ಕೊಪ್ಪಳ: ತುಂಗಭದ್ರಾ (TB Dam) ಜಲಾಶಯದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಮೈಲಿಗಲ್ಲಾಗಬಹುದಾದ ನೂತನ ಕ್ರಸ್ಟ್ಗೇಟ್ಗಳ ಉದ್ಘಾಟನಾ ಸಮಾರಂಭಕ್ಕೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಗೈರುಹಾಜರಾಗಿರುವುದು ಈಗ ಸಾರ್ವಜನಿಕವಾಗಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲೇ ಜಲಾಶಯದ 33 ಹೊಸ ಕ್ರಸ್ಟ್ಗೇಟ್ಗಳ ನವೀಕರಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ನೂತನ ಗೇಟ್ಗಳನ್ನು ಸಾರ್ವಜನಿಕ ಲೋಕಾರ್ಪಣೆಗೊಳಿಸಿದರು.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಮೂರು ರಾಜ್ಯಗಳ ನೀರಾವರಿ ಹಿತಾಸಕ್ತಿ ಹೊಂದಿರುವ ಈ ಪ್ರತಿಷ್ಠಿತ ಸಮಾರಂಭಕ್ಕೆ ಪಕ್ಕದ ಆಂಧ್ರ ಮತ್ತು ತೆಲಂಗಾಣದ ಜಲಸಂಪನ್ಮೂಲ ಸಚಿವರು ಹಾಗೂ ಹಿರಿಯ ಗಣ್ಯರು ಭಾಗವಹಿಸಿದ್ದರು. ಆದರೆ, ಗೃಹ ಇಲಾಖೆಯ ಉಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮದ ಮುಂಚೂಣಿಯಲ್ಲಿರಬೇಕಾಗಿದ್ದ ನಮ್ಮದೇ ರಾಜ್ಯದ ಜಲಸಂಪನ್ಮೂಲ ಸಚಿವರು ಬಾರದೇ ಇರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಕೇವಲ ಒಂದು ವಾರದ ಹಿಂದಷ್ಟೇ ಜಲಾಶಯಕ್ಕೆ ಖುದ್ದಾಗಿ ಭೇಟಿ ನೀಡಿ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದ ಸಚಿವರು, ಮುಖ್ಯ ಕಾರ್ಯಕ್ರಮದಿಂದ ದೂರ ಉಳಿದಿರುವುದು ಇಲಾಖೆಯೊಳಗಿನ ಭಿನ್ನಮತವನ್ನು ಮುನ್ನೆಲೆಗೆ ತಂದಿದೆ.
ಖಾತೆ ಹಂಚಿಕೆ ಅಸಮಾಧಾನ ಇನ್ನೂ ತಣ್ಣಗಾಗಿಲ್ಲವೇ?
ಸಚಿವರ ಈ ದಿಢೀರ್ ಗೈರುಹಾಜರಿಯ ಹಿಂದೆ ಇಲಾಖೆಯ ಮೇಲಿನ ಅಸಮಾಧಾನದ ರಾಜಕಾರಣವಿದೆ ಎನ್ನಲಾಗುತ್ತಿದೆ. ಇತ್ತೀಚಿನ ಸಚಿವ ಸಂಪುಟ ಪುನಾರಚನೆ ವೇಳೆ ತಮಗೆ ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದರು. ತದನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಖುದ್ದಾಗಿ ಸಂಧಾನ ನಡೆಸಿದ ಬಳಿಕ ಅವರು ತಮ್ಮ ರಾಜೀನಾಮೆ ಹಿಂಪಡೆದು ಅಧಿಕಾರ ವಹಿಸಿಕೊಂಡಿದ್ದರು. ಆದರೀಗ ಇಲಾಖೆಯ ಇಷ್ಟೊಂದು ದೊಡ್ಡ ಕಾರ್ಯಕ್ರಮಕ್ಕೆ ಸಚಿವರು ಬಾರದೇ ಇರುವುದನ್ನು ಗಮನಿಸಿದರೆ ಅವರ ಮುನಿಸು ಇನ್ನೂ ಶಮನವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ವೇದಿಕೆ ಬಳಿ ಕಾಡಾ ಅಧ್ಯಕ್ಷ ಮತ್ತು ಪೊಲೀಸರ ಜಟಾಪಟಿ
ಇನ್ನು ಕಾರ್ಯಕ್ರಮ ಆರಂಭವಾಗುವ ಮುನ್ನ ಮುಖ್ಯ ವೇದಿಕೆಯ ಬಳಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಡಾ (CADA) ಅಧ್ಯಕ್ಷ ಹಸನಸಾಬ ದೋಟಿಹಾಳ ಅವರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ದೋಟಿಹಾಳ ಅವರು, “ಕಾಡಾ ಅಧ್ಯಕ್ಷರನ್ನೇ ವೇದಿಕೆಗೆ ಬಿಡುವುದಿಲ್ಲ ಎಂದರೆ ಹೇಗೆ?” ಎಂದು ಸ್ಥಳದಲ್ಲಿದ್ದ ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ವೇದಿಕೆ ಮೇಲಿರುವ ಗಣ್ಯರ ಅಧಿಕೃತ ಪ್ರೋಟೋಕಾಲ್ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದಾಗ, ಇಬ್ಬರ ನಡುವೆ ಜೋರು ವಾಗ್ವಾದ ನಡೆದು ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಸಿದ್ದರಾಮೇಶ್ವರ ಅವರು ಮಧ್ಯಪ್ರವೇಶಿಸಿ, ಪೊಲೀಸರು ಹಾಗೂ ಕಾಡಾ ಅಧ್ಯಕ್ಷರನ್ನು ಸಮಾಧಾನಪಡಿಸುವ ಮೂಲಕ ಪರಿಸ್ಥಿತಿಯನ್ನು ಸುಖಾಂತ್ಯಗೊಳಿಸಿದರು.
