ನವದೆಹಲಿ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Actor Darshan) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಪ್ರಮುಖ ಸಹ ಆರೋಪಿಯಾಗಿರುವ ದರ್ಶನ್ ಆಪ್ತ ಪ್ರದೋಷ್ ರಾವ್ ಇದೀಗ ಸರ್ಕಾರಿ ಅಭಯ ಪಡೆದು ಮಾಫಿ ಸಾಕ್ಷಿಯಾಗಲು (Approver) ನಿರ್ಧರಿಸಿದ್ದು, ಇದನ್ನು ಯಾವುದೇ ರೀತಿಯಲ್ಲಾದರೂ ತಡೆಯಲು ನಟ ದರ್ಶನ್ ತೀವ್ರ ಶ್ರಮಿಸುತ್ತಿದ್ದಾರೆ.
ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೂರು ಮೇಲ್ಮನವಿ ಸಲ್ಲಿಕೆ: ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ಈಗಾಗಲೇ ಮ್ಯಾಜಿಸ್ಟ್ರೇಟ್ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಕದ ತಟ್ಟಿದ್ದ ನಟ ದರ್ಶನ್‌ಗೆ ನಿರಾಶೆಯಾಗಿತ್ತು. ಮಾಫಿ ಸಾಕ್ಷಿಯಾಗಿ ಪರಿವರ್ತಿಸುವ ಆದೇಶ ನೀಡುವ ಮುನ್ನ ಸಹ ಆರೋಪಿಗಳ ವಾದ ಅಥವಾ ಆಕ್ಷೇಪಣೆಯನ್ನು ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಸವಾಲು ಮಾಡಿ ನಟ ದರ್ಶನ್ ಈಗ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಹ ಮೇಲ್ಮನವಿ ಸಲ್ಲಿಸಿದ್ದು, ಮಾಫಿ ಸಾಕ್ಷಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಒಟ್ಟು 3 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆಯು ಇದೇ ವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆಯಿದೆ.
ಸಿಸಿಹೆಚ್ ಕೋರ್ಟ್‌ನಲ್ಲಿ ಸತತ 3 ಗಂಟೆ ಇನ್‌ಕ್ಯಾಮೆರಾ ವಿಚಾರಣೆ: ಮತ್ತೊಂದೆಡೆ, ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಪ್ರದೋಷ್ ರಾವ್, ಸೋಮವಾರ ಬೆಂಗಳೂರಿನ 59ನೇ ಸಿಸಿಹೆಚ್ (CCH) ನ್ಯಾಯಾಲಯದ ಮುಂದೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಹಾಜರಾಗಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ (ರಹಸ್ಯ ವಿಚಾರಣೆ) ವೇಳೆಯಲ್ಲಿ ಪ್ರದೋಷ್ ಸತತ ಮೂರು ಗಂಟೆಗಳ ಕಾಲ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರಮುಖ ಘಟನೆಗಳು, ಪಿತೂರಿ ಹಾಗೂ ನಟ ದರ್ಶನ್ ಪಾತ್ರದ ಬಗ್ಗೆ ತಮಗೆ ತಿಳಿದಿರುವ ಸಾಕ್ಷ್ಯಗಳನ್ನು ದಾಖಲಿಸಿದ್ದಾರೆ. ಪ್ರದೋಷ್ ನೀಡುತ್ತಿರುವ ಈ ರಹಸ್ಯ ಹೇಳಿಕೆ ಪ್ರಕ್ರಿಯೆಯು ಎರಡನೇ ದಿನವಾದ ಇಂದೂ ಕೂಡ ನ್ಯಾಯಾಲಯದಲ್ಲಿ ಮುಂದುವರಿದಿದೆ. ಪ್ರದೋಷ್ ರಾವ್ ಅವರ ಈ ನಡೆ ನಟ ದರ್ಶನ್ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ಭಾರಿ ಭೀತಿಯನ್ನು ಹುಟ್ಟುಹಾಕಿದ್ದು, ವಿಚಾರಣೆಯ ಹಂತದಲ್ಲಿ ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ಲಕ್ಷಣಗಳು ಗೋಚರಿಸುತ್ತಿವೆ.
