TOP NEWS

Tamil Nadu: ಟಿವಿಕೆಗೆ ಮತ್ತೊಂದು ಶಾಕ್‌, ಶಾಸಕನಿಗೆ ಸದನದಲ್ಲಿ ಮತ ಹಾಕದಂತೆ ಹೈಕೋರ್ಟ್‌ ತಡೆ

tamil nadu madras high court gives stay to TVK Tirupattur MLA voting big shock to tvk

ಚೆನ್ನೈ: ತಮಿಳುನಾಡು (Tamil Nadu) ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಮದ್ರಾಸ್ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದ ಟಿವಿಕೆ ಶಾಸಕ ಆರ್. ಶ್ರೀನಿವಾಸ ಸೇತುಪತಿ ಅವರು ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳದಂತೆ ನ್ಯಾಯಾಲಯ ಮಂಗಳವಾರ (ಮೇ 12, 2026) ಮಧ್ಯಂತರ ತಡೆಯಾಜ್ಞೆ ನೀಡಿದೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸೂಚನೆಯಂತೆ ಮೇ 13ರೊಳಗೆ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು, ಈ ಹಂತದಲ್ಲಿ ಒಬ್ಬ ಶಾಸಕರು ಮತದಾನದ ಹಕ್ಕು ಕಳೆದುಕೊಂಡಿರುವುದು ಸರ್ಕಾರಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಕೇವಲ ಒಂದು ಮತ ಅಂತರದಿಂದ ಸೋತಿದ್ದ ಪೆರಿಯಕರುಪ್ಪನ್

ಮಾಜಿ ಸಚಿವ ಹಾಗೂ ಡಿಎಂಕೆ ನಾಯಕ ಕೆ.ಆರ್. ಪೆರಿಯಕರುಪ್ಪನ್ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಅವರಿದ್ದ ರಜಾಕಾಲದ ಪೀಠವು ಈ ಆದೇಶ ಹೊರಡಿಸಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪೆರಿಯಕರುಪ್ಪನ್ ಅವರು ಸೇತುಪತಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋತಿದ್ದರು. ಈ ಸೋಲಿಗೆ ಎರಡು ಕ್ಷೇತ್ರಗಳ ಹೆಸರಿನಲ್ಲಿದ್ದ ಗೊಂದಲವೇ ಕಾರಣ ಎಂದು ಅವರು ನ್ಯಾಯಾಲಯದ ಮುಂದೆ ವಾದಿಸಿದ್ದರು. ತಮಿಳುನಾಡಿನಲ್ಲಿ ‘ತಿರುಪತ್ತೂರು’ ಹೆಸರಿನ ಎರಡು ಕ್ಷೇತ್ರಗಳಿದ್ದು, ಶಿವಗಂಗೆ ಜಿಲ್ಲೆಯ ತಿರುಪತ್ತೂರು ಕ್ಷೇತ್ರಕ್ಕೆ ಬರಬೇಕಿದ್ದ ಒಂದು ಅಂಚೆ ಮತವು ಹೆಸರಿನ ಸಾಮ್ಯತೆಯಿಂದಾಗಿ ತಿರುಪತ್ತೂರು ಜಿಲ್ಲೆಯ ಕ್ಷೇತ್ರಕ್ಕೆ ಹೋಗಿತ್ತು. ಮತ ಎಣಿಕೆಯ ದಿನ ಆ ಮತವನ್ನು ಸರಿಯಾದ ಕ್ಷೇತ್ರಕ್ಕೆ ಮರಳಿ ಕಳುಹಿಸದ ಕಾರಣ ತಮಗೆ ಅನ್ಯಾಯವಾಗಿದೆ ಎಂದು ಪೆರಿಯಕರುಪ್ಪನ್ ದೂರಿದ್ದರು.‌

ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವಂತಿಲ್ಲ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಎನ್.ಆರ್. ಇಳಂಗೋ ಅವರು, ಒಂದು ವೇಳೆ ಆ ಅಂಚೆ ಮತವನ್ನು ಶಿವಗಂಗೆ ಜಿಲ್ಲೆಯ ಎಣಿಕೆಗೆ ಸೇರಿಸಿದ್ದರೆ ಇಬ್ಬರೂ ಅಭ್ಯರ್ಥಿಗಳು ಸಮಬಲದ ಮತಗಳನ್ನು ಪಡೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಚುನಾವಣಾ ನಿಯಮದಂತೆ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಬೇಕಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ಮನಗಂಡ ನ್ಯಾಯಾಧೀಶರು, ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಸೇತುಪತಿ ಅವರು ವಿಧಾನಸಭೆಯ ಯಾವುದೇ ಮತದಾನ ಪ್ರಕ್ರಿಯೆಯಲ್ಲಿ ಅಥವಾ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದರು.

ಇದೇ ವೇಳೆ ನ್ಯಾಯಾಲಯವು ಕೆಲವು ಪ್ರಮುಖ ಸ್ಪಷ್ಟನೆಗಳನ್ನು ನೀಡಿದ್ದು, ಈ ತಡೆಯಾಜ್ಞೆಯು ಶಾಸಕರ ಗೆಲುವು ರದ್ದಾಗಿದೆ ಎಂದಾಗಲಿ ಅಥವಾ ಅರ್ಜಿದಾರರೇ ವಿಜೇತರು ಎಂದಾಗಲಿ ಅರ್ಥವಲ್ಲ ಎಂದು ತಿಳಿಸಿದೆ. ಅಲ್ಲದೆ, ಶಿವಗಂಗೆ ಜಿಲ್ಲೆಯ ತಿರುಪತ್ತೂರು ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು, ಅಂಚೆ ಮತಗಳನ್ನು ಹಾಗೂ ಎಣಿಕೆಯ ದಿನದ ವಿಡಿಯೋ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಕಾಯ್ದಿರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾವುದೇ ಕಾರಣಕ್ಕೂ ವಿದ್ಯುನ್ಮಾನ ಸಾಕ್ಷ್ಯಗಳು ನಾಶವಾಗಬಾರದು ಎಂದು ಎಚ್ಚರಿಸಿರುವ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಜೂನ್ 26ಕ್ಕೆ ನಿಗದಿಪಡಿಸಿದೆ. ವಿಶ್ವಾಸಮತ ಯಾಚನೆಯ ಹೊತ್ತಲ್ಲೇ ಬಂದಿರುವ ಈ ತೀರ್ಪು ತಮಿಳುನಾಡು ವಿಧಾನಸಭೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: “ಮೋದಿ ಹೇಳಿದ್ದಾರೆ, ನಾನು ಆಫೀಸ್‌ಗೆ ಬರಲ್ಲ”: ಪ್ರಧಾನಿ ಮನವಿಯನ್ನೇ ನೆಪವಾಗಿಸಿ WFH ಕೇಳಿದ ಯುವತಿಯ ಇಮೇಲ್ ವೈರಲ್!

Leave a Reply

Your email address will not be published. Required fields are marked *