಆರ್ಥಿಕತೆಗೆ ಪೆಟ್ಟು? ವಿಶ್ವದ ಅತಿಮುಖ್ಯ ತೈಲ ಸಾಗಣೆ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯ ನಿಯಮಗಳನ್ನು ಇರಾನ್ ಏಕಪಕ್ಷೀಯವಾಗಿ ಬದಲಿಸಿದೆ. ಅಂತರಾಷ್ಟ್ರೀಯ ಜಲಮಾರ್ಗವಾಗಿದ್ದ ಈ ಪ್ರದೇಶವನ್ನು ಈಗ ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದು ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರಿಗೆ ದೊಡ್ಡ ಆತಂಕ ತಂದಿದೆ. ಚೀನಾದ ಕೈಗಾರಿಕೆಗಳಿಗೆ ಅಗತ್ಯವಿರುವ ಸುಮಾರು ಶೇ. 12ರಷ್ಟು ಇಂಧನವು ಇದೇ ಹಾದಿಯಲ್ಲಿ ಬರಬೇಕಿದ್ದು, ಪೂರೈಕೆಯಲ್ಲಿ ಅಲ್ಪ ವ್ಯತ್ಯಯವಾದರೂ ಅಲ್ಲಿನ ಉತ್ಪಾದನಾ ವಲಯ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಕಡಲ ಗಡಿ ಮೇಲೆ ಇರಾನ್ ಪಾರುಪತ್ಯ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಹಾರ್ಮುಜ್ ಜಲಸಂಧಿಯ ವ್ಯಾಪ್ತಿಯನ್ನು ನೂರಾರು ಕಿಲೋಮೀಟರ್‌ಗಳಷ್ಟು ವಿಸ್ತರಿಸಲಾಗಿದೆ. ಅಂತರಾಷ್ಟ್ರೀಯ ಸಮುದ್ರದ ನೀರನ್ನು ತನ್ನ ಪ್ರಾದೇಶಿಕ ಗಡಿ ಎಂದು ಘೋಷಿಸಿರುವ ಇರಾನ್, ತನ್ನ ಅನುಮತಿಯಿಲ್ಲದೆ ಈ ಮಾರ್ಗದಲ್ಲಿ ಚಲಿಸುವ ತೈಲ ಹಡಗುಗಳ ಮೇಲೆ ನೇರ ದಾಳಿ ಮಾಡುವ ಎಚ್ಚರಿಕೆ ನೀಡಿದೆ. ಈ ಮೂಲಕ ಜಾಗತಿಕ ಇಂಧನ ಸಾಗಣೆಯ ಮೇಲೆ ಸರ್ವಾಧಿಕಾರ ಸಾಧಿಸಲು ಇರಾನ್ ಸಂಚು ರೂಪಿಸಿದೆ.
ಟ್ರಂಪ್ ಭೇಟಿ ವೇಳೆ ಒತ್ತಡದ ತಂತ್ರ ಡೊನಾಲ್ಡ್ ಟ್ರಂಪ್ ಅವರು ಬೀಜಿಂಗ್‌ಗೆ ತಲುಪುವ ಸರಿಯಾದ ಕ್ಷಣದಲ್ಲೇ ಇರಾನ್ ಈ ನಿರ್ಧಾರ ಪ್ರಕಟಿಸಿರುವುದು ರಾಜತಾಂತ್ರಿಕ ಚದುರಂಗದಾಟದ ಒಂದು ಭಾಗ ಎನ್ನಲಾಗಿದೆ. ಅಮೆರಿಕ ಮತ್ತು ಚೀನಾ ನಡುವಿನ ಮಹತ್ವದ ಮಾತುಕತೆಯ ಸಂದರ್ಭದಲ್ಲಿ ತನ್ನ ಬೇಡಿಕೆಗಳಿಗೆ ಮಾನ್ಯತೆ ಸಿಗುವಂತೆ ಮಾಡಲು ಇರಾನ್ ಈ ‘ಬ್ಲ್ಯಾಕ್‌ಮೇಲ್’ ತಂತ್ರ ಬಳಸಿದೆ. ಒಂದು ವೇಳೆ ಮಾತುಕತೆಯಲ್ಲಿ ತನಗೆ ಹಿನ್ನಡೆಯಾದರೆ ತೈಲ ಮಾರ್ಗವನ್ನೇ ಬಂದ್ ಮಾಡುವ ಮೂಲಕ ಜಗತ್ತಿನ ಕುತ್ತಿಗೆ ಹಿಸುಕುವ ಸೂಚನೆ ನೀಡಿದೆ.
ಹೆಚ್ಚಲಿರುವ ತೈಲ ದರ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಸಾರುವ ಇಂತಹ ನಡೆಗಳು ಸಮುದ್ರ ಮಾರ್ಗವನ್ನು ಅತ್ಯಂತ ಅಪಾಯಕಾರಿ ವಲಯವನ್ನಾಗಿ ಮಾರ್ಪಡಿಸಿವೆ. ಹಡಗುಗಳು ಸುರಕ್ಷತೆಯ ದೃಷ್ಟಿಯಿಂದ ಅರೇಬಿಯನ್ ಪರ್ಯಾಯ ದ್ವೀಪವನ್ನು ಸುತ್ತುವರೆದು ಬರಬೇಕಾದ ಅನಿವಾರ್ಯತೆ ಎದುರಾಗಿದ್ದು, ಸಾರಿಗೆ ವೆಚ್ಚ ದುಬಾರಿಯಾಗಲಿದೆ. ಇದು ಅಂತಿಮವಾಗಿ ಜಾಗತಿಕ ತೈಲ ದರ ಏರಿಕೆಗೆ ಕಾರಣವಾಗಲಿದ್ದು, ವಿಶ್ವದಾದ್ಯಂತ ಆರ್ಥಿಕ ಬಿಕ್ಕಟ್ಟು ಸೃಷ್ಟಿಸುವ ಆತಂಕ ಮೂಡಿಸಿದೆ.
