ನವದೆಹಲಿ: ಯುಕ್ರೇನ್ ಹಾಗೂ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧ ಮತ್ತು ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಮುಂಬರುವ ತಿಂಗಳುಗಳಲ್ಲಿ ಪ್ರಪಂಚದಾದ್ಯಂತ ತೀವ್ರ ಸ್ವರೂಪದ ಆಹಾರ ಅಭಾವ ಎದುರಾಗಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಎಚ್ಚರಿಸಿದ್ದಾರೆ. ಜಾಗತಿಕವಾಗಿ ಗೊಬ್ಬರ ಸರಬರಾಜಿನಲ್ಲಿ ಸೃಷ್ಟಿಯಾಗಿರುವ ಭಾರಿ ಕ್ಷಾಮ ಹಾಗೂ ಸರಕು ಸಾಗಣೆ ಮಾರ್ಗಗಳ ಮೇಲಿನ ಹೊಡೆತವು ಅಭಿವೃದ್ಧಿಶೀಲ ದೇಶಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶಗಳ ಆರ್ಥಿಕತೆ ಮೇಲೆ ಯುದ್ದದ ಗಂಭೀರ ಪರಿಣಾಮ
ನ್ಯೂಯಾರ್ಕ್ನಲ್ಲಿರುವ ‘ಏಷ್ಯಾ ಸೊಸೈಟಿ’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಸಂಘರ್ಷಗಳಿಂದಾಗಿ ಜಾಗತಿಕವಾಗಿ ಸೃಷ್ಟಿಯಾಗಿರುವ ತೊಂದರೆಗಳ ಕುರಿತು ವಿವರವಾಗಿ ಮಾತನಾಡಿದರು. ಯುಕ್ರೇನ್ ಯುದ್ಧ ಹಾಗೂ ಇರಾನ್ ಮತ್ತು ಗಲ್ಫ್ ದೇಶಗಳ ನಡುವಿನ ತಂಟೆಗಳು ಜಾಗತಿಕ ದಕ್ಷಿಣದ (ಗ್ಲೋಬಲ್ ಸೌತ್) ದೇಶಗಳ ಆರ್ಥಿಕತೆಯ ಮೇಲೆ ಅತ್ಯಂತ ಭೀಕರ ಪರಿಣಾಮವನ್ನು ಬೀರಿವೆ. ಪ್ರಸ್ತುತ ಪರಿಸ್ಥಿತಿಯು ಅತ್ಯಂತ ಒತ್ತಡದಿಂದ ಕೂಡಿದ್ದು, ಅಭಿವೃದ್ಧಿಶೀಲ ದೇಶಗಳು ಬಹುಮುಖಿ ಬಿಕ್ಕಟ್ಟನ್ನು ಎದುರಿಸುವಂತಾಗಿದೆ ಎಂದು ಅವರು ವರ್ಣಿಸಿದ್ದಾರೆ.
ಇಂಧನ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಏರಿಳಿತಗಳ ಕುರಿತು ಪ್ರಸ್ತಾಪಿಸಿದ ಜೈಶಂಕರ್, ಜಾಗತಿಕ ಸರಬರಾಜು ಜಾಲಗಳು ಈಗ ದ್ವಿಮುಖ ಒತ್ತಡಕ್ಕೆ ಸಿಲುಕಿವೆ ಎಂದಿದ್ದಾರೆ. ಒಂದೆಡೆ ಭೌತಿಕವಾಗಿ ತೈಲ ಪೂರೈಕೆಯಲ್ಲಿ ಅನಿಶ್ಚಿತತೆ ಎದುರಾಗಿದ್ದರೆ, ಇನ್ನೊಂದೆಡೆ ರಾಜಕೀಯ ದಾಳಗಳು ಮತ್ತು ರಾಜತಾಂತ್ರಿಕ ಕುತಂತ್ರಗಳು ಈ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ಕೊರತೆ ಹೆಚ್ಚಿರುವ ಈ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ತೈಲ ಪೂರೈಕೆಯೊಂದಿಗೆ ಆಟವಾಡುವುದು ಇಂಧನ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಮತ್ತು ಮಾರುಕಟ್ಟೆಯ ಸ್ಥಿರತೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಿದೆ ಎಂದು ಅವರು ಎಚ್ಚರಿಸಿದರು.
