TOP NEWS

BMRCL: ಬಿಡಿಎ ಸಸಿ ನೆಡುವ ಕಾರ್ಯಕ್ರಮ: ವಿಶೇಷ ಮೆಟ್ರೋ ಸೇವೆ

Attention Namma Metro Passengers Fines Hiked by 400 for Rule Violations

ಬೆಂಗಳೂರು: ಮೆಟ್ರೋ ರೈಲು ನಿಗಮ ನಿಯಮಿತ (BMRCL) ವತಿಯಿಂದ 2026ರ ಜೂನ್‌ 27ರ ಶನಿವಾರ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿರುವ ಬಿಡಿಎ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಮುಂಜಾನೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸುಲಭವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪುವ ಉದ್ದೇಶದಿಂದ, ನಮ್ಮ ಮೆಟ್ರೋ ಎಲ್ಲಾ ಮಾರ್ಗಗಳ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 4:00 ಗಂಟೆಗೆ ರೈಲು ಸಂಚಾರವನ್ನು ಆರಂಭಿಸಲಿದೆ. ಇದು ಸಾಮಾನ್ಯ ಶನಿವಾರದ ಬೆಳಿಗ್ಗೆ 5:00 ಗಂಟೆಯ ಸೇವೆಗಿಂತ ಒಂದು ಗಂಟೆ ಮುಂಚಿತವಾಗಿರುತ್ತದೆ.

ಸಾರ್ವಜನಿಕರು ಈ ವಿಶೇಷ ಮುಂಜಾನೆ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಂಡು, ಬಿಡಿಎ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಹಾಗೂ ಸುರಕ್ಷಿತ, ಸುಗಮ ಮತ್ತು ಪರಿಸರ ಸ್ನೇಹಿ ಮೆಟ್ರೋ ಸೇವೆಯನ್ನು ಬಳಸುವಂತೆ ಬಿಎಂಆರ್‌ಸಿಎಲ್ ವಿನಂತಿಸಿಕೊಳ್ಳುತ್ತದೆ.

ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಕೋರಲಾಗಿದೆ.

ಕೆಂಪೇಗೌಡ ಜಯಂತಿಗೆ ಬಿಡಿಎ ಮೆಗಾ ಪ್ಲಾನ್: ಏಕಕಾಲಕ್ಕೆ 15 ಲಕ್ಷ ಸಸಿ ನೆಟ್ಟು ಗಿನ್ನಿಸ್ ದಾಖಲೆ ಬರೆಯಲು ಭರ್ಜರಿ ಸಿದ್ಧತೆ!

ಜೂನ್ 27 ರಂದು ಆಚರಿಸಲಾಗುವ ನಾಡಪ್ರಭು ಕೆಂಪೇಗೌಡ ಜಯಂತಿಯ ಸ್ಮರಣೀಯ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಇಡೀ ರಾಜಧಾನಿಯನ್ನು ಹಸಿರಾಗಿಸಲು ಬೃಹತ್ ಹೆಜ್ಜೆಯಿಟ್ಟಿದೆ. ನಗರದಾದ್ಯಂತ ವಿವಿಧ ಬಡಾವಣೆಗಳಲ್ಲಿ ಒಂದೇ ದಿನ ಬರೋಬ್ಬರಿ ೧೫ ಲಕ್ಷ ಸಸಿಗಳನ್ನು ನೆಡುವ ಮೂಲಕ ಜಾಗತಿಕ ಮಟ್ಟದ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಬರೆಯಲು ಬಿಡಿಎ ಸಜ್ಜಾಗಿದ್ದು, ಇದಕ್ಕಾಗಿ ಯುದ್ಧೋಪಾದಿಯಲ್ಲಿ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿಗಳ ವಿಶೇಷ ಆಸಕ್ತಿ ಹಾಗೂ ಮಾರ್ಗದರ್ಶನದ ಮೇರೆಗೆ ಈ ಪರಿಸರ ಆಂದೋಲನ ರೂಪಿತಗೊಂಡಿದೆ. ಈ ಪೈಕಿ ಬಿಡಿಎ ನಿರ್ಮಿಸಿರುವ ಅತ್ಯಂತ ದೊಡ್ಡ ಬಡಾವಣೆಯಾದ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲೇ ಒಟ್ಟು ೫ ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಇನ್ನುಳಿದ ೧೦ ಲಕ್ಷ ಸಸಿಗಳನ್ನು ಬನಶಂಕರಿ ೬ನೇ ಹಂತ ಸೇರಿದಂತೆ ಪ್ರಾಧಿಕಾರದ ಇತರೆ ವಸತಿ ಬಡಾವಣೆಗಳು, ಉದ್ಯಾನವನಗಳು ಹಾಗೂ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಜೋಡಿಸುವ ಪ್ರಮುಖ ಸಂಪರ್ಕ ರಸ್ತೆಗಳ ಇಕ್ಕೆಲಗಳಲ್ಲಿ ನೆಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ.

