ನವದೆಹಲಿ: ದೇಶದ ಔಷಧ ಮಾರುಕಟ್ಟೆಯಲ್ಲಿ ನಕಲಿ ಮಾತ್ರೆ ಹಾಗೂ (Big News) ಇಂಜೆಕ್ಷನ್ಗಳ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ (Central Government) ಅತ್ಯಂತ ದೃಢವಾದ ಹೆಜ್ಜೆಯಿಟ್ಟಿದೆ. ಭಾರತದ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಜಾಲದ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಕ್ಸಿನ್ಗಳು (ಲಸಿಕೆಗಳು), ಆಂಟಿಮೈಕ್ರೋಬಿಯಲ್ಸ್ (ರೋಗಾಣು ನಿರೋಧಕಗಳು), ಕ್ಯಾನ್ಸರ್ ನಿರೋಧಕ ಔಷಧಿಗಳು ಹಾಗೂ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ (NDPS) ಔಷಧಿಗಳ ಪ್ಯಾಕಿಂಗ್ ಮೇಲೆಯೂ ಕ್ಯುಆರ್ ಕೋಡ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1945ರ ‘ಡ್ರಗ್ಸ್ ರೂಲ್ಸ್’ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿದ್ದು, ಈ ವಿಭಾಗದ ಔಷಧಿಗಳನ್ನು ಹೊಸದಾಗಿ ‘ಶೆಡ್ಯೂಲ್ ಹೆಚ್2’ (Schedule H2) ಅಡಿಯಲ್ಲಿ ಸೇರಿಸಿದೆ.
ನೂತನ ನಿಯಮಗಳ ಪ್ರಕಾರ, ಇನ್ನು ಮುಂದೆ ಔಷಧ ಉತ್ಪಾದಕ ಕಂಪನಿಗಳು ಮಾತ್ರೆ ಅಥವಾ ಸಿರಪ್ಗಳ ಪ್ರಾಥಮಿಕ ಪ್ಯಾಕಿಂಗ್ (ಬಾಟಲ್ ಅಥವಾ ಸ್ಟ್ರಿಪ್) ಲೇಬಲ್ ಮೇಲೆ ಕ್ಯುಆರ್ ಕೋಡ್ ಅಥವಾ ಬಾರ್ಕೋಡ್ ಅನ್ನು ಮುದ್ರಿಸಬೇಕಾಗುತ್ತದೆ. ಒಂದು ವೇಳೆ ಪ್ರಾಥಮಿಕ ಪ್ಯಾಕಿಂಗ್ ಮೇಲೆ ಸ್ಥಳದ ಅಭಾವವಿದ್ದರೆ, ಅದರ ದ್ವಿತೀಯ ಹಂತದ ಬಾಕ್ಸ್ ಪ್ಯಾಕಿಂಗ್ ಲೇಬಲ್ ಮೇಲೆ ಇದನ್ನು ಕಡ್ಡಾಯವಾಗಿ ಅಂಟಿಸಬೇಕಾಗುತ್ತದೆ. ಈ ವಿಶೇಷ ಕ್ಯುಆರ್ ಕೋಡ್ನಲ್ಲಿ ಔಷಧದ ವಿಶಿಷ್ಟ ಗುರುತಿನ ಸಂಖ್ಯೆ, ಬ್ರ್ಯಾಂಡ್ ಹೆಸರು, ಜನರಿಕ್ ಹೆಸರು, ತಯಾರಕ ಕಂಪನಿಯ ಹೆಸರು ಮತ್ತು ಪೂರ್ಣ ವಿಳಾಸ, ಬ್ಯಾಚ್ ನಂಬರ್, ಔಷಧ ತಯಾರಾದ ಮತ್ತು ಅವಧಿ ಮುಗಿಯುವ (Expiry Date) ದಿನಾಂಕ, ಉತ್ಪಾದನಾ ಲೈಸೆನ್ಸ್ ಸಂಖ್ಯೆ ಹಾಗೂ ಔಷಧದಲ್ಲಿ ಬಳಕೆಯಾಗಿರುವ ರಾಸಾಯನಿಕ ಮಿಶ್ರಣಗಳ (Excipients) ಸಂಪೂರ್ಣ ವಿವರಗಳು ಅಡಕವಾಗಿರುತ್ತವೆ. ಸಾರ್ವಜನಿಕರು ಅಥವಾ ವಿತರಕರು ಯಾವುದೇ ತಂತ್ರಾಂಶದ (Software Application) ಮೂಲಕ ಇದನ್ನು ಸ್ಕ್ಯಾನ್ ಮಾಡಿ ಔಷಧದ ಅಸಲಿತನವನ್ನು ತಕ್ಷಣವೇ ಪರಿಶೀಲಿಸಬಹುದಾಗಿದೆ.
