High Court: ಆಪಲ್‌ ಹಾಗೂ ಗೂಗಲ್‌ಗೆ ದೆಹಲಿ ಹೈಕೋರ್ಟ್‌ ನೋಟೀಸ್

delhi high court sends notice to google and apple company regarding sensitive content

ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ (‌Delhi High Court) ಅಶ್ಲೀಲತೆ, ವೇಶ್ಯಾವಾಟಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಅಪ್ಲಿಕೇಶನ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ (‌Delhi High Court) ಬುಧವಾರ ಮಹತ್ವದ ಆದೇಶ ನೀಡಿದೆ. ಇಂತಹ ಆಪ್‌ಗಳ ಪ್ರಭಾವದಿಂದ ದೇಶದ ಇಡೀ ಯುವ ಪೀಳಿಗೆಯು ಹಾದಿ ತಪ್ಪುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

ನೋಟೀಸ್‌ ನೀಡಿದ ಕೋರ್ಟ್

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. ರುಬಿಕಾ ಥಾಪಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಗೂಗಲ್ ಮತ್ತು ಆಪಲ್‌ನಂತಹ ಮಧ್ಯವರ್ತಿ ಸಂಸ್ಥೆಗಳು ಕೇವಲ ದೂರು ಬಂದಾಗ ಮಾತ್ರ ಕ್ರಮ ಕೈಗೊಂಡರೆ ಸಾಲದು, ಬದಲಿಗೆ ಇಂತಹ ಅಪಾಯಕಾರಿ ಅಪ್ಲಿಕೇಶನ್‌ಗಳು ತಮ್ಮ ವೇದಿಕೆಯಲ್ಲಿ ಅಪ್‌ಲೋಡ್ ಆಗುವ ಮೊದಲೇ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು 2021ರ ಅಡಿಯಲ್ಲಿ ಇಂತಹ ಅಕ್ರಮಗಳನ್ನು ತಡೆಯುವಲ್ಲಿ ಗೂಗಲ್ ಮತ್ತು ಆಪಲ್ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕೆಂದು ನ್ಯಾಯಾಲಯ ಒತ್ತಿಹೇಳಿದೆ. ಇಂತಹ ದೃಶ್ಯಗಳು ಹಾಗೂ ವಿಷಯಗಳು ಅಂತರ್ಜಾಲದಲ್ಲಿ ಹರಡದಂತೆ ತಡೆಯಲು ಗೂಗಲ್, ಆಪಲ್ ಮತ್ತು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ಸರ್ಕಾರದ ನಿಯಮಗಳನ್ನು ಅಕ್ಷರಶಃ ಜಾರಿಗೆ ತರುವ ಮೂಲಕ ಯುವಜನರ ಭವಿಷ್ಯವನ್ನು ಕಾಪಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಗೂಗಲ್, ಆಪಲ್ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯು ಜುಲೈ ತಿಂಗಳಲ್ಲಿ ನಡೆಯಲಿದ್ದು, ಆ ವೇಳೆಗೆ ಆಕ್ಷನ್ ಟೇಕನ್ ರಿಪೋರ್ಟ್ (ATR) ಸಲ್ಲಿಕೆಯಾಗಬೇಕಿದೆ. ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಹರಡುತ್ತಿರುವ ಇಂತಹ ನೈತಿಕ ಮತ್ತು ಸಾಮಾಜಿಕ ಬಾಧೆಗಳನ್ನು ಹತ್ತಿಕ್ಕಲು ತಾಂತ್ರಿಕ ಸಂಸ್ಥೆಗಳು ಇನ್ನಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಚೀನಾಗೆ ಬಂದಿಳಿದ ಟ್ರಂಪ್‌, ಮಹತ್ವದ ಮಾತುಕತೆ

Leave a Reply

Your email address will not be published. Required fields are marked *