Vijay: ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ನೇಮಕ ಆದೇಶ ಹಿಂದಕ್ಕೆ

Vijay walks back appointment of astrologer Rickey Vettrivel as OSD

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಜ್ಯೋತಿಷಿಯ ನೇಮಕಾತಿ ವಿವಾದಕ್ಕೆ ಕೊನೆಗೂ ತೆರೆಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರು ತಮ್ಮ ಆಪ್ತ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (OSD) ನೇಮಿಸಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ಮೂಢನಂಬಿಕೆಗೆ ಮಣೆ ಹಾಕಿದ್ದಕ್ಕೆ ಮಿತ್ರಪಕ್ಷಗಳ ಆಕ್ರೋಶ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಸಿಕೆ (VCK) ಮತ್ತು ಎಡಪಕ್ಷಗಳು ಈ ನೇಮಕಾತಿಯನ್ನು ಕಟುವಾಗಿ ಟೀಕಿಸಿದ್ದವು. ಸರ್ಕಾರವು ವೈಜ್ಞಾನಿಕ ಮನೋಭಾವನೆ ಮತ್ತು ವೈಚಾರಿಕತೆಗೆ ಆದ್ಯತೆ ನೀಡಬೇಕೇ ಹೊರತು ಜ್ಯೋತಿಷ್ಯದಂತಹ ನಂಬಿಕೆಗಳನ್ನಲ್ಲ ಎಂದು ಮಿತ್ರಪಕ್ಷಗಳ ನಾಯಕರು ವಾದಿಸಿದ್ದರು. ಸಾರ್ವಜನಿಕರ ತೆರಿಗೆ ಹಣದಲ್ಲಿ ಜ್ಯೋತಿಷಿಯೊಬ್ಬರಿಗೆ ಸರ್ಕಾರಿ ಹುದ್ದೆ ನೀಡುವುದು ತಪ್ಪು ಮಾದರಿಯಾಗುತ್ತದೆ ಮತ್ತು ಇದು ಸಮಾಜದಲ್ಲಿ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಈ ಪಕ್ಷಗಳ ಅಭಿಪ್ರಾಯವಾಗಿತ್ತು.

ಯುವ ಸಮೂಹಕ್ಕೆ ತಪ್ಪು ಸಂದೇಶ: ಪ್ರೇಮಲತಾ ವಿಜಯಕಾಂತ್ ಇತ್ತ ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯಕಾಂತ್ ಕೂಡ ಸಿಎಂ ವಿಜಯ್ ಅವರ ನಡೆಯನ್ನು ಪ್ರಶ್ನಿಸಿದ್ದರು. “ನಿಮ್ಮನ್ನು ನಂಬಿ ಮತ ಹಾಕಿದ ಯುವ ಪೀಳಿಗೆಗೆ ನೀವು ಯಾವ ರೀತಿಯ ಸಂದೇಶ ನೀಡುತ್ತಿದ್ದೀರಿ?” ಎಂದು ಅವರು ಆಕ್ರೋಶ ಹೊರಹಾಕಿದ್ದರು. ಜ್ಯೋತಿಷಿಗಳು ವೈಯಕ್ತಿಕವಾಗಿ ಗುರುಗಳಾಗಿರಲಿ, ಆದರೆ ಅವರನ್ನು ಸರ್ಕಾರದ ಆಡಳಿತದ ಭಾಗ ಮಾಡುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದರು. ಈ ನೇಮಕಾತಿಯು ಹಳೆಯ ಕಾಲದ ರಾಜಕೀಯ ಪದ್ಧತಿಗಳನ್ನು ನೆನಪಿಸುತ್ತಿದೆ ಎಂದು ಹಲವರು ವ್ಯಂಗ್ಯವಾಡಿದ್ದರು.

ವಿರೋಧಕ್ಕೆ ಮಣಿದು ಆದೇಶ ವಾಪಸ್ ವಿಶ್ವಾಸಮತ ಯಾಚನೆಯ ಸಮಯದಲ್ಲಿಯೇ ಈ ವಿವಾದ ವಿಶ್ವರೂಪ ಪಡೆದಿದ್ದರಿಂದ, ಮುಖ್ಯಮಂತ್ರಿ ವಿಜಯ್ ಅವರು ನೇಮಕಾತಿ ಬಗ್ಗೆ ಮರುಚಿಂತನೆ ನಡೆಸುವ ಸುಳಿವು ನೀಡಿದ್ದರು. ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ವ್ಯಕ್ತವಾದ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಿದ ಅವರು, ಅಂತಿಮವಾಗಿ ವೆಟ್ರಿವೇಲ್ ಅವರ ನೇಮಕಾತಿಯನ್ನು ರದ್ದುಪಡಿಸಿದ್ದಾರೆ. ಈ ಮೂಲಕ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಎದುರಾದ ದೊಡ್ಡ ವಿವಾದವೊಂದನ್ನು ವಿಜಯ್ ಶಾಂತಗೊಳಿಸಿದ್ದಾರೆ.

ಇದನ್ನೂ ಓದಿ: ಜೈಲಿನ ಅನುಭವ ನಿಮಗೂ ಬೇಕಾ? ಇಲ್ಲಿದೆ ಅವಕಾಶ

Leave a Reply

Your email address will not be published. Required fields are marked *