ನವದೆಹಲಿ: ಮುಂಬರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, (Narendra Modi) ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸ್ಥಳೀಯ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ (Eco-Friendly Ganesha) ಪ್ರತಿಷ್ಠಾಪಿಸಿ ಪೂಜಿಸುವಂತೆ ಮನವಿ ಮಾಡಿದ್ದಾರೆ.
ಪಿಒಪಿ ಹಾಗೂ ವಿದೇಶಿ ಮೂರ್ತಿಗಳಿಗೆ ಬ್ರೇಕ್ ಹಾಕಿ
ಭಾನುವಾರ ಪ್ರಸಾರವಾದ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ (Mann Ki Baat) 136ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ, ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಗಣೇಶನ ವಿಗ್ರಹಗಳನ್ನು ಬಳಸದಂತೆ ಜನರಲ್ಲಿ ವಿನಂತಿಸಿದರು. ಬದಲಿಗೆ, ನಮ್ಮದೇ ನೆಲದ ಮಣ್ಣಿನಿಂದ ಸ್ಥಳೀಯ ಕುಶಲಕರ್ಮಿಗಳು ತಯಾರಿಸುವ ಮೂರ್ತಿಗಳಿಗೆ ಆದ್ಯತೆ ನೀಡಬೇಕು ಎಂದರು.
ಜನಾಂದೋಲನವಾಗಿ ಮಾರ್ಪಟ್ಟ ಪ್ರಧಾನಿ ಕರೆ
“ಕಳೆದ ಬಾರಿಯ ಮನ್ ಕಿ ಬಾತ್ ಸಂಚಿಕೆಯಲ್ಲೂ ನಾನು ಮಣ್ಣಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವಂತೆ ಕೋರಿದ್ದೆ. ಇದಕ್ಕೆ ದೇಶಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅನೇಕ ನಾಗರಿಕರು ನನಗೆ ಸಂದೇಶಗಳನ್ನು ಕಳುಹಿಸಿದ್ದು, ಈ ಬಾರಿಯೂ ಸ್ಥಳೀಯ ಮಣ್ಣಿನ ಗಣಪನನ್ನೇ ಆರಾಧಿಸುವ ಸಂಕಲ್ಪ ಮಾಡಿರುವುದಾಗಿ ಬರೆದುಕೊಂಡಿದ್ದಾರೆ. ಸರಿಯಾದ ಸಮಯದಲ್ಲಿ ನೀಡಿದ ಈ ಕರೆ, ಪರಿಸರ ರಕ್ಷಣೆಗೆ ಪೂರಕವಾದ ನಿರ್ಧಾರ ಕೈಗೊಳ್ಳಲು ಜನರಿಗೆ ನೆರವಾಗಿದೆ” ಎಂದು ಪಿಎಂ ಮೋದಿ ಹರ್ಷ ವ್ಯಕ್ತಪಡಿಸಿದರು.
ಪ್ರಕೃತಿ ಆರಾಧನೆಗೆ ಸಿಗಲಿ ಒತ್ತು
ತಮ್ಮ ಮನವಿಯನ್ನು ಪುನರುಚ್ಚರಿಸಿದ ಪ್ರಧಾನಿ, “ಈ ಬಾರಿಯ ಗಣೇಶೋತ್ಸವದಲ್ಲೂ ನಿಮ್ಮ ಮನೆಗಳಲ್ಲಿ ಸ್ಥಳೀಯವಾಗಿ ಮಣ್ಣಿನಿಂದ ಸಿದ್ಧಪಡಿಸಿದ ವಿಗ್ರಹಗಳನ್ನೇ ಪ್ರತಿಷ್ಠಾಪಿಸಿ. ಪರಿಸರ ಸ್ನೇಹಿ ಗಣೇಶನ ಆರಾಧನೆಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ನಾವು ಪ್ರಕೃತಿಗೆ ಸಲ್ಲಿಸುವ ನಿಜವಾದ ಗೌರವ ಹಾಗೂ ಆರಾಧನೆಯ ರೂಪವಾಗಿರುತ್ತದೆ” ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಹೊಸ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಪಯಣ
