ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯ ಕೇಂದ್ರವಾದ ನರಸರಾವ್‌ಪೇಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಂತ ವಿರಳ ಹಾಗೂ ಆಘಾತಕಾರಿ ವೈದ್ಯಕೀಯ ಘಟನೆಯೊಂದು (Viral News) ಬೆಳಕಿಗೆ ಬಂದಿದೆ. 33 ವರ್ಷದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಹಲವಾರು ವಿಚಿತ್ರ ವಸ್ತುಗಳನ್ನು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಜೀವ ರಕ್ಷಿಸಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿ ಪತ್ತೆಯಾಗಿದ್ದು, ಇದನ್ನು ಕಂಡ ವೈದ್ಯರೇ ಕೆಲಕಾಲ ದಿಗ್ಭ್ರಮೆಗೊಂಡಿದ್ದಾರೆ.
ಏನಿದು ವಿಚಿತ್ರ ಘಟನೆ?
ನರಸರಾವ್‌ಪೇಟೆಯ ಮಾತೃಶ್ರೀ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಪಿ. ರಾಮಚಂದ್ರ ರೆಡ್ಡಿ ಅವರು ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಿತ್ರ ಪ್ರಕರಣದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರಸರಾವ್‌ಪೇಟೆ ಮಂಡಲದ ಪೆಟ್ಲೂರಿವಾರಿಪಾಲೆಂ ಗ್ರಾಮದ 33 ವರ್ಷದ ವಿವಾಹಿತ ಮಹಿಳೆಯೊಬ್ಬರು ಶನಿವಾರ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆರಂಭದಲ್ಲಿ ಎದೆನೋವಿಗೆ ಸೂಕ್ತ ಕಾರಣ ತಿಳಿಯದಿದ್ದಾಗ ವೈದ್ಯರು ವಿವಿಧ ರೋಗನಿರ್ಣಯ ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳನ್ನು ನಡೆಸಿದರು. ಈ ವೇಳೆ ಆಕೆಯ ಹೊಟ್ಟೆಯ ಭಾಗದಲ್ಲಿ ಪ್ಲಾಸ್ಟಿಕ್ ಹಾಗೂ ಮರದ ಕಾಯಂ ವಸ್ತುಗಳು ಇರುವುದು ದೃಢಪಟ್ಟಿತು.
ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಡಾ. ರಾಮಚಂದ್ರ ರೆಡ್ಡಿ ಅವರ ನೇತೃತ್ವದ ವೈದ್ಯರ ತಂಡವು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮಹಿಳೆಯ ಹೊಟ್ಟೆಗೆ ಸಣ್ಣ ರಂಧ್ರ ಮಾಡಿ, ಒಳಗಿದ್ದ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ದೊಡ್ಡ ಮೇಣದಬತ್ತಿಯನ್ನು ಒಂದೊಂದಾಗಿ ಹೊರತೆಗೆಯಲಾಯಿತು. ಹೊರತೆಗೆಯಲಾದ ಪೆನ್ನುಗಳಲ್ಲಿ ಒಂದರ ಕ್ಯಾಪ್ ತೆರೆದುಕೊಂಡಿತ್ತು. ಈ ಮೊನಚಾದ ಭಾಗವು ಆಕೆಯ ಹೊಟ್ಟೆಯ ಒಳಭಾಗದ ಗೋಡೆಗೆ ಚುಚ್ಚಿ ತೀವ್ರ ನೋವು ಮತ್ತು ಉರಿಯೂತಕ್ಕೆ ಕಾರಣವಾಗಿತ್ತು ಎಂದು ವೈದ್ಯರು ವಿವರಿಸಿದ್ದಾರೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ
ಸಾಮಾನ್ಯವಾಗಿ ಮನುಷ್ಯರು ನುಂಗಲು ಅಸಾಧ್ಯವಾದ ಇಷ್ಟೊಂದು ದೊಡ್ಡ ಪ್ರಮಾಣದ ವಸ್ತುಗಳನ್ನು ಆಕೆ ಹೇಗೆ ಮತ್ತು ಯಾವಾಗ ನುಂಗಿದಳು ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಹಿಳೆಯು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಮಹಿಳೆಯ ತಂದೆ ನೋಮುಲ ಹನುಮಂತರಾವ್ ಮಾತನಾಡಿ, ತಮ್ಮ ಮಗಳು ಕಳೆದ 10 ವರ್ಷಗಳಿಂದ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಮಾನಸಿಕ ಸಮಸ್ಯೆಯ ಕಾರಣಕ್ಕಾಗಿಯೇ ಆಕೆಯ ಪತಿ ಎರಡು ತಿಂಗಳ ಹಿಂದಷ್ಟೇ ಆಕೆಗೆ ವಿಚ್ಛೇದನ ನೀಡಿದ್ದ ಎಂದು ಕಣ್ಣೀರಿಟ್ಟಿದ್ದಾರೆ. ಮಾನಸಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಮಹಿಳೆ ತನಗೆ ತಿಳಿಯದಂತೆ ಈ ವಸ್ತುಗಳನ್ನು ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಅಪರೂಪದ ಶಸ್ತ್ರಚಿಕಿತ್ಸೆಯು ವೈದ್ಯಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸುಶಿಕ್ಷಿತರಿಗಿಂತ ರೆಡ್‌ಲೈಟ್ ಪ್ರದೇಶದ ಜನರೇ ನನಗೆ ಹೆಚ್ಚು ಮತ ಹಾಕಿದ್ದಾರೆ: ಸಚಿವ ನಿತಿನ್ ಗಡ್ಕರಿ ಹೇಳಿಕೆ!
