TOP NEWS

CT Ravi: “ಮೊದಲು ಎಫ್‌ಐಆರ್ ಕೊಡಿ, ಆಮೇಲೆ ನೋಟಿಸ್!” – ಪೊಲೀಸರ ವಿರುದ್ಧ ಗುಡುಗಿದ ಬಿಜೆಪಿ ನಾಯಕ ಸಿ.ಟಿ.ರವಿ!

Show Me the FIR First CT Ravi Refuses Police Notice Cops Paste It on Wall Amid Huge Protests

ಚಿಕ್ಕಮಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ (CT Ravi) ಅವರ ನಿವಾಸದ ಬಳಿ ಹೈಡ್ರಾಮಾ ನಡೆದಿದ್ದು, ಪೊಲೀಸರು ನೀಡಲು ಬಂದಿದ್ದ ನೋಟಿಸ್ ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ. ಕೊನೆಗೆ ಪೊಲೀಸರು ನೋಟಿಸ್ ಪ್ರತಿಯನ್ನು ಅವರ ಮನೆಯ ಗೋಡೆಗೆ ಅಂಟಿಸಿ ಜಾಗ ಖಾಲಿ ಮಾಡಿದ್ದು, ಸಿ.ಟಿ.ರವಿ ಬೆಂಬಲಿಗರು ಅದನ್ನು ತಕ್ಷಣವೇ ಕಿತ್ತೆಸೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲು ಪೊಲೀಸರು ಚಿಕ್ಕಮಗಳೂರಿನಲ್ಲಿರುವ ಸಿ.ಟಿ.ರವಿ ಅವರ ಮನೆಗೆ ತೆರಳಿದ್ದರು. ಆದರೆ ಈ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ.ರವಿ, “ನನ್ನ ಮೇಲೆ ಯಾವ ಸೆಕ್ಷನ್ ಹಾಕಿದ್ದೀರಾ? ಮೊದಲು ಎಫ್‌ಐಆರ್ ಕಾಪಿ ಕೊಡಿ, ಆಮೇಲೆ ನೋಟಿಸ್ ಮಾತನಾಡೋಣ. ತನಿಖಾಧಿಕಾರಿಯನ್ನು ಬಿಟ್ಟು ಬೇರೆ ಪೊಲೀಸರನ್ನು ಯಾಕೆ ಕಳುಹಿಸಿದ್ದೀರಾ? ಪ್ರತಿಯೊಬ್ಬರ ಮನೆಗೂ ಪೊಲೀಸರು ಇದೇ ರೀತಿ ಹೋಗ್ತಾರಾ?” ಎಂದು ಖಾರವಾಗಿ ಪ್ರಶ್ನಿಸಿ ನೋಟಿಸ್ ಹಿಂತಿರುಗಿಸಿದರು.

ಮಾಜಿ ಸಚಿವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೊದಲ ತಂಡ ವಾಪಸ್ ಹೋದ ಬೆನ್ನಲ್ಲೇ, ನಗರ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಅವರೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿದರು. ತನಿಖಾಧಿಕಾರಿಯೇ ಖುದ್ದಾಗಿ ಬಂದರೂ ಸಿ.ಟಿ.ರವಿ ನೋಟಿಸ್ ಪಡೆದುಕೊಳ್ಳಲು ಒಪ್ಪದಿದ್ದಾಗ, “ಅವರಿಗೆ ನೋಟಿಸ್ ಬೇಡವಂತೆ” ಎಂದು ಹೇಳಿದ ಇನ್ಸ್ಪೆಕ್ಟರ್ ನೇತೃತ್ವದ ತಂಡ ಅನಿವಾರ್ಯವಾಗಿ ನೋಟಿಸ್ ಅನ್ನು ಮನೆಯ ಗೋಡೆಗೆ ಅಂಟಿಸಿ ಅಲ್ಲಿಂದ ಹೊರಟಿತು.

ಪೊಲೀಸರು ತೆರಳುತ್ತಿದ್ದಂತೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಮತ್ತು ಸಿ.ಟಿ.ರವಿ ಅಭಿಮಾನಿಗಳು ಮನೆಯ ಗೋಡೆಗೆ ಅಂಟಿಸಲಾಗಿದ್ದ ನೋಟಿಸ್ ಅನ್ನು ತಕ್ಷಣವೇ ಹರಿದು ಹಾಕಿದರು. ಅಲ್ಲದೆ, ಸ್ಥಳದಲ್ಲೇ ಜಮಾಯಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದಾಗಿ ಸಿ.ಟಿ.ರವಿ ನಿವಾಸದ ಸುತ್ತಮುತ್ತ ರಾಜಕೀಯ ಉದ್ವಿಗ್ನತೆ ಉಂಟಾಗಿದೆ.

ಮಾಜಿ ಸಚಿವ ಸಿ.ಟಿ.ರವಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಲು ಕಾರಣವಾದ ಅವರ ವಿವಾದಾತ್ಮಕ ಭಾಷಣದ ವಿವರ ಹಾಗೂ ದೂರಿನ ಹಿನ್ನೆಲೆ ಇಲ್ಲಿದೆ.

ಸಿ.ಟಿ. ರವಿ ಆಡಿದ್ದ ಮಾತೇನು?

ದೆಹಲಿಯ ಸಂಸತ್ ಭವನದ ಬಳಿ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದಿದ್ದ ಪ್ರತಿಭಟನೆಗಳ ವಿರುದ್ಧ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದರು. “ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಅವರ ಎದೆ ಸೀಳಿದರೆ ಮೂರು ಅಕ್ಷರವೂ ಇಲ್ಲ, ಅಂತಹವರು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳುತ್ತಾ, ‘ಮೋದಿ ಹಠಾವೋ’ ಎನ್ನುತ್ತಿದ್ದಾರೆ. ಅವರಿಗೂ ನೀಟ್ ಪೇಪರ್ ಲೀಕ್‌ಗೂ ಏನು ಸಂಬಂಧ? ಭಾರತ ವಿರೋಧಿಗಳು ಮತ್ತು ‘ತುಕ್ಡೆ ಗ್ಯಾಂಗ್’ಗಳು ಅಲ್ಲಿ ಬಂದು ಮಾತನಾಡುತ್ತಿವೆ. ದೇಶ ವಿರೋಧಿ ಘೋಷಣೆ ಕೂಗಿದ ತುಕ್ಡೆ ಗ್ಯಾಂಗ್‌ಗಳೇ ಈ ಹೋರಾಟದಲ್ಲಿ ಭಾಗವಹಿಸುತ್ತಿವೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದರು.

ಮಸೀದಿ ಅಧ್ಯಕ್ಷರಿಂದ ಪೊಲೀಸ್ ದೂರು

ಸಿ.ಟಿ. ರವಿ ಅವರ ಈ ಹೇಳಿಕೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಸಮಾಜದಲ್ಲಿ ದ್ವೇಷ ಹಾಗೂ ಅಶಾಂತಿ ಹರಡುವ ಉದ್ದೇಶದಿಂದಲೇ ಈ ರೀತಿ ಮಾತನಾಡಲಾಗಿದೆ ಎಂದು ಚಿಕ್ಕಮಗಳೂರಿನ ಜಾಮೀಯ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ಸಮುದಾಯವನ್ನು ನಿಂದಿಸಿ ದ್ವೇಷಪೂರಿತ ಭಾಷಣ (Hate Speech) ಮಾಡಿರುವ ಸಿ.ಟಿ. ರವಿ ಅವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕ್ರಮ‌

Leave a Reply

Your email address will not be published. Required fields are marked *