ಲಖನೌ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಮುನ್ನೆಲೆಗೆ ತಂದು ಸಮಾಜವಾದಿ ಪಾರ್ಟಿ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕೃತಕ ಬುದ್ಧಿಮತ್ತೆ (AI) ಆಧಾರಿತ ವೀಡಿಯೋ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.
ಎಐ ವೀಡಿಯೋ ಹಂಚಿಕೊಂಡ ಯಾದವ್
ಕನ್ನೌಜ್ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್, ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮೂರು ನಿಮಿಷ ಎಂಟು ಸೆಕೆಂಡುಗಳ ಎಐ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ರಾಮಮಂದಿರದ ಹಿನ್ನೆಲೆಯನ್ನು ಹೊಂದಿರುವ ಈ ವೀಡಿಯೋದಲ್ಲಿ, ಕದ್ದ ಹಣವೆಂದು ತಿಳಿದು ಜನರು ತಮಗೆ ನೀಡಿದ ಹಣವನ್ನು ತಿರಸ್ಕರಿಸುವ ದೃಶ್ಯಗಳಿವೆ. 10 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಅಖಿಲೇಶ್, ಕಳೆದ ಕೆಲವು ದಿನಗಳಿಂದ ರಾಮಮಂದಿರ ದೇಣಿಗೆ ಕಳವು ಪ್ರಕರಣವನ್ನು ಸತತವಾಗಿ ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
राम जी से घात का पैसा
— Akhilesh Yadav (@yadavakhilesh) August 16, 2026
धर्म-दान पात्र का पैसा
भाजपा के पाप का पैसा
नहीं चाहिए ~ नहीं चाहिए
ऐसा पैसा ~ नहीं चाहिए
नहीं चाहिए ~ नहीं चाहिए
ऐसा पैसा नहीं फलेगा
ज़्यादा दिन नहीं चलेगा
जो लेगा ~ उसको पाप लगेगा
नहीं चाहिए ~ नहीं चाहिए
ऐसा पैसा ~ नहीं चाहिए
नहीं चाहिए ~ नहीं चाहिए… pic.twitter.com/v3XcPGrpWy
ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ 20,000 ರೂಪಾಯಿ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಘೋಷಿಸಲಿದೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ್ದ ಅಖಿಲೇಶ್, “ಚುನಾವಣೆ ಗೆಲ್ಲಲು ಬಿಜೆಪಿಗೆ ಹಣ ಬಿಟ್ಟರೆ ಬೇರೇನೂ ಉಳಿದಿಲ್ಲ. ಅದು ಕೂಡ ಅಕ್ರಮವಾಗಿ ಗಳಿಸಿದ ಹಣವಾಗಿದ್ದು, ಉತ್ತರ ಪ್ರದೇಶದ ಧಾರ್ಮಿಕ ಭಾವನೆಯ ಮಹಿಳೆಯರು ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಇತರೆ ರಾಜ್ಯಗಳಲ್ಲಿ ಹಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ, ಹಣ ನೀಡಲು ಹಿಂದೇಟು ಹಾಕುತ್ತಿರುವುದನ್ನು ಮತ್ತು ಕೊಟ್ಟ ಹಣವನ್ನು ವಾಪಸ್ ಕೇಳುತ್ತಿರುವುದನ್ನು ಜಾಗೃತ ಮಹಿಳೆಯರು ಗಮನಿಸುತ್ತಿದ್ದಾರೆ” ಎಂದು ಟೀಕಿಸಿದ್ದರು.
ಪ್ರತ್ಯುತ್ತರ ನೀಡಿದ ಬಿಜೆಪಿ
ಅಖಿಲೇಶ್ ಯಾದವ್ ಅವರ ಈ ಸರಣಿ ಆರೋಪಗಳಿಗೆ ಬಿಜೆಪಿ ಕೂಡ ಪ್ರತ್ಯುತ್ತರ ನೀಡಿದೆ. 2012 ರಿಂದ 2017 ರವರೆಗಿನ ಸಮಾಜವಾದಿ ಪಾರ್ಟಿಯ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿತ್ತು ಹಾಗೂ ಗಲಭೆಗಳು ಸಾಮಾನ್ಯವಾಗಿದ್ದವು ಎಂಬುದನ್ನು ಬಿಜೆಪಿ ನೆನಪಿಸಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಸಮಾಜವಾದಿ ಪಾರ್ಟಿ ಆಡಳಿತದಲ್ಲಿದ್ದಾಗ ರಾಜ್ಯದ ಹೆಣ್ಣುಮಕ್ಕಳು, ವ್ಯಾಪಾರಿಗಳು ಹಾಗೂ ಯುವಕರಿಗೆ ಯಾವುದೇ ಭದ್ರತೆ ಇರಲಿಲ್ಲ. ಪದೇ ಪದೇ ನಡೆಯುತ್ತಿದ್ದ ಗಲಭೆಗಳು ಮತ್ತು ಕರ್ಫ್ಯೂಗಳಿಂದಾಗಿ ಮಾರುಕಟ್ಟೆಗಳು ಬಣಗುಡುತ್ತಿದ್ದವು ಹಾಗೂ ಯುವಕರಿಗೆ ಉದ್ಯೋಗವೇ ಸಿಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ರಾಜಕೀಯ ಕಾದಾಟ ಕಾವು ಪಡೆದುಕೊಂಡಿದೆ.
ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ, ವ್ಯಾಪಾರ ವಿಚಾರಗಳಲ್ಲಿ ಟ್ರಂಪ್ ಧ್ವನಿಯಾಗಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ರಾಜೀನಾಮೆ
