ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಈ ಕೊಲೆ ಪ್ರಕರಣದ 14ನೇ ಆರೋಪಿ (A14) ಪ್ರದೋಷ್, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು (Approver) ಸ್ವಯಂಪ್ರೇರಿತನಾಗಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ (CCH) ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.
ಕೋರ್ಟ್‌ನಲ್ಲಿ ಪ್ರದೋಷ್ ಹೇಳಿದ್ದೇನು?
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರಾದ ಸುಜಾತ ಸಾಂಬ್ರಾಣಿ ಅವರು ಆರೋಪಿ ಪ್ರದೋಷ್‌ನನ್ನು ನೇರವಾಗಿ ಹಲವು ಪ್ರಶ್ನೆಗಳಿಗೆ ಒಳಪಡಿಸಿದರು. “ಒಂದು ವೇಳೆ ನಿಮ್ಮ ಮಾಫಿ ಸಾಕ್ಷಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದರೆ, ನೀವು ಜೈಲಿನಲ್ಲೇ ಇರಬೇಕಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?” ಎಂದು ಜಡ್ಜ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರದೋಷ್, “ಹೌದು, ಈ ಕಾನೂನು ಪರಿಣಾಮಗಳ ಕುರಿತು ನನ್ನ ವಕೀಲರು ನನಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದನು. ಮುಂದುವರಿದು, ಅರ್ಜಿಯ ಪ್ರತಿ ಹಾಗೂ ಅದರಲ್ಲಿರುವ ವಿಚಾರಗಳನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಸಹಿ ಮಾಡಿದ್ದೀರಾ ಎಂದು ನ್ಯಾಯಾಧೀಶರು ಮರುಪ್ರಶ್ನಿಸಿದಾಗ, “ನಾನು ಯಾವುದೇ ಒತ್ತಡವಿಲ್ಲದೆ, ಸ್ವಯಂಪ್ರೇರಿತನಾಗಿ ಈ ಅರ್ಜಿ ಸಲ್ಲಿಸಿದ್ದೇನೆ. ಅರ್ಜಿಯ ಗಂಭೀರತೆ ಮತ್ತು ಪರಿಣಾಮಗಳ ಕುರಿತು ನನಗೆ ಸಂಪೂರ್ಣ ಅರಿವಿದೆ” ಎಂದು ಕೋರ್ಟ್‌ಗೆ ಅರಿಕೆ ಮಾಡಿದನು.
ದರ್ಶನ್ ಪರ ವಕೀಲರ ಆಕ್ಷೇಪ
ಇದೇ ವೇಳೆ, ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸುದೀರ್ಘ ವಾದ ಮಂಡಿಸಿದರು. “ಆರೋಪಿಯು ಪ್ರಕರಣದಿಂದ ತಕ್ಷಣ ಬಿಡುಗಡೆಯಾಗುವ ಅಥವಾ ಶಿಕ್ಷೆಯಿಂದ ಪಾರಾಗುವ ಆಸೆಯಿಂದ ಈ ರೀತಿ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ. ಈ ಅರ್ಜಿಯ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ, ಯಾರದಾದರೂ ಪ್ರಚೋದನೆ ಅಥವಾ ಒತ್ತಡವಿದೆಯೇ ಅಥವಾ ಯಾರಾದರೂ ಭರವಸೆ ನೀಡಿದ್ದಾರೆಯೇ ಎಂಬುದನ್ನು ನ್ಯಾಯಾಲಯ ಸ್ವತಂತ್ರವಾಗಿ ತನಿಖೆ ನಡೆಸಿ ಪರಿಶೀಲಿಸಬೇಕು” ಎಂದು ಮನವಿ ಮಾಡಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಪ್ರದೋಷ್‌ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿ, “ಕೋರ್ಟ್ ಮುಂದೆ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸದಿದ್ದರೆ ಅಥವಾ ಸುಳ್ಳು ಸಾಕ್ಷಿ ನೀಡಿದರೆ ನಿಮ್ಮನ್ನು ಮತ್ತೆ ಆರೋಪಿಯನ್ನಾಗಿಯೇ ಪರಿಗಣಿಸಲಾಗುತ್ತದೆ” ಎಂದು ತಿಳಿಸಿದರು. ಪ್ರದೋಷ್ ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ, ನ್ಯಾಯಾಲಯವು ತನ್ನ ನಿರ್ಧಾರವನ್ನು ಕಾಯ್ದಿರಿಸಿ ಕಲಾಪವನ್ನು ಆಗಸ್ಟ್ 20ಕ್ಕೆ ರದ್ದುಗೊಳಿಸಿತು.
ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಅರ್ಜಿ ಕೈಸೇರಿಲ್ಲ ಎಂದ ಆರೋಪಿ ಪ್ರದೋಷ್
ಬೆಂಗಳೂರು: ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮುಖ್ಯ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ (A14) ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ (Approver) ಪರಿಗಣಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ (CCH) ನ್ಯಾಯಾಲಯದಲ್ಲಿ ಜರುಗಿತು. ವಿಚಾರಣೆ ವೇಳೆ, ತನಗೆ ಮಾಫಿ ಸಾಕ್ಷಿಯ ಅರ್ಜಿಯ ಪ್ರತಿ ತಲುಪಿಲ್ಲ ಎಂದು ಆರೋಪಿ ಪ್ರದೋಷ್ (Pradosh) ಕೋರ್ಟ್‌ಗೆ ತಿಳಿಸಿದ್ದರಿಂದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ
ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ, “ನಿನ್ನೆ ಸಂಜೆ ಇಮೇಲ್ ಮೂಲಕ ಕಳುಹಿಸಲಾದ ಮಾಫಿ ಸಾಕ್ಷಿಯ ಅರ್ಜಿ ಪ್ರತಿ ತಲುಪಿದೆಯೇ?” ಎಂದು ನ್ಯಾಯಾಧೀಶರು ಪ್ರದೋಷ್‌ನನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರದೋಷ್, ನನಗೆ ಯಾವುದೇ ಅರ್ಜಿಯ ಪ್ರತಿ ತಲುಪಿಲ್ಲ ಎಂದು ಸ್ಪಷ್ಟಪಡಿಸಿದನು. ಆರೋಪಿಯ ಈ ಉತ್ತರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ತಕ್ಷಣವೇ ಅರ್ಜಿಯ ಪ್ರತಿಯನ್ನು ಪ್ರದೋಷ್‌ಗೆ ಹಸ್ತಾಂತರಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿತು.
ಅರ್ಜಿಯ ಪ್ರತಿಯನ್ನು ಪ್ರದೋಷ್‌ಗೆ ನೀಡಿ, ಅದನ್ನು ಸಂಪೂರ್ಣವಾಗಿ ಓದಿ ಪರಿಶೀಲಿಸಲು ಸೂಕ್ತ ಕಾಲಾವಕಾಶ ನೀಡಬೇಕು. ಆ ಬಳಿಕ ಆರೋಪಿಯ ಸಹಿ ಹಾಗೂ ಜೈಲು ಅಧಿಕಾರಿಗಳ ಅಧಿಕೃತ ಮುದ್ರೆಯನ್ನು (Seal) ಪಡೆದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಜೈಲು ಆಡಳಿತಕ್ಕೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಮಯಾವಕಾಶದ ಅಗತ್ಯವಿದ್ದ ಕಾರಣ, ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 3:30ಕ್ಕೆ ಮುಂದೂಡಿ ಆದೇಶಿಸಿತು.
ಇದನ್ನೂ ಓದಿ: ಪ್ರೇಮವಿವಾಹವಾಗಿದ್ದ ನವವಿವಾಹಿತೆ ಬಾವಿಯಲ್ಲಿ ಶವವಾಗಿ ಪತ್ತೆ, ಕೊಲೆ ಆರೋಪ
