TOP NEWS

CJP: ಧರಣಿ ವಾಪಸ್: ದೆಹಲಿ ಮೆಟ್ರೋ ಸೇವೆ ಸಂಪೂರ್ಣ ಯಥಾಸ್ಥಿತಿ

CJP takes back protest delhi metro started working normally

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (CJP) ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್‌ಸಿ) ತನ್ನ ಜಾಲದ ಎಲ್ಲಾ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಭಾನುವಾರದಿಂದ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ.

ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಮೆಟ್ರೋ

ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ಮೆಟ್ರೋ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಡಿಎಂಆರ್‌ಸಿ ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಖಚಿತಪಡಿಸಿದೆ. ಪ್ರತಿಭಟನೆಯ ಕಾರಣದಿಂದಾಗಿ ದೆಹಲಿಯ ಜಂತರ್ ಮಂತರ್ ಸುತ್ತಮುತ್ತ ಬಿಗಿ ಭದ್ರತೆ ವಹಿಸಲಾಗಿತ್ತು. ಸುರಕ್ಷತಾ ಕ್ರಮವಾಗಿ ಡಿಎಂಆರ್‌ಸಿ ಹಲವು ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಚಾರವನ್ನು ಭಾಗಶಃ ತಡೆಹಿಡಿದಿತ್ತು.

ಕ್ಲೋಸ್‌ ಆಗಿದ್ದ 16 ಪ್ರಮುಖ ಮೆಟ್ರೋ ನಿಲ್ದಾಣಗಳು

ಪ್ರತಿಭಟನೆ ತೀವ್ರಗೊಂಡಿದ್ದಾಗ ಜನ್‌ಪಥ್, ರಾಜೀವ್ ಚೌಕ್, ಪಟೇಲ್ ಚೌಕ್ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್ ಸೇರಿದಂತೆ ಸುಮಾರು 16 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಹಂತ ಹಂತವಾಗಿ ಮುಚ್ಚಲಾಗಿತ್ತು. ಆದರೆ, ಶನಿವಾರ ಸಂಜೆ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ತಕ್ಷಣವೇ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣಗಳ ಗೇಟ್‌ಗಳನ್ನು ತೆರೆಯಲಾಯಿತು. ಇದೀಗ ಧರಣಿ ಪೂರ್ಣವಾಗಿ ಅಂತ್ಯಗೊಂಡಿರುವುದರಿಂದ ದೆಹಲಿ ಮೆಟ್ರೋದ ಇಡೀ ಜಾಲದಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಪ್ರಯಾಣಿಕರು ನಿರಾಳವಾಗಿದ್ದಾರೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG) ಪರೀಕ್ಷಾ ಅಕ್ರಮದ ವಿವಾದ ಕೊನೆಗೂ ತಾರ್ಕಿಕ ಅಂತ್ಯ ಕಂಡಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಸಚಿವರ ಪದತ್ಯಾಗಕ್ಕೆ ಆಗ್ರಹಿಸಿ ದೇಶದಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿದ್ದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರು, ಈ ನಿರ್ಧಾರವು ತಮಗೆ ಯಾವುದೇ ರೀತಿಯ ವೈಯಕ್ತಿಕ ಪ್ರತಿಷ್ಠೆಯ ವಿಷಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್‌ ಹೇಳಿದ್ದೇನು?

