Madhu Bangarappa: ನೀಟ್ ಪರೀಕ್ಷೆ ಅಕ್ರಮ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ, “ವಿದ್ಯಾರ್ಥಿಗಳ ಬದುಕು ಬೀದಿಗೆ” ಎಂದು ಆಕ್ರೋಶ

Minister madhu bangarappa statement about neet paper leak

ಬೆಂಗಳೂರು: ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿರುವ ನೀಟ್ (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಕೇಂದ್ರ ಸರ್ಕಾರದ ಮೇಲೆ ಕಟುವಾದ ಟೀಕಾಪ್ರಹಾರ ನಡೆಸಿದ್ದಾರೆ. ಸತತವಾಗಿ ಎರಡನೇ ವರ್ಷವೂ ಇಂತಹ ಗಂಭೀರ ಲೋಪಗಳು ಸಂಭವಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಿಗೆ ಬರೆ ಎಳೆದಂತಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಅಶೋಕ್ ಅವರಿಗೆ ಸವಾಲು ಹಾಕಿದ ಸಚಿವರು

ರಾಜ್ಯದಲ್ಲಿ ಪರೀಕ್ಷಾ ಅಕ್ರಮ ನಡೆದಿದೆಯೇ ಎಂಬ ಅನುಮಾನಗಳ ಬಗ್ಗೆ ಉತ್ತರಿಸಿದ ಮಧು ಬಂಗಾರಪ್ಪ, ಈ ಬಗ್ಗೆ ಮೊದಲು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನು ಪ್ರಶ್ನಿಸಬೇಕು ಎಂದು ತಿರುಗೇಟು ನೀಡಿದರು. ಕೇಂದ್ರದ ಅಧೀನದಲ್ಲಿ ನಡೆಯುವ ಪರೀಕ್ಷೆಗಳ ಹೊಣೆಗಾರಿಕೆಯನ್ನು ಮರೆತು ಬೇರೆಯವರ ಮೇಲೆ ಬೆರಳು ಮಾಡುವುದು ಸರಿಯಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

“ಕೇಂದ್ರದ ಹೊಲಸು ಆಡಳಿತದಿಂದ ಮಕ್ಕಳಿಗೆ ಅನ್ಯಾಯ”

ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದ ಸಚಿವರು, “ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದುತ್ತಾರೆ. ಆದರೆ ಕೇಂದ್ರದ ಇಂತಹ ಹೊಲಸು ಅಡ್ಮಿನಿಸ್ಟ್ರೇಷನ್‌ನಿಂದಾಗಿ ಅವರೆಲ್ಲ ಇಂದು ಕಂಗಾಲಾಗಿದ್ದಾರೆ. ಕೇವಲ ತಮಟೆ ಹೊಡೆಯುವವರಿಗೆ ಮತ್ತು ದೀಪ ಹಚ್ಚುವವರಿಗೆ ದೇಶದ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ” ಎಂದು ವ್ಯಂಗ್ಯವಾಡಿದರು. ವ್ಯವಸ್ಥೆಯಲ್ಲಿನ ಈ ಅವ್ಯವಸ್ಥೆ ಸರಿಪಡಿಸದಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳು ಅನ್ಯಾಯಕ್ಕೊಳಗಾಗುವುದು ನಿಲ್ಲುವುದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕೇಂದ್ರದ ನಿರ್ಲಕ್ಷ್ಯದಿಂದಾಗಿ ಪರೀಕ್ಷಾ ಪಾವಿತ್ರ್ಯತೆ ಹಾಳಾಗುತ್ತಿದ್ದು, ಇದು ಇಡೀ ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜನರಿಗೆ ಬುದ್ಧಿ ಹೇಳುವ ಮುನ್ನ ನಿಮ್ಮ ಸಚಿವರು ಬಸ್‌ ಹತ್ತಲಿ”: ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್‌ ನೇರ ಸವಾಲು!

Leave a Reply

Your email address will not be published. Required fields are marked *