ಬೆಂಗಳೂರು: ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಜಿಬಿಎ ಚುನಾವಣೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಈ ವರ್ಷ ಜಿಬಿಎ ಆದಾಯದ ನಿರೀಕ್ಷೆ ಏನಿದೆ ಎಂದು ಕೇಳಿದಾಗ, “ಆದಾಯ ಬರಲಿ ನೋಡೋಣ. ನಾವು ಆದಾಯದ ಲೆಕ್ಕ ಹಾಕುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕು ರಕ್ಷಣೆ ಮಾಡಬೇಕು. ‘ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ, ವಿದೇಶ ಪ್ರಯಾಣ ಬೇಡ’ ಎಂದು ಹೇಳುವ ಕಷ್ಟ ಕಾಲದಲ್ಲಿ ಜನರಿಗೆ ಒಳ್ಳೆಯದಾಗಬೇಕು” ಎಂದು ತಿಳಿಸಿದರು.
ದೇಶಕ್ಕೆ ದೊಡ್ಡ ಅಪಮಾನ
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್ ಪರೀಕ್ಷೆ ರದ್ದಾಗಿರುವ ಬಗ್ಗೆ ಕೇಳಿದಾಗ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶಕ್ಕೆ ದೊಡ್ಡ ಅಪಮಾನವಾಗಿದ್ದು, ಕೇಂದ್ರ ಸಚಿವರು ಹಾಗೂ ಸಂಸದರು ಇದಕ್ಕೆ ಉತ್ತರಿಸಬೇಕು. ಇದೇ ಪ್ರಕರಣ ನಮ್ಮ ರಾಜ್ಯದಲ್ಲಿ ಆಗಿದ್ದರೆ ಇಷ್ಟು ಹೊತ್ತಿಗೆ ನಮ್ಮ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಅನೇಕ ಕನಸು ಕಟ್ಟಿಕೊಂಡು ಕಷ್ಟಪಟ್ಟಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ” ಎಂದು ತಿಳಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ ಎಂದ ಬಿಕೆ ಹರಿಪ್ರಸಾದ್
ನೀಟ್ (NEET UG) ಪರೀಕ್ಷೆಯ ಅಕ್ರಮದ ಕುರಿತು ದೆಹಲಿಯಲ್ಲಿ ವಾಗ್ದಾಳಿ ನಡೆಸಿರುವ ವಿಧಾನ ಪರಿಷತ್ (BK Hariprasad) ಸದಸ್ಯ ಬಿ.ಕೆ. ಹರಿಪ್ರಸಾದ್, 2026ರ ಈ ಪ್ರಶ್ನೆ ಪತ್ರಿಕೆ ಸೋರಿಕೆಯು ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಬಣ್ಣಿಸಿದ್ದಾರೆ. ಈ ಹಗರಣದಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವು ಕತ್ತಲಿಗೆ ತಳ್ಳಲ್ಪಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಟೀಕೆ
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 40ಕ್ಕೂ ಅಧಿಕ ಬಾರಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿರುವುದು ಕೇಂದ್ರದ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ ಎಂದು ಹರಿಪ್ರಸಾದ್ ಕಿಡಿಕಾರಿದರು. ಕಪ್ಪು ಹಣವನ್ನು ಹೊರತೆಗೆಯುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರು, ಈಗ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಹರಿದಾಡುತ್ತಿರುವ ಕಪ್ಪು ಪ್ರಶ್ನೆ ಪತ್ರಿಕೆಗಳನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ಈ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