ನಕಲಿ ಔಷಧಿ ಜಾಲಕ್ಕೆ ಬ್ರೇಕ್ ಮತ್ತು ಜಾರಿಯ ಕಾಲಮಿತಿ
ಈ ಹಿಂದೆ ಕ್ಯುಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯು ಕೇವಲ ದೇಶದ ಪ್ರಮುಖ 300 ಔಷಧ ಬ್ರ್ಯಾಂಡ್ಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಇದರ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದ್ದು, ಈ ಸುಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ವ್ಯವಸ್ಥೆಯು ಮಾರುಕಟ್ಟೆಯಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಚಲಾವಣೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ, ವೈದ್ಯಕೀಯ ಲೋಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಆಂಟಿ-ಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR – ರೋಗಾಣುಗಳು ಔಷಧಿಗಳಿಗೆ ಮಣಿಯದ ಸ್ಥಿತಿ) ವಿರುದ್ಧದ ಹೋರಾಟಕ್ಕೂ ಇದು ದೊಡ್ಡ ಬಲ ನೀಡಲಿದ್ದು, ಕಳಪೆ ಗುಣಮಟ್ಟದ ಆಂಟಿಬಯೋಟಿಕ್ಗಳ ಬಳಕೆಯನ್ನು ಪತ್ತೆಹಚ್ಚಲು ನೆರವಾಗಲಿದೆ.
ಔಷಧ ಕಂಪನಿಗಳಿಗೆ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪೂರಕವಾದ ಸಮಯವನ್ನು ನೀಡುವ ದೃಷ್ಟಿಯಿಂದ ಸರ್ಕಾರವು ಹಂತ-ಹಂತವಾಗಿ ಈ ನಿಯಮವನ್ನು ಜಾರಿಗೆ ತರುತ್ತಿದೆ. ಅದರಂತೆ, ಮೊದಲ ಹಂತದಲ್ಲಿ ವ್ಯಾಕ್ಸಿನ್ಗಳು, ಕ್ಯಾನ್ಸರ್ ಔಷಧಿಗಳು ಹಾಗೂ ಮಾದಕ ಮತ್ತು ಮನೋರೋಗ ನಿಯಂತ್ರಣದ ಔಷಧಿಗಳಿಗೆ ಸಂಬಂಧಿಸಿದ ಕ್ಯುಆರ್ ಕೋಡ್ ನಿಯಮಗಳು ಜುಲೈ 1, 2027 ರಿಂದ ಜಾರಿಗೆ ಬರಲಿವೆ. ದ್ವಿತೀಯ ಹಂತದಲ್ಲಿ ಆಂಟಿಮೈಕ್ರೋಬಿಯಲ್ಸ್ ಔಷಧಿಗಳಿಗೆ ಸಂಬಂಧಿಸಿದ ನಿಯಮಗಳು ಜುಲೈ 1, 2028 ರಿಂದ ಕಡ್ಡಾಯವಾಗಲಿವೆ. ಈ ಮೂಲಕ ದೇಶದ ಔಷಧ ಸರಬರಾಜು ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ತರಲು ಸರ್ಕಾರ ಸನ್ನದ್ಧವಾಗಿದೆ.