ಮನೆ ಮನೆಗೆ ಸಿಗಲಿದೆ ಆಯುರ್ವೇದ ಗಿಡ: ‘ಒಂದು ಮನೆ, ಒಂದು ಔಷಧೀಯ ಸಸ್ಯ’ ಪರಿಕಲ್ಪನೆ

ಈ ಬಾರಿ ಕೇವಲ ಪ್ರದರ್ಶನದ ಗಿಡಗಳನ್ನು ನೆಡುವುದಕ್ಕೆ ಸೀಮಿತವಾಗದೆ, ಪರಿಸರ ಸಮತೋಲನ ಕಾಪಾಡುವ ಮತ್ತು ಜೀವವೈವಿಧ್ಯತೆಗೆ ಪೂರಕವಾದ ದೇಶೀಯ ಹಾಗೂ ಹಣ್ಣು ಬಿಡುವ ಗಿಡಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಮಾವು, ಹಲಸು, ಬೇವು, ಸಪೋಟ ಸೇರಿದಂತೆ ಸುಮಾರು ೩೫೦ಕ್ಕೂ ಹೆಚ್ಚು ವೈವಿಧ್ಯಮಯ ಸ್ಥಳೀಯ ಹಾಗೂ ಅಪರೂಪದ ಆಯುರ್ವೇದ ಗುಣ ಹೊಂದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಸತಿ ಪ್ರದೇಶಗಳಲ್ಲಿ ಪರಿಸರ ಕಾಳಜಿ ಮೂಡಿಸಲು ‘ಒಂದು ಮನೆ, ಒಂದು ಔಷಧೀಯ ಸಸ್ಯ’ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಬಿಡಿಎ ಪರಿಚಯಿಸುತ್ತಿದ್ದು, ಇದರಿಂದ ಪ್ರತಿ ಮನೆಯೂ ಹಸಿರು ಅಭಿಯಾನದ ಭಾಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ಅಧ್ಯಕ್ಷರ ಹೇಳಿಕೆ: “ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಕೆಂಪೇಗೌಡ ಜಯಂತಿಯ ಪವಿತ್ರ ದಿನದಂದು ಈ ಐತಿಹಾಸಿಕ ಹಸಿರು ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಇಲಾಖೆಯ ಅಧಿಕಾರಿಗಳು ಈಗಾಗಲೇ ಸೂಕ್ತ ಜಾಗಗಳ ಪರಿಶೀಲನೆ ನಡೆಸುತ್ತಿದ್ದು, ನೆಡಲು ಬೇಕಾದ ಸಸಿಗಳ ಸಂಗ್ರಹಣೆ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳ ಸಕ್ರಿಯ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಬೃಹತ್ ಕಾರ್ಯಕ್ರಮವು ಯಶಸ್ವಿಯಾಗಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಲಿದೆ ಎಂಬ ಅಚಲ ವಿಶ್ವಾಸ ನಮಗಿದೆ” ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಅನರ್ಹರು, ಮೃತರ ಖಾತೆಗೆ ಹಣ ವರ್ಗಾವಣೆ ಆರೋಪಕ್ಕೆ ಬ್ರೇಕ್: ಗೃಹಲಕ್ಷ್ಮಿ ಯೋಜನೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಧಿಕೃತ ಸ್ಪಷ್ಟನೆ!

Leave a Reply

Your email address will not be published. Required fields are marked *