Supreme Court: ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ: ಸುಪ್ರೀಂ ಆದೇಶ

supreme court mandate tracking device and Speed Governor in transport vehicle

ನವದೆಹಲಿ: ಭಾರತದ ರಸ್ತೆಗಳಲ್ಲಿ ‘ಲೇನ್ ಶಿಸ್ತು’ ಎಂಬ ಪರಿಕಲ್ಪನೆಯೇ ಇಲ್ಲದಂತಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ದೇಶದಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಿಗೆ ಲೇನ್ ಶಿಸ್ತು ಪಾಲಿಸದಿರುವುದೇ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಿದರೆ ಅಪಘಾತಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.

ಟ್ರ್ಯಾಕಿಂಗ್‌ ಸಾಧನ ಕಡ್ಡಾಯ ಎಂದ ಕೋರ್ಟ್

ಸಾರ್ವಜನಿಕ ವಾಹನಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ವಾಹನ ಟ್ರ್ಯಾಕಿಂಗ್ ಸಾಧನಗಳು (VLTD) ಮತ್ತು ತುರ್ತು ಪ್ಯಾನಿಕ್ ಬಟನ್‌ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಪ್ರಸ್ತುತ ಶೇಕಡಾ ಒಂದಕ್ಕಿಂತ ಕಡಿಮೆ ಸಾರಿಗೆ ವಾಹನಗಳಲ್ಲಿ ಮಾತ್ರ ಈ ವ್ಯವಸ್ಥೆ ಇರುವುದು ಆತಂಕಕಾರಿ ಸಂಗತಿಯಾಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿದೆ. ಇನ್ನು ಮುಂದೆ ಯಾವುದೇ ಸಾರ್ವಜನಿಕ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರ ಅಥವಾ ಪರ್ಮಿಟ್ ನೀಡುವ ಮೊದಲು ಅವುಗಳಲ್ಲಿ ಟ್ರ್ಯಾಕಿಂಗ್ ಸಾಧನಗಳಿವೆಯೇ ಎಂಬುನ್ನು ‘ವಾಹನ್’ ಆ್ಯಪ್ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಹಳೆಯ ವಾಹನಗಳಿಗೂ ಈ ಸಾಧನಗಳನ್ನು ಅಳವಡಿಸುವಂತೆ ಸೂಚಿಸಿರುವ ಪೀಠವು, ಹೊಸ ವಾಹನಗಳನ್ನು ತಯಾರಿಸುವಾಗಲೇ ಕಂಪನಿಗಳು ಈ ವ್ಯವಸ್ಥೆಯನ್ನು ಅಳವಡಿಸುವಂತೆ ಮಾಡಲು ವಾಹನ ತಯಾರಕರೊಂದಿಗೆ ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವೇಗ ನಿಯಂತ್ರಕಗಳ (Speed Limiters) ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಸಲ್ಲಿಸಿರುವ ವರದಿಗಳು ಅಪೂರ್ಣವಾಗಿದ್ದು, ಈ ಬಗ್ಗೆ ಹೊಸ ಅಫಿಡವಿಟ್ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯನ್ನು ರಚಿಸಲು ಪದೇ ಪದೇ ಗಡುವು ನೀಡಿದರೂ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಮುಂದಿನ ಮೂರು ತಿಂಗಳೊಳಗೆ ಮಂಡಳಿಯನ್ನು ಅಸ್ತಿತ್ವಕ್ಕೆ ತರಲು ಅಂತಿಮ ಅವಕಾಶ ನೀಡಿದೆ.

ಉತ್ತರ ಪ್ರದೇಶದಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ರದ್ದತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೋರಿದೆ. ಎಷ್ಟು ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂಬ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದ ಪೀಠವು, ಒಟ್ಟಾರೆಯಾಗಿ ದೇಶದ ರಸ್ತೆ ಸುರಕ್ಷತಾ ವ್ಯವಸ್ಥೆಯನ್ನು ಸುಧಾರಿಸಲು ತಾಂತ್ರಿಕ ನಿಗಾ ಮತ್ತು ಕಾನೂನು ಜಾರಿ ಎರಡೂ ಸಮಾನವಾಗಿ ಮುಖ್ಯ ಎಂದು ಒತ್ತಿಹೇಳಿದೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಅಕ್ಷರಶಃ ಪಾಲಿಸುವುದು ಅನಿವಾರ್ಯವಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಇದನ್ನೂ ಓದಿ: ಚೀನಾಗೆ ಟ್ರಂಪ್‌ ಭೇಟಿ, ದೊಡ್ಡ ಶಾಕ್‌ ನೀಡಿದ ಇರಾನ್

Leave a Reply

Your email address will not be published. Required fields are marked *