ಬೆಂಗಳೂರು: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಆದೇಶವೊಂದು ಈಗ ಹೈಕೋರ್ಟ್ ಅಂಗಳ ತಲುಪಿದೆ. ಕೇಂದ್ರ ಚುನಾವಣಾ ಆಯೋಗದ ಬೃಹತ್ ಅಭಿಯಾನದ ನಡುವೆಯೇ, ಗ್ರೇಟರ್ ಬೆಂಗಳೂರಿನ ಕೆಲವು ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ಮತ್ತೊಂದು ಸಮಾನಾಂತರ ಪರಿಷ್ಕರಣೆ ನಡೆಸಲು ರಾಜ್ಯ ಆಯೋಗ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಪರ್ಯಾಯ SIR ಆದೇಶ ರದ್ದು ಮಾಡಿ
ಬೆಂಗಳೂರಿನ ನಿವಾಸಿಗಳಾದ ವಿವೇಕ್ ಹಾಗೂ ಇತರರು ಈ ಕಾನೂನು ಹೋರಾಟ ಆರಂಭಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಪರ್ಯಾಯ ಎಸ್‌ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗವು ಜೂನ್ 19 ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ಅವರು ಇಂದು (ಜುಲೈ 7) ಈ ವಿಷಯವನ್ನು ಪ್ರಸ್ತಾಪಿಸಿದರು. ಇದು ಅತ್ಯಂತ ತುರ್ತು ಹಾಗೂ ಸಂವೇದನಾಶೀಲ ವಿಷಯವಾಗಿರುವುದರಿಂದ ಶೀಘ್ರ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು, ನಾಳೆಯೇ (ಜುಲೈ 8) ಇದರ ಅಧಿಕೃತ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಕೇಂದ್ರದ ನಿಯಮ ಉಲ್ಲಂಘನೆ: ಅರ್ಜಿದಾರರ ಗಂಭೀರ ಆರೋಪ
ಕೇಂದ್ರ ಸರ್ಕಾರವು ದೇಶದಾದ್ಯಂತ ಎಸ್‌ಐಆರ್ ನಡೆಸುವ ನಿರ್ಧಾರವನ್ನು 2025ರ ಅಕ್ಟೋಬರ್ 27ರಂದೇ ಪ್ರಕಟಿಸಿತ್ತು. ಅದರ ಮಾರ್ಗಸೂಚಿಗಳ ಅನ್ವಯ, ಇತ್ತೀಚೆಗೆ ಅಂದರೆ 2026ರ ಜೂನ್ 16ರಂದು ಕರ್ನಾಟಕದಾದ್ಯಂತ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ‘ಫ್ರೀಜ್’ (ಸ್ಥಗಿತ) ಮಾಡಲಾಗಿತ್ತು. ಆದರೆ, ಇದಾದ ಕೇವಲ ಮೂರೇ ದಿನಗಳಲ್ಲಿ (ಜೂನ್ 19) ರಾಜ್ಯ ಚುನಾವಣಾ ಆಯೋಗವು ಕೇಂದ್ರದ ನಿಯಮಗಳನ್ನು ಕಡೆಗಣಿಸಿ, ಜಿಬಿಎ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಮತ್ತೊಂದು ಪ್ರತ್ಯೇಕ ಮತಪಟ್ಟಿ ಪರಿಷ್ಕರಣೆಗೆ ಆದೇಶಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
‘ಒಂದೇ ಅವಧಿಯಲ್ಲಿ ಎರಡು ಸರ್ವೇ ಗೊಂದಲಕಾರಿ’
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 26ರಿಂದಲೇ ಜಿಬಿಎ ಸೇರಿದಂತೆ ಇಡೀ ರಾಜ್ಯದಾದ್ಯಂತ ಎಸ್‌ಐಆರ್ ಅಡಿಯಲ್ಲಿ ಮನೆ ಮನೆಗೆ ತೆರಳಿ ಸರ್ವೇ ನಡೆಸುವ ಕಾರ್ಯ ಬಿರುಸಿನಿಂದ ಸಾಗಿದೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯ ಚುನಾವಣಾ ಆಯೋಗವೂ ಸಹ ಪ್ರತ್ಯೇಕವಾಗಿ ಮತ್ತೊಂದು ಪರ್ಯಾಯ ಸರ್ವೇಗೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಮತ್ತು ಆಡಳಿತ ಯಂತ್ರದಲ್ಲಿ ತೀವ್ರ ಗೊಂದಲ ಮೂಡಿಸಲಿದೆ. ಮೇಲಾಗಿ, ಈ ಆದೇಶವು ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿರುವುದರಿಂದ, ಈ ಕಾನೂನುಬಾಹಿರ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
