TOP NEWS

Mysuru Dasara: ಮೈಸೂರು ದಸರಾದಲ್ಲಿ ‘ಕಂಬಳ’ ಜಿದ್ದಾಜಿದ್ದಿ: ಸಂಸದ ಯದುವೀರ್ ವಿರೋಧ, ಮನವೊಲಿಕೆಗೆ ಶಾಸಕ ಅಶೋಕ್ ರೈ ಕಸರತ್ತು!

Row over Kambala at Mysuru Dasara MP Yaduveer opposes move

ಮೈಸೂರು: ಕರಾವಳಿಯ ಸಾಂಪ್ರದಾಯಿಕ ಕೆಸರುಗದ್ದೆ ಕ್ರೀಡೆಯಾದ ‘ಕಂಬಳ’ ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಆಯೋಜನೆಗೊಳ್ಳುವ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ತುಳುನಾಡಿನ ಈ ವೈಭವವನ್ನು, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಿಚಯಿಸಲು ವೇದಿಕೆ ಸಿದ್ಧವಾಗುತ್ತಿತ್ತು. ಆದರೆ, ಇದಕ್ಕೆ ಮೈಸೂರು ರಾಜಮನೆತನ ಹಾಗೂ ಸ್ಥಳೀಯ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಈಗ ಹೊಸ ಸಂಚಲನ ಮೂಡಿಸಿದೆ.

ದಸರಾ ಪ್ರಯುಕ್ತ ಎರಡು ದಿನಗಳ ಕಾಲ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ಕಂಬಳವನ್ನು ನಡೆಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಕರಾವಳಿ ಭಾಗದಿಂದ ಸುಮಾರು 120 ಜೋಡಿ ಹೆಸರಾಂತ ಕೋಣಗಳು ಮೈಸೂರಿಗೆ ಬರಬೇಕಿತ್ತು. ಆದರೆ, ರಾಜಮನೆತನದ ಅಸಮಾಧಾನದಿಂದಾಗಿ ಈಗ ಮೈಸೂರಿನಲ್ಲಿ ಕಂಬಳ ನಡೆಯುತ್ತಾ ಇಲ್ವಾ ಎಂಬ ದೊಡ್ಡ ಪ್ರಶ್ನೆ ಎದ್ದಿದೆ.

ಕರಾವಳಿ ಸಂಸ್ಕೃತಿಯನ್ನು ಇಲ್ಲಿ ಹೇರುವುದು ಬೇಡ: ಯದುವೀರ್ ಒಡೆಯರ್ ಕಡಕ್ ವಾದ

ಮೈಸೂರು ದಸರಾದಲ್ಲಿ ಕಂಬಳ ನಡೆಸುವುದಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕಂಬಳ ಕ್ರೀಡೆಗೆ ತನ್ನದೇ ಆದ ಐತಿಹಾಸಿಕ ಗೌರವವಿದೆ ನಿಜ. ಆದರೆ ಮೈಸೂರು ದಸರಾ ಎಂಬುದು ಮೂಲಭೂತವಾಗಿ ಅತ್ಯಂತ ಪವಿತ್ರ ಮತ್ತು ಧಾರ್ಮಿಕ ವಿಧಿವಿಧಾನಗಳಿಂದ ಕೂಡಿದ ಆಚರಣೆಯಾಗಿದೆ. ಇಲ್ಲಿ ಮತ್ತೊಂದು ಭಾಗದ ಕ್ರೀಡೆಯನ್ನು ತರುವುದು ಸರಿಯಲ್ಲ. ಪ್ರಾದೇಶಿಕ ಕಲೆಗಳು ಆಯಾ ಭಾಗದಲ್ಲೇ ವೈಭವದಿಂದ ಆಚರಿಸಲ್ಪಡಬೇಕು. ಮೈಸೂರಿನ ಜನರ ಮೇಲೆ ಕರಾವಳಿ ಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಅಗತ್ಯವಿಲ್ಲ,” ಎಂದು ಅವರು ವಾದಿಸಿದ್ದಾರೆ.

ಅಲ್ಲದೆ, “ಕೇವಲ ಎರಡು ದಿನಗಳ ಪ್ರದರ್ಶನಕ್ಕಾಗಿ 5 ರಿಂದ 8 ಕೋಟಿ ರೂಪಾಯಿಯಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡುವುದು ಅನಗತ್ಯ ದುಂದುವೆಚ್ಚವಾಗುತ್ತದೆ. ಅದರ ಬದಲಿಗೆ ಆ ಬೃಹತ್ ಮೊತ್ತವನ್ನು ಕರಾವಳಿ ಭಾಗದಲ್ಲೇ ಕಂಬಳದ ಅಭಿವೃದ್ಧಿಗೆ ಬಳಸಿ ಇನ್ನಷ್ಟು ಆಕರ್ಷಕವಾಗಿ ಆಯೋಜಿಸಲಿ,” ಎಂದು ಯದುವೀರ್ ಒಡೆಯರ್ ಸಲಹೆ ನೀಡಿದ್ದಾರೆ.