ಅಸ್ತವ್ಯವಸ್ತವಾಗಿರುವ ರಫ್ತು ಮಾರ್ಗಗಳು
ಆಹಾರ ಧಾನ್ಯಗಳ ರಫ್ತು ಮತ್ತು ರಸಗೊಬ್ಬರ ಉತ್ಪಾದನೆಯಲ್ಲಿನ ವ್ಯತ್ಯಯವೇ ಈ ಮುಂಬರುವ ಆಹಾರ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಕಪ್ಪು ಸಮುದ್ರದ ಮೂಲಕ ನಡೆಯುತ್ತಿದ್ದ ಪ್ರಮುಖ ಧಾನ್ಯ ರಫ್ತು ಮಾರ್ಗಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿರುವುದರಿಂದ ವಿಶ್ವದ ಪ್ರಮುಖ ಆಹಾರ ಧಾನ್ಯ ರಫ್ತುದಾರರಿಗೆ ತಮ್ಮ ಸರಕನ್ನು ಹೊರದೇಶಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಜಾಗತಿಕವಾಗಿ ಕೃಷಿಗೆ ಅತ್ಯಗತ್ಯವಾಗಿರುವ ರಸಗೊಬ್ಬರ ಉತ್ಪಾದಿಸುವ ಪ್ರಮುಖ ದೇಶಗಳಾದ ರಷ್ಯಾ ಹಾಗೂ ಪಶ್ಚಿಮ ಏಷ್ಯಾದ ದೇಶಗಳು ಸಂಘರ್ಷದಲ್ಲಿ ಸಿಲುಕಿಕೊಂಡಿರುವುದರಿಂದ ಗೊಬ್ಬರದ ಅಭಾವ ತೀವ್ರಗೊಂಡಿದೆ.
ಇದಕ್ಕೆ ಕಳಸವಿಟ್ಟಂತೆ ‘ಸೂಪರ್ ಎಲ್ ನಿನೋ’ ನಂತಹ ಹವಾಮಾನ ವೈಪರೀತ್ಯಗಳು ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳು ಸೇರಿಕೊಂಡರೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ. ಒಂದೆಡೆ ಇಂಧನದ ಕೊರತೆ, ಇನ್ನೊಂದೆಡೆ ಆಹಾರ ಧಾನ್ಯ ಹಾಗೂ ರಸಗೊಬ್ಬರಗಳ ತೀವ್ರ ಅಭಾವದ ಜೊತೆಗೆ ಆರ್ಥಿಕ ಬಿಕ್ಕಟ್ಟು ಕೂಡ ಸೃಷ್ಟಿಯಾಗುತ್ತಿದೆ. ಜಾಗತಿಕವಾಗಿ ಯುದ್ಧ ಅಥವಾ ಸಂಘರ್ಷಗಳು ಸೃಷ್ಟಿಯಾದಾಗ ಬಂಡವಾಳವು ಸಂಕಷ್ಟದಲ್ಲಿರುವ ಜಾಗತಿಕ ದಕ್ಷಿಣದ ದೇಶಗಳಿಂದ ಕಾಲ್ಕಿತ್ತು, ಸುರಕ್ಷಿತ ಹೂಡಿಕೆ ತಾಣಗಳತ್ತ ಹರಿಯುತ್ತದೆ. ಇದರಿಂದಾಗಿ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಹಣಕಾಸಿನ ಅಭಾವ ಎದುರಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ದೊಡ್ಡ ಮತ್ತು ಬಲಶಾಲಿ ರಾಷ್ಟ್ರಗಳ ಸ್ವಾರ್ಥ ನಿರ್ಧಾರಗಳನ್ನು ಜೈಶಂಕರ್ ತೀವ್ರವಾಗಿ ಟೀಕಿಸಿದ್ದಾರೆ. ಜಾಗತಿಕ ಶಕ್ತಿಗಳು ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಣ್ಣ ಹಾಗೂ ಬಡ ರಾಷ್ಟ್ರಗಳ ಮೇಲೆ ಬೂಮರಾಂಗ್ ಆಗುವ ದುಷ್ಪರಿಣಾಮಗಳನ್ನು ಕೇವಲ ‘ಅನುಕಂಪದ ಮಾತುಗಳಲ್ಲಿ’ ತಳ್ಳಿಹಾಕಲು ಸಾಧ್ಯವಿಲ್ಲ. ‘ನಮ್ಮ ನಿರ್ಧಾರಗಳಿಂದ ನಿಮಗೆ ತೊಂದರೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ’ ಎಂದು ಸಮರ್ಥನೆ ನೀಡುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಕನಿಷ್ಠ ವಿವೇಕ ಮತ್ತು ಮಾನವೀಯತೆಯ ಆಧಾರದ ಮೇಲೆ ಬಡ ದೇಶಗಳ ಮೂಲಭೂತ ಅಗತ್ಯಗಳಿಗೆ ಧಕ್ಕೆಯಾಗದಂತೆ ಸೂಕ್ತ ಜಾಗರೂಕತೆ ವಹಿಸುವುದು ಜಾಗತಿಕ ನಾಯಕರ ಕರ್ತವ್ಯವಾಗಿದೆ ಎಂದಿದ್ದಾರೆ.
