ಹೈದರಾಬಾದ್: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ತೆರೆಯ ಮೇಲಿನ ಜೋಡಿಗಳಲ್ಲೊಂದಾದ ನಾಗಾರ್ಜುನ್ ಮತ್ತು ಟಬು ಜೋಡಿ ದಶಕಗಳ (Tollywood) ಬಳಿಕ ಮತ್ತೆ ಒಂದಾಗುತ್ತಿದೆ. ಟಾಲಿವುಡ್ ಮನ್ಮಥ ನಾಗಾರ್ಜುನ್ ಅವರ ವೃತ್ತಿಜೀವನದ ಮೈಲಿಗಲ್ಲಿನ 100ನೇ ಚಿತ್ರದಲ್ಲಿ ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸುತ್ತಿದ್ದು, ಸದ್ಯಕ್ಕೆ ಈ ಚಿತ್ರಕ್ಕೆ ‘ಕಿಂಗ್100’ ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ವಿಶೇಷವೆಂದರೆ, ನಾಗಾರ್ಜುನ್ ಮತ್ತು ಟಬು ಬರೋಬ್ಬರಿ 28 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ ಜೋಡಿ, ಈ ಬಾರಿ ಹೊಚ್ಚಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಹೊಸ ಚಿತ್ರದಲ್ಲಿ ನಟಿ ಟಬು ಅವರು ನಾಗಾರ್ಜುನ್ ಎದುರು ಪ್ರಬಲ ಖಳನಾಯಕಿ (ಅಂಟಾಗೊನಿಸ್ಟ್) ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬ ವರದಿಗಳು ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ.
1995ರ ‘ಸಿಸಿಂದ್ರಿ’ ಚಿತ್ರದಲ್ಲಿ ಮೊದಲ ಬಾರಿ ಒಟ್ಟಿಗೆ ನಟಿಸಿದ್ದ ಜೋಡಿ
ನಾಗಾರ್ಜುನ್ ಮತ್ತು ಟಬು ಜೋಡಿಯ ಸಿನಿಮಾ ಪಯಣದ ಇತಿಹಾಸವನ್ನು ತಿರುವಿ ಹಾಕಿದರೆ, ಇವರಿಬ್ಬರು ಮೊದಲು ಒಟ್ಟಿಗೆ ಕಾಣಿಸಿಕೊಂಡಿದ್ದು 1995ರ ‘ಸಿಸಿಂದ್ರಿ’ ಚಿತ್ರದಲ್ಲಿ. ನಾಗಾರ್ಜುನ್ ಅವರ ಪುತ್ರ ಅಖಿಲ್ ಅಕ್ಕಿನೇನಿ ಬಾಲನಟನಾಗಿ ಪಾದಾರ್ಪಣೆ ಮಾಡಿದ್ದ ಈ ಕಾಮಿಡಿ ಚಿತ್ರದಲ್ಲಿ ಟಬು ಅವರು ಅತಿಥಿ ಪಾತ್ರದಲ್ಲಿ ಅಲ್ಪಸಮಯ ಕಾಣಿಸಿಕೊಂಡಿದ್ದರು. ಇದಾದ ಮರುವರ್ಷ ಅಂದರೆ 1996ರಲ್ಲಿ ಕೃಷ್ಣವಂಶಿ ನಿರ್ದೇಶನದಲ್ಲಿ ಮೂಡಿಬಂದ ‘ನಿನ್ನೆ ಪೆಳ್ಳಾಡತಾ’ ಸಿನಿಮಾ ಇವರಿಬ್ಬರ ಕೆಮಿಸ್ಟ್ರಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿತು. ಕೌಟುಂಬಿಕ ಹಿನ್ನೆಲೆಯ ಈ ರೋಮ್ಯಾಂಟಿಕ್ ಡ್ರಾಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಯಶಸ್ಸು ಗಳಿಸಿದ್ದಲ್ಲದೆ, ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. ನಾಗಾರ್ಜುನ್ ಹಾಗೂ ಟಬು ಜೋಡಿಯ ನೈಜ ಅಭಿನಯ ಪ್ರೇಕ್ಷಕರ ಹೃದಯ ಗೆದ್ದಿತ್ತು.
