ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಹಾಗೂ ಬಾಕಿ ದಂಡ ವಸೂಲಾತಿ ಚುರುಕುಗೊಳಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳಿಗೆ ಮುಂದಾಗಿದೆ. ಈ ಕುರಿತು ವಿಕಾಸಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ (Byrati Suresh) ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಜಂಟಿ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಸಾರಿಗೆ ಅಧಿಕಾರಿಗಳು ಭಾಗವಹಿಸಿದ್ದರು.
ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ವಾಹನ ಜಪ್ತಿ
ಸುಪ್ರೀಂಕೋರ್ಟ್ ನೀಡಿದ್ದ ಸಲಹೆಯಂತೆ ಟ್ರಾಫಿಕ್ ದಂಡವನ್ನು ವಿದ್ಯುತ್ ಬಿಲ್ ಜೊತೆ ಸೇರಿಸಿ ವಸೂಲಿ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದೆ. ರಾಜ್ಯದಲ್ಲಿ ಶೇಕಡಾ 96 ರಷ್ಟು ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವುದರಿಂದ ಈ ನಿಯಮ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಇದರ ಬದಲಾಗಿ, ಸತತವಾಗಿ ದಂಡ ಪಾವತಿಸದೆ ನಿಯಮ ಉಲ್ಲಂಘಿಸುವ ವಾಹನ ಸವಾರರ ವಾಹನಗಳನ್ನೇ ನೇರವಾಗಿ ಜಪ್ತಿ (Seize) ಮಾಡಲು ಕಠಿಣ ಕಾಯ್ದೆ ರೂಪಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಟ್ರಾಫಿಕ್ ಉಲ್ಲಂಘನೆ ತಡೆಯಲು ದಂಡದ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಪ್ರಮುಖವಾಗಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವುದು ಹಾಗೂ ಒನ್‌ವೇನಲ್ಲಿ ವಾಹನ ನುಗ್ಗಿಸುವ ಸವಾರರಿಗೆ ಈ ಮೊದಲು ಇದ್ದ 500 ರೂಪಾಯಿ ದಂಡವನ್ನು ಬಾರಿಗೆ 5,000 ರೂಪಾಯಿಗಳಿಗೆ ಏರಿಸಲಾಗಿದೆ. ಕಠಿಣ ದಂಡದ ಭೀತಿಯಿಂದ ಮಾತ್ರ ವಾಹನ ಸವಾರರಲ್ಲಿ ಶಿಸ್ತು ತರಲು ಸಾಧ್ಯ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತ್ಯೇಕ ಬಸ್ ಲೇನ್ ಆರಂಭಕ್ಕೆ ನಿರ್ಧಾರ
ಇದಲ್ಲದೆ, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರತ್ಯೇಕ ‘ಬಸ್ ಲೇನ್’ (Dedicated Bus Lane) ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಮೆಟ್ರೋ ಕಾಮಗಾರಿಗಳ ಕಾರಣದಿಂದ ಈ ಹಿಂದೆ ರದ್ದಾಗಿದ್ದ ಬಸ್ ಲೇನ್ ವ್ಯವಸ್ಥೆಯನ್ನು, ಕಾಮಗಾರಿಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮರುಸ್ಥಾಪಿಸಲಾಗುತ್ತಿದೆ. ಶೀಘ್ರದಲ್ಲೇ 4,500 ನೂತನ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿದ್ದು, ಇದು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಿ ರಸ್ತೆಗಳ ಮೇಲಿನ ವಾಹನದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ
ಇದನ್ನೂ ಓದಿ: ‘ಕುಮಾರಸ್ವಾಮಿ 3B ರಾಜಕಾರಣಿಗೆ ಫೇಮಸ್’: ಎಚ್‌ಡಿಕೆ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ಆಕ್ರೋಶ
