TOP NEWS

Road Mishap: ಮಂಡ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಅತಿವೇಗದ ಕಾರು ಡಿಕ್ಕಿಯಾಗಿ ಬೆಂಗಳೂರಿನ ಮಹಿಳೆ ಸ್ಥಳದಲ್ಲೇ ಸಾವು

Tragedy Near Mandya High Speed Collision Claims Life of Bengaluru Woman on Highway

ಮಂಡ್ಯ: ಜಿಲ್ಲೆಯ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾವರೇಕೆರೆ ಗೇಟ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, (Road Mishap) ಮಹಿಳೆಯೊಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಮತ್ತೋರ್ವ ಪೆಟ್ರೋಲ್ ಬಂಕ್ ಮಾಲೀಕ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರು ನಿವಾಸಿಯಾದ ಗುಜರಾತ್ ಮೂಲದ ಸುಧಾ ಜೈನ್ (58) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಏನಿದು ಘಟನೆ?

ಶ್ರವಣಬೆಳಗೊಳದ ಧಾರ್ಮಿಕ ಕ್ಷೇತ್ರದ ದರ್ಶನ ಮುಗಿಸಿ ಕುಟುಂಬ ಸಮೇತ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಕರುಳು ಹಿಂಡುವ ದುರಂತ ಸಂಭವಿಸಿದೆ. ಹಿಂಬದಿಯಿಂದ ಅತೀ ವೇಗವಾಗಿ ಬಂದ ಟೊಯೋಟಾ ಹೈಲಕ್ಸ್ ಕಾರು, ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಡಿಸೈರ್ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರಿನ ಹಿಂಭಾಗ ಸಂಪೂರ್ಣಜ್ಜಜ್ಜುಗೊಂಡು ಒಳಗಿದ್ದ ಸುಧಾ ಜೈನ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.

ಇದೇ ವೇಳೆ ಅಪಘಾತದ ತೀವ್ರತೆಗೆ ರಸ್ತೆ ಬದಿಯಲ್ಲಿ ನಿಂತಿದ್ದ ಪೆಟ್ರೋಲ್ ಬಂಕ್ ಮಾಲೀಕನಿಗೂ ಕಾರು ಡಿಕ್ಕಿಯಾಗಿದ್ದು, ಅವರ ಕಾಲಿಗೆ ತೀವ್ರ ಗಾಯವಾಗಿ ಮೂಳೆ ಮುರಿತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ತಕ್ಷಣವೇ ಬಿ.ಜಿ.ನಗರದ ಬಿಜಿಎಸ್ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.

ಚಾಲಕ ಸ್ಥಳದಿಂದ ಪರಾರಿ

ಅಪಘಾತ ಸಂಭವಿಸಿದ ತಕ್ಷಣವೇ ಟೊಯೋಟಾ ಹೈಲಕ್ಸ್ ಕಾರಿನ ಚಾಲಕ ವಾಹನವನ್ನು ರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಭೀಕರ ಅಪಘಾತದ ಸಂಪೂರ್ಣ ದೃಶ್ಯಾವಳಿಗಳು ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ (Dashcam) ಸೆರೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಳ್ಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಅಪಘಾತಕ್ಕೊಳಗಾದ ಎರಡೂ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚಿಕ್ಕಬಳ್ಳಾಪುರ: ಓಮ್ನಿ ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ, ಮೂವರು ಕೂಲಿ ಕಾರ್ಮಿಕ ಮಹಿಳೆಯರು ದುರ್ಮರಣ!

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ದೋಖಾ ಮೂಡಿಸುವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹೂವು ಕಟಾವು ಕೆಲಸಕ್ಕೆ ತೆರಳುತ್ತಿದ್ದ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಮಲ್ಲಿಕಾರ್ಜುನಪುರ ಗ್ರಾಮದ ರಾಮಚಂದ್ರಪ್ಪ ಎಂಬುವವರು ತಮ್ಮ ಓಮ್ನಿ ಕಾರಿನಲ್ಲಿ ಒಟ್ಟು 10 ಜನ ಕೂಲಿ ಕಾರ್ಮಿಕರನ್ನು ಹೂ ಕೊಯ್ಯುವ ಕೆಲಸಕ್ಕಾಗಿ ಹುಜುಗೂರು ಗ್ರಾಮಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಕೊತ್ತನೂರು ಗೇಟ್ ಸಮೀಪ ಎದುರಿನಿಂದ ಬಂದ ಮಿನಿ ಗೂಡ್ಸ್ ವಾಹನ ಹಾಗೂ ಓಮ್ನಿ ಕಾರಿನ ನಡುವೆ ಭೀಕರ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಓಮ್ನಿ ಕಾರಿನಲ್ಲಿದ್ದ ಮಲ್ಲಿಕಾರ್ಜುನಪುರ ಮೂಲದ ಮೂವರು ಮಹಿಳೆಯರು ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನದಲ್ಲಿದ್ದ ಇತರ ಹಲವಾರು ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಶಿಡ್ಲಘಟ್ಟ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಆಪರೇಷನ್ ಚಕ್ರ-VI’: ಡಿಜಿಟಲ್ ಅರೆಸ್ಟ್ ಜಾಲದ ವಿರುದ್ಧ ಸಿಬಿಐ ಸಮರ, ದೇಶದ 89 ಕಡೆ ಭಾರಿ ದಾಳಿ!

Leave a Reply

Your email address will not be published. Required fields are marked *