ನಂತರ 1998ರಲ್ಲಿ ಇವಿವಿ ಸತ್ಯನಾರಾಯಣ ನಿರ್ದೇಶನದ ‘ಆವಿಡಾ ಮಾ ಆವಿಡೇ’ ಎಂಬ ಕಾಮಿಡಿ ಸಿನಿಮಾದಲ್ಲಿ ಈ ಜೋಡಿ ಕೊನೆಯ ಬಾರಿಗೆ ಒಟ್ಟಿಗೆ ನಟಿಸಿತ್ತು. ಮದುವೆ, ಗೊಂದಲ ಮತ್ತು ಕೌಟುಂಬಿಕ ಡ್ರಾಮಾವನ್ನು ಹೊಂದಿದ್ದ ಈ ಚಿತ್ರದ ಬಳಿಕ ಇಬ್ಬರೂ ತಮ್ಮದೇ ವೃತ್ತಿಬದುಕಿನಲ್ಲಿ ಬ್ಯುಸಿಯಾದರು. ಟಬು ಅವರು ಹಿಂದಿ ಚಿತ್ರರಂಗದ ಕಡೆಗೆ ಹೆಚ್ಚು ಗಮನ ಹರಿಸಿ, ‘ಮಕ್ಬೂಲ್’, ‘ಹೈದರ್’, ‘ಅಂಧಾಧುನ್’ ಮತ್ತು ‘ಫಿತೂರ್’ ನಂತಹ ಸಿನಿಮಾಗಳ ಮೂಲಕ ಭಾರತದ ಅತ್ಯುತ್ತಮ ನಟಿಯರಲ್ಲಿ ಒಬ್ಬರೆಂದು ಗುರುತಿಸಿಕೊಂಡರು. ಇತ್ತ ನಾಗಾರ್ಜುನ್ ಅವರು ಕೂಡ ವಿಭಿನ್ನ ಸಿನಿಮಾಗಳ ಮೂಲಕ ಟಾಲಿವುಡ್ನ ಕಿಂಗ್ ಆಗಿ ಮುಂದುವರಿದರು.
UPDATE:
— Telugu Chitraalu (@CineChitraalu) July 6, 2026
We all know Tabu is set to reunite with #Nagarjuna after 28 years for his landmark 100th film, Tentatively titled #King100.
Interestingly, #Tabu will be seen in a RARE ANTAGONIST role.
Official updates Starts from Mid July.#NagarjunaAkkineni pic.twitter.com/e6hkd0wLXC
ವಿಲನ್ ಪಾತ್ರದಲ್ಲಿ ಟಬು
ಇದೀಗ 2026ರಲ್ಲಿ ರಾ. ಕಾರ್ತಿಕ್ ನಿರ್ದೇಶನ ಮಾಡಲಿರುವ ಆಕ್ಷನ್ ಎಂಟರ್ಟೈನರ್ ‘ಕಿಂಗ್100’ ಚಿತ್ರದ ಮೂಲಕ ಈ ಜೋಡಿ ಹಳೆಯ ನೆನಪುಗಳನ್ನು ಮರುಕಳಿಸಲು ಸಜ್ಜಾಗಿದೆ. ಈ ಬಾರಿ ಕೇವಲ ಹಳೇ ದಿನಗಳ ರೋಮ್ಯಾನ್ಸ್ ಮಾತ್ರವಲ್ಲದೆ, ಇಬ್ಬರ ನಡುವಿನ ಜಿದ್ದಾಜಿದ್ದಿನ ಕದನವನ್ನು ನೋಡುವ ಸುವರ್ಣಾವಕಾಶ ಪ್ರೇಕ್ಷಕರಿಗೆ ಸಿಗಲಿದೆ. ಟಬು ಅವರ ಖಳನಾಯಕಿ ಪಾತ್ರ ಹಾಗೂ ನಾಗಾರ್ಜುನ್ ಅವರ ನಾಯಕತ್ವದ ಈ ಜುಗಲ್ಬಂದಿ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿಪ್ರಿಯರು.
