TOP NEWS

Raghav Chadha: ನೀಟ್ ಅಕ್ರಮದ ಮೌನ ಮುರಿದ ರಾಘವ್ ಚಡ್ಡಾ: ‘ಅಂದು ವಿರೋಧ ಪಕ್ಷದಲ್ಲಿದ್ದೆ ಪ್ರಶ್ನಿಸಿದೆ, ಇಂದು ಆಡಳಿತ ಪಕ್ಷದಲ್ಲಿದ್ದೇನೆ ಪರಿಹಾರ ನೀಡುವೆ’!

Earlier I Questioned Now I Resolve BJP MP Raghav Chadha Shuts Down Trolls Over NEET Silence

ನವದೆಹಲಿ: ಸಂಸತ್ತಿನಲ್ಲಿ ವಿಮಾನ ನಿಲ್ದಾಣದ ಚಹಾ-ಸಮೋಸಾ ಬೆಲೆ ಏರಿಕೆಯಿಂದ ಹಿಡಿದು ಗಿಗ್ ಕಾರ್ಮಿಕರ ಸಮಸ್ಯೆಗಳವರೆಗೆ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದ ಯುವ ನಾಯಕರೊಬ್ಬರು, ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್ (NEET) ಪೇಪರ್ ಸೋರಿಕೆ ಹಗರಣದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ದೆಹಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪರವಾಗಿ ಸದಾ ಮಾತನಾಡುತ್ತಿದ್ದ ಈ ನಾಯಕನ ದಿಢೀರ್ ಮೌನ ಸಾರ್ವಜನಿಕರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಲೇವಡಿಗೆ ಕಾರಣವಾಗಿತ್ತು. ಕೊನೆಗೂ ತಮ್ಮ ಈ ಸುದೀರ್ಘ ಮೌನದ ಹಿಂದಿನ ರಹಸ್ಯವನ್ನು ಆ ನಾಯಕ ರಾಘವ್‌ ಚಡ್ಡಾ (Raghav Chadha) ಸಂಸತ್ತಿನಲ್ಲಿ ಬಿಚ್ಚಿಟ್ಟಿದ್ದಾರೆ.

ರಾಜ್ಯಸಭೆಯಲ್ಲಿ ಉತ್ತರ ನೀಡಿದ ಚಡ್ಡಾ

ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷವನ್ನು (AAP) ತೊರೆದು ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ಗುರುವಾರ ರಾಜ್ಯಸಭೆಯಲ್ಲಿ ಪೇಪರ್ ಸೋರಿಕೆ ತಡೆಗೆ ತರಲಾಗಿರುವ ನೂತನ ಕಾಯ್ದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ತಮಗೆ ಎದುರಾಗಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು. ರಾಜಕೀಯವಾಗಿ ಪಕ್ಷ ಬದಲಾದ ಮೇಲೆ ತಮ್ಮ ಜವಾಬ್ದಾರಿಯೂ ಬದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಹಿಂದೆ ತಾವು ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಮತ್ತು ಪ್ರಶ್ನೆ ಮಾಡುವುದು ತಮ್ಮ ಕರ್ತವ್ಯವಾಗಿತ್ತು, ಅದನ್ನು ಪ್ರಾಮಾಣಿಕವಾಗಿ ಮಾಡಿದ್ದಾಗಿ ಹೇಳಿದರು. ಆದರೆ ಈಗ ತಾವು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿರುವುದರಿಂದ, ಕೇವಲ ಪ್ರಶ್ನೆಗಳನ್ನು ಕೇಳುವುದು ತಮ್ಮ ಕೆಲಸವಲ್ಲ, ಬದಲಿಗೆ ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕೇವಲ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿ ಹೆಡ್‌ಲೈನ್ಸ್‌ ಆಗುವುದರಲ್ಲಿ ತಮಗೆ ಆಸಕ್ತಿಯಿಲ್ಲ ಎಂದ ಚಡ್ಡಾ, ವ್ಯವಸ್ಥೆಯನ್ನು ಸರಿಪಡಿಸುವ ಕಾಯ್ದೆ ಜಾರಿಗೆ ಬರುವ ದಿನದವರೆಗೆ ಸಂಸತ್ತಿನಲ್ಲಿ ಮಾತನಾಡಬಾರದು ಎಂದು ತಮಗೆ ತಾವೇ ಪಣತೊಟ್ಟಿದ್ದಾಗಿ ತಿಳಿಸಿದರು. ಪೇಪರ್ ಸೋರಿಕೆ ಎಂಬ ಮಹಾಮಾರಿಯನ್ನು ಕೇವಲ ಬಾಯಿಮಾತಿನ ಹೇಳಿಕೆಗಳಿಂದ ತಡೆಯಲು ಸಾಧ್ಯವಿಲ್ಲ, ಅದಕ್ಕೆ ಬಲವಾದ ಸಾಂಸ್ಥಿಕ ಸುಧಾರಣೆಗಳ ಅಗತ್ಯವಿದೆ. ಕ್ಯಾನ್ಸರ್ ಕಾಯಿಲೆಗೆ ಕೇವಲ ಕ್ರೋಸಿನ್ ಮಾತ್ರೆ ನೀಡಿ ಗುಣಪಡಿಸಲು ಸಾಧ್ಯವಿಲ್ಲದಂತೆ, ಪೇಪರ್ ಸೋರಿಕೆ ದಂಧೆಯನ್ನು ತಡೆಯಲು ಈಗಿನ ಕಠಿಣ ಕಾನೂನು ಅನಿವಾರ್ಯವಾಗಿತ್ತು ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ

ಇದೇ ವೇಳೆ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಯುವ ಸಮೂಹದ ಆಕ್ರೋಶ ಮತ್ತು ಅನುಭವಿಸಿದ ನೋವು ಅತ್ಯಂತ ನ್ಯಾಯಸಮ್ಮತವಾಗಿದೆ. ವಿದ್ಯಾರ್ಥಿಗಳು ಧ್ವನಿ ಎತ್ತಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ದೇಶದ ಪ್ರಧಾನಿಯಾಗಿ ಮಾತ್ರವಲ್ಲದೆ, ಒಂದು ಕುಟುಂಬದ ಹಿರಿಯ ಪೋಷಕರ ಸ್ಥಾನದಲ್ಲಿ ನಿಂತು ಅವರ ಅಳಲನ್ನು ಆಲಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಸರ್ಕಾರ ತಕ್ಷಣವೇ ಸ್ಪಂದಿಸಿದ್ದು, ವ್ಯವಸ್ಥೆಯನ್ನು ಸರಿಪಡಿಸಲು ಐತಿಹಾಸಿಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ರಾಘವ್ ಚಡ್ಡಾ ವಿವರಿಸಿದರು.

ಇದನ್ನೂ ಓದಿ: ಮೋದಿ ವಿಡಿಯೋಗೆ ಸಿಜೆಪಿ ನಾಯಕನ ಬಾಲಿಶ ಕಾಮೆಂಟ್: ಜ್ಞಾನವಿಲ್ಲದ ಕೆಳಮಟ್ಟದ ಟ್ರೋಲ್ ವಿರುದ್ಧ ನೆಟ್ಟಿಗರ ತೀವ್ರ ಆಕ್ರೋಶ!

Leave a Reply

Your email address will not be published. Required fields are marked *