ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಪಕ್ಷದ ವತಿಯಿಂದ ದೇಣಿಗೆಯಾಗಿ ನೀಡಲಾಗಿದ್ದ 4 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯು ನಾಪತ್ತೆಯಾಗಿದೆ ಎಂದು ಶಿವಸೇನೆ (UBT) ಸಂಸದ ಸಂಜಯ್ ರಾವುತ್ (Sanjay Raut) ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಸೂಕ್ತ ಜವಾಬ್ದಾರಿ ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಅವರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ರಾವುತ್, ಮಂದಿರ ನಿರ್ಮಾಣದ ಸಂದರ್ಭದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸಾವಿರಾರು ಶಿವಸೈನಿಕರು ಹಾಗೂ ಸಾಧು-ಸಂತರ ಸಮ್ಮುಖದಲ್ಲಿ ಬರೋಬ್ಬರಿ ೧ ಕೋಟಿ ರೂಪಾಯಿ ನಗದು ಹಣ ಹಾಗೂ ಈ ಪವಿತ್ರ ಬೆಳ್ಳಿಯ ಇಟ್ಟಿಗೆಯನ್ನು ದೇವಸ್ಥಾನಕ್ಕೆ ಅರ್ಪಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಆದರೆ, ಈ ಕಾಣಿಕೆಯನ್ನು ಸ್ವೀಕರಿಸಿರುವ ಬಗ್ಗೆ ಟ್ರಸ್ಟ್‌ನಿಂದ ಇದುವರೆಗೆ ಯಾವುದೇ ಅಧಿಕೃತ ಸ್ವೀಕೃತಿ (Receipt) ಅಥವಾ ಮಾಹಿತಿ ಸಿಕ್ಕಿಲ್ಲ. ವರ್ಷಗಳು ಕಳೆದರೂ ಆ ಪವಿತ್ರ ಇಟ್ಟಿಗೆ ಎಲ್ಲಿ ಹೋಯಿತು ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಹೀಗಾಗಿ ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಿ ಹೊಣೆಗಾರರನ್ನು ಪತ್ತೆಹಚ್ಚುವ ಸಮಯ ಬಂದಿದೆ ಎಂದು ಅವರು ಗುಡುಗಿದ್ದಾರೆ.
ರಾಮಮಂದಿರ ದೇಣಿಗೆ ಹಗರಣ: ಬಿಜೆಪಿ ವಿರುದ್ಧ ಹರಿಹಾಯ್ದ ರಾವುತ್
ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರು ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮರುದಿನವೇ ಈ ಬೆಳ್ಳಿ ಇಟ್ಟಿಗೆ ನಾಪತ್ತೆ ಆರೋಪ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹಗರಣದ ಹಿಂದೆ ಇರುವವರ ವಿರುದ್ಧ ಸರ್ಕಾರ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕೆ ಬಂದಿರುವ ದೇಣಿಗೆಯಲ್ಲಿ ಭಾರಿ ಪ್ರಮಾಣದ ಹಣ ದುರುಪಯೋಗವಾಗಿದೆ ಎಂಬ ಆರೋಪದ ಮೇಲೆ ಈಗಾಗಲೇ ತನಿಖೆ ನಡೆಯುತ್ತಿರುವಾಗಲೇ ಸಂಜಯ್ ರಾವುತ್ ಅವರ ಈ ಹೇಳಿಕೆ ಹೊರಬಿದ್ದಿದೆ.
“Serious questions over the missing 4 kg silver brick donated by Shiv Sena for the Ram Mandir construction in Ayodhya.
— Sanjay Raut (@rautsanjay61) June 26, 2026
Uddhav Thackeray ji had generously contributed ₹1 crore + this sacred silver brick in the presence of thousands of Shiv Sainiks & saints. Yet, years later, no… pic.twitter.com/fy1HoTTg3n
ರಾಮಮಂದಿರದ ದೇಣಿಗೆಯಿಂದ ಸುಮಾರು ೭ ರಿಂದ ೭.೫ ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಅವರು ಗಂಭೀರ ಆರೋಪ ಮಾಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಜೂನ್ ೧೪ ರಂದು ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಈ ಎಸ್‌ಐಟಿ ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಕೃಷ್ಣ ಮೋಹನ್ ಅವರು ನೀಡಿದ ದೂರಿನನ್ವಯ ಗುರುವಾರ ಪೊಲೀಸರು ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದೇಣಿಗೆ ಹಗರಣದ ಬೆನ್ನಲ್ಲೇ ಈಗ ಬೆಳ್ಳಿ ಇಟ್ಟಿಗೆ ನಾಪತ್ತೆ ಪ್ರಕರಣವೂ ಮುಂಚೂಣಿಗೆ ಬಂದಿದೆ.
ಇದನ್ನೂ ಓದಿ: ಔಷಧ ವಲಯಕ್ಕೆ ಹೈಟೆಕ್ ಕಾವಲು: ವ್ಯಾಕ್ಸಿನ್, ಕ್ಯಾನ್ಸರ್ ಔಷಧಿಗಳಿಗೂ ಕಡ್ಡಾಯವಾಗಲಿದೆ ಕ್ಯುಆರ್ ಕೋಡ್