ರಾಜಮನೆತನಕ್ಕೆ ಸತ್ಯ ಮನವರಿಕೆ ಮಾಡಿಕೊಡಲಿದ್ದೇವೆ: ಶಾಸಕ ಅಶೋಕ್ ಕುಮಾರ್ ರೈ ವಿಶ್ವಾಸ

ಇನ್ನೊಂದೆಡೆ, ಕಂಬಳ ಆಯೋಜಕರು ಮತ್ತು ಕರಾವಳಿಯ ನಾಯಕರು ಈ ವಾದವನ್ನು ಒಪ್ಪುತ್ತಿಲ್ಲ. ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರು ಬರುವ ದಸರಾ ವೇದಿಕೆಯಲ್ಲಿ ನಮ್ಮದೇ ರಾಜ್ಯದ ಹೆಮ್ಮೆಯ ಜಾನಪದ ಕ್ರೀಡೆಯನ್ನು ಪ್ರದರ್ಶಿಸುವುದರಿಂದ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗುತ್ತದೆಯೇ ಹೊರತು ಯಾವುದೇ ತಪ್ಪಿಲ್ಲ ಎಂಬುದು ಇವರ ನಿಲುವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, “ಮಾಹಿತಿಯ ಕೊರತೆಯಿಂದಾಗಿ ರಾಜಮನೆತನದವರು ವಿರೋಧಿಸುತ್ತಿದ್ದಾರೆ. ಕಂಬಳವನ್ನು ಯಾರೂ ರಾಜಕೀಯವಾಗಿ ಬಳಸಬಾರದು. ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿ ಸಹಕರಿಸಿ, ಸುಗ್ರೀವಾಜ್ಞೆಯ ಮೂಲಕವೇ ಕಂಬಳಕ್ಕೆ ಕಾನೂನುಬದ್ಧ ರಕ್ಷಣೆ ತಂದುಕೊಟ್ಟಿವೆ. ನಾವು ಶೀಘ್ರದಲ್ಲೇ ಮೈಸೂರು ರಾಜಮನೆತನದವರನ್ನು ಖುದ್ದಾಗಿ ಭೇಟಿ ಮಾಡಿ ಕಂಬಳದ ಮಹತ್ವವನ್ನು ವಿವರಿಸಲಿದ್ದೇವೆ,” ಎಂದಿದ್ದಾರೆ.

ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಸುವಾಗಲೂ ಮೈಸೂರು ಮಹಾರಾಣಿಯವರು ಆರಂಭದಲ್ಲಿ ವಿರೋಧಿಸಿದ್ದರು. ಆದರೆ ಮೈಸೂರು ಸಂಸ್ಥಾನಕ್ಕೂ ಕರಾವಳಿಯ ಸಂಸ್ಕೃತಿಗೂ ಇರುವ ಸಂಬಂಧವನ್ನು ಮನವರಿಕೆ ಮಾಡಿಕೊಟ್ಟಾಗ ಅವರೇ ಒಪ್ಪಿಗೆ ನೀಡಿದ್ದರು ಎಂಬುದನ್ನು ಶಾಸಕರು ನೆನಪಿಸಿಕೊಂಡಿದ್ದಾರೆ. “ಮೈಸೂರಿನ ಜನರಿಗೆ ಕಂಬಳ ನೋಡುವ ಆಸೆ ಇದ್ದರೆ ಮಾತ್ರ ನಾವು ಕಾರ್ಯಕ್ರಮ ಮಾಡುತ್ತೇವೆ. ಸ್ಥಳೀಯರ ಮತ್ತು ಜನರ ತೀವ್ರ ವಿರೋಧದ ನಡುವೆ ಹಠಕ್ಕೆ ಬಿದ್ದು ಬಲವಂತವಾಗಿ ಕಂಬಳ ನಡೆಸುವ ಯಾವುದೇ ಉದ್ದೇಶ ನಮಗಿಲ್ಲ,” ಎಂದು ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎರಡು ಎಸ್‌ಐಆರ್ ಗೊಂದಲ: ರಾಜ್ಯ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಿವಾಸಿಗಳು

Leave a Reply

Your email address will not be published. Required fields are marked *