TOP NEWS

CM Vijay: ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ: ತಮಿಳುನಾಡಿನಲ್ಲಿ 300 ಹೊಸ ಬಸ್‌ಗಳ ಲೋಕಾರ್ಪಣೆ ಮಾಡಿದ ಸಿಎಂ ಜೋಸೆಫ್ ವಿಜಯ್!

Cm vijay flags off 300 new buses takes small ride

ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರವು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಗೆ ಭಾರಿ ಪ್ರೋತ್ಸಾಹ ನೀಡಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಅವರು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಲಪಡಿಸಲು ಸುಮಾರು 127.21 ಕೋಟಿ ರೂಪಾಯಿ ವೆಚ್ಚದ 300 ನೂತನ ಸರ್ಕಾರಿ ಬಸ್‌ಗಳ ಸೇವೆಗೆ ಗುರುವಾರ ಚಾಲನೆ ನೀಡಿದ್ದಾರೆ. ನಗರ ಹಾಗೂ ಉಪನಗರಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಉದ್ಘಾಟನೆಗೊಂಡ ತಕ್ಷಣವೇ ಕೋಯಿಂಬೇಡು ಮತ್ತು ಕಿಲಂಬಾಕ್ಕಂನಂತಹ ಪ್ರಮುಖ ನಿಲ್ದಾಣಗಳಿಂದ ಬಸ್‌ಗಳು ರಸ್ತೆಗಿಳಿದಿವೆ. ವಿಶೇಷವೆಂದರೆ, ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಾವೇ ಸ್ವತಃ ನೂತನ ಬಸ್ ಏರಿ ಮರೀನಾ ಕಡಲತೀರದವರೆಗೆ ಪ್ರಯಾಣಿಸುವ ಮೂಲಕ ಸಾರಿಗೆ ಮೂಲಸೌಕರ್ಯದ ಗುಣಮಟ್ಟವನ್ನು ಪರಿಶೀಲಿಸಿದರು.

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಿರುವ ಈ ಹೊಸ ಸಾರಿಗೆ ಪಡೆಯಲ್ಲಿ ಬಿಎಸ್-VI (BS-VI) ತಂತ್ರಜ್ಞಾನದ 164 ಡೀಸೆಲ್ ಬಸ್‌ಗಳು ಹಾಗೂ ಪರಿಸರ ಸ್ನೇಹಿಯಾದ 136 ಸಿಎನ್‌ಜಿ (CNG) ಬಸ್‌ಗಳನ್ನು ಸೇರಿಸಲಾಗಿದೆ. ತಮಿಳುನಾಡು ಸಾರಿಗೆ ಇಲಾಖೆಯು ಪ್ರಸ್ತುತ 317 ಡಿಪೋಗಳು ಮತ್ತು 26 ವಲಯಗಳ ಅಡಿಯಲ್ಲಿ ಸುಮಾರು 21,527 ಬಸ್‌ಗಳನ್ನು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿದಿನ ದೇಶದಲ್ಲೇ ಅತಿ ಹೆಚ್ಚು ಅಂದರೆ 2.05 ಕೋಟಿ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದೆ.

ಇದರಲ್ಲಿ ಶೇಕಡಾ 64 ರಷ್ಟು ಪ್ರಯಾಣಿಕರು, ಪ್ರಮುಖವಾಗಿ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಿಕಲಚೇತನರು ಉಚಿತ ಪ್ರಯಾಣದ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಸಾರಿಗೆ ರಂಗವನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಜೂನ್ 17 ರಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ಆಧಾರಿತ ಟಿಕೆಟ್ ಪ್ರಕ್ರಿಯೆ, ಜಿಪಿಎಸ್ ಮೂಲಕ ವಾಹನಗಳ ಲೊಕೇಶನ್ ಪತ್ತೆ ಹಚ್ಚುವಿಕೆ ಹಾಗೂ ಪ್ರಮುಖ ನಿಲ್ದಾಣಗಳಲ್ಲಿ 24 ಗಂಟೆಗಳ ಸಹಾಯವಾಣಿ ಕೇಂದ್ರಗಳನ್ನು ತೆರೆಯಲು ಇಲಾಖೆ ಸರ್ವಸನ್ನದ್ಧವಾಗಿದೆ.

ಇದನ್ನೂ ಓದಿ: ರಾಮ ಮಂದಿರ ನಿಧಿ ಅಕ್ರಮ ಆರೋಪ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿವಾದ; ಸೋಮವಾರ ತುರ್ತು ವಿಚಾರಣೆ ಸಾಧ್ಯತೆ

Leave a Reply

Your email address will not be published. Required fields are marked *