ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ Bigg Boss) ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವೆ ಕಟು ಮಾತುಗಳು ಹಾಗೂ ವೈಯಕ್ತಿಕ ದ್ವೇಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ‘ರಾಕ್ಷಸರು ವರ್ಸಸ್ ಗಂಧರ್ವರು’ ಅಂಕಣದ ಟಾಸ್ಕ್ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿತ್ತು. ಸ್ಪರ್ಧಿಗಳು ಆಟದ ಭರದಲ್ಲಿ ಪರಸ್ಪರ ನಿಂದನೆ, ಕೆಟ್ಟ ಪದಗಳ ಬಳಕೆ ಹಾಗೂ ಹಿಂಸಾತ್ಮಕ ನಡವಳಿಕೆಗೆ ಇಳಿದಿದ್ದು ಪ್ರೇಕ್ಷಕರಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ನಟ ಗಗನ್ ಚಿನ್ನಪ್ಪ ಅವರು ತಮ್ಮ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನಗೊಂಡು ಕಾರ್ಯಕ್ರಮದಿಂದ ಹೊರನಡೆಯುವ ಇಚ್ಛೆ ವ್ಯಕ್ತಪಡಿಸಿರುವುದು ದೊಡ್ಡ ಶಾಕ್ ನೀಡಿದೆ.
ಟಾಸ್ಕ್ ಬದಲಾವಣೆ ಮತ್ತು ಗಾನವಿ-ಗಗನ್ ನಡುವಿನ ನಿಂದನೆ
ಆರಂಭಿಕ ಹಂತದಲ್ಲಿ ಮಂಜು ನಾಯಕತ್ವದ ತಂಡ ರಾಕ್ಷಸರಾಗಿ ಮತ್ತು ಗಾನವಿ ನೇತೃತ್ವದ ಬಳಗ ಗಂಧರ್ವರಾಗಿ ಆಟವಾಡಿದ್ದವು. ಆದರೆ ಬಿಗ್ ಬಾಸ್ ನೀಡಿದ ಟ್ವಿಸ್ಟ್ ಪ್ರಕಾರ ಟಾಸ್ಕ್ ಅದಲ್-ಬದಲ್ ಆದಾಗ, ಮಂಜ ಹಾಗೂ ಗಗನ್ ಚಿನ್ನಪ್ಪ ಇದ್ದ ತಂಡ ಗಂಧರ್ವರಾದರೆ, ಗಾನವಿ ಅವರ ಟೀಮ್ ರಾಕ್ಷಸರ ಪಾತ್ರಕ್ಕೆ ಜಾರಿತು. ಈ ವೇಳೆಯಲ್ಲಿ ಗಾನವಿ ಅವರು ಗಗನ್ ವಿರುದ್ಧ ಆಕ್ಷೇಪಾರ್ಹ ಹಾಗೂ ಸಭ್ಯತೆಯ ಗೆರೆ ದಾಟಿದ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸ್ಪರ್ಧಿ ಕಾವ್ಯ ಕೂಡ ಗಗನ್ ಬಳಿ ಮಂಡಿಯೂರಿ ಕುಳಿತು ಊಟ ಬೇಡುವಂತೆ ಒತ್ತಾಯಿಸಿದ್ದು ಗಗನ್ ಕೋಪ ಹಾಗೂ ಬೇಸರಕ್ಕೆ ಮುಖ್ಯ ಕಾರಣವಾಯಿತು.
‘ಆತ್ಮಗೌರವಕ್ಕಿಂತ ಶೋ ದೊಡ್ಡದಲ್ಲ’ – ನಟ ಗಗನ್ ಆಕ್ರೋಶ
ಈ ಅವಮಾನಕರ ಘಟನೆಯಿಂದ ತೀವ್ರ ಮನನೊಂದ ಗಗನ್ ಚಿನ್ನಪ್ಪ, “ನನಗೆ ನನ್ನ ಸೆಲ್ಫ್ ರೆಸ್ಪೆಕ್ಟ್ ಗಿಂತ ದೊಡ್ಡದು ಯಾವುದೂ ಇಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ಟಾಸ್ಕ್ ಮುಗಿದ ಬಳಿಕ ಭಾವುಕರಾದ ಅವರು, ತಮ್ಮ ಆಪ್ತ ಸ್ಪರ್ಧಿ ತಾಂಡವ್ ರಾಮ್ ಬಳಿ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ. ಇಂತಹ ಕೆಟ್ಟ ವಾತಾವರಣದಲ್ಲಿ ಆಟ ಆಡಲು ಸಾಧ್ಯವಿಲ್ಲ, ಬೇಕಿದ್ದರೆ ತಕ್ಷಣವೇ ಶೋ ತೊರೆದು ಮನೆಗೆ ಹೋಗಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಾಂಡವ್ ರಾಮ್ ಮಧ್ಯಸ್ಥಿಕೆ ಹಾಗೂ ವೀಕೆಂಡ್ ಮೇಲಿನ ಕುತೂಹಲ
ಗಗನ್ ಚಿನ್ನಪ್ಪ ಅವರ ಪರಿಸ್ಥಿತಿಯನ್ನು ಕಂಡ ತಾಂಡವ್ ರಾಮ್, ಈ ವಿಷಯವನ್ನು ಕಾವ್ಯ ಹಾಗೂ ಗಾನವಿ ಅವರ ಬಳಿ ಚರ್ಚಿಸಿದ್ದಾರೆ. “ಗಾನವಿ ಬಳಸಿದ ಪದ ಗಗನ್ ಮನಸ್ಸಿಗೆ ತೀವ್ರವಾಗಿ ಗಾಯ ಮಾಡಿದೆ. ಆತನ ಆತ್ಮಗೌರವ ಹಾಳಾಗುತ್ತಿದ್ದು, ಈ ಟಾಸ್ಕ್‌ನಿಂದ ಆತ ಸಂಪೂರ್ಣವಾಗಿ ನೊಂದಿದ್ದಾನೆ. ಹೀಗೆ ಅಸಹ್ಯವಾಗಿ ಆಟ ಆಡಲು ಇಷ್ಟವಿಲ್ಲದೆ ಶೋ ಬಿಡುವ ನಿರ್ಧಾರಕ್ಕೆ ಬಂದಿದ್ದಾನೆ” ಎಂದು ತಾಂಡವ್ ಇತರ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ಈ ಹಠಾತ್ ಬೆಳವಣಿಗೆಯಿಂದ ಬಿಗ್ ಬಾಸ್ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದು, ಮುಂಬರುವ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಅವರು ಈ ಅತಿರೇಕದ ಘಟನೆಯನ್ನು ಹೇಗೆ ಸರಿಪಡಿಸಲಿದ್ದಾರೆ ಮತ್ತು ಗಗನ್‌ಗೆ ಹೇಗೆ ಧೈರ್ಯ ತುಂಬಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ‘ರಾಮಾಯಣ-1’ ರಿಲೀಸ್: ರಣಬೀರ್-ಯಶ್ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಪ್ರಮುಖ ಬದಲಾವಣೆ!
