ಕಲಬುರಗಿ: ಜಿಲ್ಲೆಯ ಹೆಮ್ಮೆಯ ‘ಕಲಬುರಗಿ ಜೋಳದ ರೊಟ್ಟಿ’ (Kalaburagi Rotti) ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ರೊಟ್ಟಿಗಳ ರಫ್ತು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇನ್ನು ಮುಂದೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರು ತಮ್ಮೂರಿನ ರೊಟ್ಟಿಯ ರುಚಿಯನ್ನು ಸವಿಯಬಹುದಾಗಿದೆ.
ಜಾಗತಿಕ ಮಾರುಕಟ್ಟೆಗೆ ಲಗ್ಗೆ ಈ ಐತಿಹಾಸಿಕ ಬೆಳವಣಿಗೆಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದು, ಪ್ರತಿ ತಿಂಗಳು ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ತಲಾ 10,000 ಹಾಗೂ ಕೆನಡಾಕ್ಕೆ 5,000 ರೊಟ್ಟಿಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯು ಜಿಲ್ಲೆಯ ಸುಮಾರು 1,000 ಮಹಿಳೆಯರ ಶ್ರಮದ ಫಲವಾಗಿದ್ದು, 100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಈ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
Kalaburagi Rotti, a product deeply rooted in my region’s identity and food culture, is now reaching global markets.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 13, 2026
I recently flagged off the first export consignments of Kalaburagi Rotti to Australia, USA and Canada. Export volumes are expected to reach 10,000 rotis per month… pic.twitter.com/C3XBkc9dhV
ಸರ್ಕಾರದ ಬೆಂಬಲ ಮತ್ತು ಆಧುನೀಕರಣ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸುಮಾರು 150ಕ್ಕೂ ಹೆಚ್ಚು ರೊಟ್ಟಿ ತಯಾರಿಕಾ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದ್ದು, ಗುಣಮಟ್ಟದ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮೂಲಕ ಈ ಉತ್ಪನ್ನವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸಲಾಗಿದೆ.
ಡಿಜಿಟಲ್ ವೇದಿಕೆಯಲ್ಲೂ ಲಭ್ಯ ಕಲಬುರಗಿ ರೊಟ್ಟಿಯು ಕೇವಲ ವಿದೇಶಿ ಮಾರುಕಟ್ಟೆಗೆ ಮಾತ್ರ ಸೀಮಿತವಾಗದೆ, ದೇಶದ ಪ್ರಮುಖ ಆನ್‌ಲೈನ್ ವೇದಿಕೆಗಳಾದ ಅಮೆಜಾನ್, ಸ್ವಿಗ್ಗಿ ಮತ್ತು ಜೊಮ್ಯಾಟೊಗಳಲ್ಲೂ ಲಭ್ಯವಿದೆ. ಇದರಿಂದಾಗಿ ಸ್ಥಳೀಯ ಮಹಿಳೆಯರಿಗೆ ಸ್ಥಿರವಾದ ಮಾರುಕಟ್ಟೆ ಸಿಕ್ಕಂತಾಗಿದ್ದು, ಅವರ ಆರ್ಥಿಕ ಸ್ವಾವಲಂಬನೆಗೆ ಹೊಸ ಆಯಾಮ ದೊರೆತಿದೆ. ಸಾಂಪ್ರದಾಯಿಕ ಆಹಾರವೊಂದು ಆಧುನಿಕ ತಂತ್ರಜ್ಞಾನದ ನೆರವಿನಿಂದ ಜಾಗತಿಕ ಮಟ್ಟ ತಲುಪಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