ಇಂಧನ ಹಾಗೂ ಆಹಾರ ಧಾನ್ಯಗಳ ಕೊರತೆಯು ಕೇವಲ ಆರ್ಥಿಕ ಬಿಕ್ಕಟ್ಟಿಗೆ ಸೀಮಿತವಾಗದೆ, ರಾಜಕೀಯ ಅಸ್ಥಿರತೆಗೂ ಕಾರಣವಾಗುತ್ತದೆ ಎಂಬುದನ್ನು ರಷ್ಯಾ-ಯುಕ್ರೇನ್ ಯುದ್ಧದ ಆರಂಭದಲ್ಲೇ ನಮ್ಮ ನೆರೆಹೊರೆಯ ದೇಶಗಳಲ್ಲಿ ಕಂಡಿದ್ದೇವೆ ಎಂದು ಜೈಶಂಕರ್ ನೆನಪಿಸಿದರು. ಪ್ರಸ್ತುತ ಇರಾನ್ ಹಾಗೂ ಗಲ್ಫ್ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಈ ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಭಯ ಕಾಡುತ್ತಿದೆ ಎಂದರು.
ಈ ಅಭೂತಪೂರ್ವ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿವಿಧ ದೇಶಗಳ ಸಾಮರ್ಥ್ಯವು ಬೇರೆ ಬೇರೆಯಾಗಿರಲಿದೆ. ಆರ್ಥಿಕವಾಗಿ ಸ್ವಾಯತ್ತತೆ ಹಾಗೂ ಸಾಮರ್ಥ್ಯ ಹೊಂದಿರುವ ಭಾರತದಂತಹ ದೇಶಗಳು ಈ ಬಿಕ್ಕಟ್ಟನ್ನು ಎದುರಿಸಿ ಹೋರಾಡುವ ಶಕ್ತಿ ಹೊಂದಿವೆ, ಆದರೆ ಸಣ್ಣ ರಾಷ್ಟ್ರಗಳಿಗೆ ಇದು ಅತ್ಯಂತ ಕಠಿಣವಾಗಲಿದೆ. ಪರಿಸ್ಥಿತಿಗೆ ತಕ್ಕಂತೆ ಕೆಲವು ದೇಶಗಳು ಹೊಂದಾಣಿಕೆ ಮಾಡಿಕೊಂಡರೆ, ಇನ್ನು ಕೆಲವು ದೇಶಗಳು ಸವಾಲುಗಳನ್ನು ಎದುರಿಸಿ ಮುನ್ನಡೆಯಲಿವೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕಾಕ್ಪಿಟ್ನಲ್ಲಿ ಪೈಲಟ್ಗಳ ಜಗಳ, ಭಾರಿ ಆತಂಕ: ಸೌದಿ ಅರೇಬಿಯಾದಲ್ಲಿ ಫ್ಲೈದುಬೈ ವಿಮಾನ ತುರ್ತು ಭೂಸ್ಪರ್ಶ