ರಾಜೀನಾಮೆ ನೀಡಿದ ಬಳಿಕ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ಧರ್ಮೇಂದ್ರ ಪ್ರಧಾನ್, ಕಳೆದ ನಾಲ್ಕು ದಶಕಗಳಿಂದ ತಾವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿರುವುದಾಗಿ ಹೇಳಿದ್ದಾರೆ. ಬಲಿಷ್ಠ ದೇಶದ ನಿರ್ಮಾಣಕ್ಕೆ ದೃಢವಾದ ಮತ್ತು ಒಳಗೊಳ್ಳುವಿಕೆಯ ಶಿಕ್ಷಣ ವ್ಯವಸ್ಥೆ ಅಗತ್ಯ ಎಂದು ತಾವು ನಂಬಿರುವುದಾಗಿ ತಿಳಿಸಿರುವ ಅವರು, ದೇಶದ ಯುವ ಪೀಳಿಗೆಯ ಕನಸುಗಳನ್ನು ನನಸು ಮಾಡುವುದು ತಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನದ ನೈತಿಕ ಬದ್ಧತೆಯಾಗಿದೆ ಎಂದಿದ್ದಾರೆ. ಇದೇ ವೇಳೆ ತಮಗೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಮಂತ್ರಿಯವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೇ 3 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರ್ಕಾರವು ಎಚ್ಚೆತ್ತುಕೊಂಡು ಸಮಗ್ರ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು ಹಾಗೂ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಯ ದಿನಾಂಕವನ್ನು ಘೋಷಿಸಿತ್ತು ಎಂದು ಪ್ರಧಾನ್ ನೆನಪಿಸಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಸಂಪೂರ್ಣವಾಗಿ ಗಣಕೀಕೃತ (Computer-Based Test) ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳ ಸಮನ್ವಯದೊಂದಿಗೆ ಜೂನ್ 21 ರಂದು ಮರು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಮತ್ತು ಜುಲೈ 16 ರಂದು ಪ್ರಕಟವಾದ ಫಲಿತಾಂಶವು ತೃಪ್ತಿದಾಯಕವಾಗಿದ್ದು, ಬಡತನದ ಹಿನ್ನೆಲೆಯುಳ್ಳ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಮೊದಲ ದಿನದಿಂದಲೇ ತಾವು ಈ ಇಡೀ ಪರಿಸ್ಥಿತಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಗಿಯೂ ಮತ್ತು ಯಾವುದೇ ಹಂತದಲ್ಲೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದೂ ಪ್ರಧಾನ್ ಹೇಳಿದ್ದಾರೆ. ಪರೀಕ್ಷಾ ಮಾಫಿಯಾಗಳಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದು ಹಾಗೂ ಯಾರಿಗೂ ಅನ್ಯಾಯವಾಗಬಾರದು ಎಂಬುದು ತಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವ ಕೆಲವು ವ್ಯಕ್ತಿಗಳೇ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಮತ್ತು ಅಡ್ಡಿ ಆತಂಕಗಳನ್ನು ಸೃಷ್ಟಿಸಲು ಯತ್ನಿಸಿದ್ದು ತಮಗೆ ತೀವ್ರ ಮನಸ್ತಾಪ ಉಂಟುಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ದೇಶವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ತಡೆಯಲು, ದೇಶದ ಒಗ್ಗಟ್ಟನ್ನು ಕಾಪಾಡಲು ಹಾಗೂ ಭಾರತದ ಯಾವುದೇ ವಿದ್ಯಾರ್ಥಿಯ ಭವಿಷ್ಯವು ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕದೆ ಅವರು ನೆಮ್ಮದಿಯಿಂದ ಓದಿನ ಕಡೆ ಗಮನಹರಿಸುವಂತಾಗಲು ತಾವು ರಾಜೀನಾಮೆ ನೀಡುತ್ತಿರುವುದಾಗಿ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಪ್ರಧಾನ ಮಂತ್ರಿಯವರ ಮಾರ್ಗದರ್ಶನ ಮತ್ತು ಸಹೋದ್ಯೋಗಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸಿರುವ ಅವರು, ಮುಂದಿನ ದಿನಗಳಲ್ಲೂ ಜಗನ್ನಾಥನ ಆಶೀರ್ವಾದದೊಂದಿಗೆ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಶಕ್ತಿಯ ಸೇವೆಗಾಗಿ ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಕರೆ: ಮನೆ ಮನೆಗಳಲ್ಲೂ ಮಣ್ಣಿನ ಗಣಪನನ್ನೇ ಕೂರಿಸಿ, ಪಿಒಪಿ ಮೂರ್ತಿಗಳಿಗೆ ಹೇಳಿ ಬೈ-ಬೈ!

Leave a Reply

Your email address will not be published. Required fields are marked *