TOP NEWS

Sandalwood: ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ಹಳೆಯ ನೆನಪು ಹಂಚಿಕೊಂಡ ವಿಜಯಲಕ್ಷ್ಮಿ; ಇತ್ತ ಜಾಮೀನಿಗಾಗಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್

sandalwood vijayalakshmi darshan shares cute photo and darshan plea for supreme court

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಕಾರಾಗೃಹದಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಬೇಲ್ ಪ್ರಕ್ರಿಯೆ ಹಾಗೂ ಅವರ ಕುಟುಂಬದ ಇತ್ತೀಚಿನ ಬೆಳವಣಿಗೆಗಳು ಸಖತ್ ಸದ್ದು ಮಾಡುತ್ತಿವೆ. ಒಂದೆಡೆ ಪತಿಯ ನೆನಪಿನಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಭಾವುಕ ಫೋಟೋ ಹಂಚಿಕೊಂಡಿದ್ದರೆ, ಮತ್ತೊಂದೆಡೆ ಜೈಲಿನಿಂದ (Sandalwood) ಹೊರಬರಲು ನಟ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಹೊಸದಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ.

ಜೈಲಿನಲ್ಲಿರುವ ಪತಿಯ ನೆನಪಿನಲ್ಲಿ ವಿಜಯಲಕ್ಷ್ಮಿ ಪೋಸ್ಟ್

ಜಾಮೀನು ಸಿಗದೆ ದರ್ಶನ್ ಜೈಲಿನಲ್ಲೇ ಇರುವುದರಿಂದ ಕುಟುಂಬದವರು ಅವರನ್ನು ಭೇಟಿಯಾಗಲು ಕಾಯಬೇಕಾದ ಪರಿಸ್ಥಿತಿ ಇದೆ. ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವದಂದು ಮಗ ವಿನೀಶ್ ಜೊತೆ ಜೈಲಿಗೆ ಹೋಗಿ ಪತಿಯನ್ನು ಭೇಟಿಯಾಗಿದ್ದ ವಿಜಯಲಕ್ಷ್ಮಿ, ದರ್ಶನ್ ಅವರನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದರ್ಶನ್ ಅವರೊಂದಿಗಿನ ಹಳೆಯ ರೋಮ್ಯಾಂಟಿಕ್ ಫೋಟೋ ಒಂದನ್ನು ಅವರು ಶೇರ್ ಮಾಡಿದ್ದಾರೆ. ಇದರಲ್ಲಿ ಬಿಳಿ ಶರ್ಟ್ ಧರಿಸಿದ ದರ್ಶನ್ ಅವರ ಹೆಗಲ ಮೇಲೆ ಕೆಂಪು ಟೀಶರ್ಟ್ ಧರಿಸಿರುವ ವಿಜಯಲಕ್ಷ್ಮಿ ತಲೆಯಿಟ್ಟು ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ.

ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಾಸ: ಬೇಲ್‌ಗಾಗಿ ಹೊಸ ವಾದ!

ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಕೇಸ್‌ನ ವಿಚಾರಣೆ ತಡವಾಗುತ್ತಿರುವುದನ್ನು ಮುಂದಿಟ್ಟುಕೊಂಡು ನಟ ದರ್ಶನ್ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. “ಒಂದು ವರ್ಷದವರೆಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಾರದು” ಎಂಬ ಕೋರ್ಟ್‌ನ ಹಿಂದಿನ ಕಟ್ಟುನಿಟ್ಟಿನ ಆದೇಶವನ್ನು ಸಡಿಲಗೊಳಿಸಬೇಕು ಎಂದು ಅವರು ಉನ್ನತ ನ್ಯಾಯಾಲಯಕ್ಕೆ ವಿಶೇಷ ಮನವಿ ಮಾಡಿದ್ದಾರೆ.

ಕಳೆದ ಮೇ 15 ರಂದು ದರ್ಶನ್ ಅವರ ಬೇಲ್ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯಲ್ಲಿ ಪ್ರಗತಿ ಕಾಣದಿದ್ದರೆ ಒಂದು ವರ್ಷದ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ಗಡುವು ನೀಡಿತ್ತು. ಆದರೆ, ಈ ಆದೇಶ ಬಂದ ಕೆಲವೇ ದಿನಗಳಲ್ಲಿ ದರ್ಶನ್ ಸ್ಪಷ್ಟೀಕರಣ ಅರ್ಜಿ ಹಾಕಿದ್ದಾರೆ. ಪ್ರಕರಣದಲ್ಲಿ ಏನಾದರೂ ಹೊಸ ಬೆಳವಣಿಗೆಗಳು ನಡೆದರೆ, ಈ ಒಂದು ವರ್ಷದ ಗಡುವು ತಮಗೆ ತಡೆಯಾಗಬಾರದು (Blanket Restriction) ಎಂಬುದು ಅವರ ವಾದವಾಗಿದೆ.

ಸಾಕ್ಷಿಗಳ ವಿಚಾರಣೆ ವಿಳಂಬ; ದರ್ಶನ್ ಆತಂಕ

ಕೋರ್ಟ್ ಪ್ರಕ್ರಿಯೆಗಳು ಅತ್ಯಂತ ನಿಧಾನವಾಗಿ ಸಾಗುತ್ತಿರುವುದರಿಂದ ತಾವು ದೀರ್ಘಕಾಲ ಜೈಲಿನಲ್ಲೇ ಕೊಳೆಯಬೇಕಾಗುತ್ತದೆ ಎಂದು ದರ್ಶನ್ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಸುದೀರ್ಘ ಬಂಧನದಿಂದಾಗಿ ತಮ್ಮ ಸಿನಿಮಾ ವೃತ್ತಿಜೀವನ ಹಾಗೂ ಕುಟುಂಬಕ್ಕೆ ಭಾರಿ ನಷ್ಟವಾಗಿದೆ. ಅಲ್ಲದೆ, ತಮ್ಮ ತಾಯಿಯವರ ಆರೋಗ್ಯವೂ ತೀರಾ ಹದಗೆಟ್ಟಿದ್ದು, ಇಂತಹ ತುರ್ತು ಸಂದರ್ಭಗಳಲ್ಲಿ ತಮಗೆ ಬೇಲ್ ಕೋರಲು ಮುಕ್ತ ಅವಕಾಶ ಇರಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳ ಪಟ್ಟಿಯನ್ನು ರೆಡಿ ಮಾಡಿದೆ. ಸುಪ್ರೀಂ ಕೋರ್ಟ್ ಮೇ 15ರ ಆದೇಶದಲ್ಲಿ ಪ್ರಮುಖ 60 ಸಾಕ್ಷಿಗಳನ್ನು ಬೇಗ ವಿಚಾರಣೆ ನಡೆಸುವಂತೆ ಹೇಳಿದ್ದರೂ, ಆ ಬಳಿಕ ಕೇವಲ ಇಬ್ಬರು ಸಾಕ್ಷಿಗಳನ್ನು ಮಾತ್ರ ತನಿಖೆ ಮಾಡಲಾಗಿದೆ. ಈ ವೇಗದಲ್ಲಿ ಹೋದರೆ ಕೇಸ್ ಮುಗಿಯಲು ವರ್ಷಗಳೇ ಬೇಕಾಗಬಹುದು ಎಂದು ದರ್ಶನ್ ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಏನಿದು ರೇಣುಕಾಸ್ವಾಮಿ ಕೊಲೆ ಕೇಸ್?

ತಮ್ಮ ಆಪ್ತೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಅಪಹರಿಸಿ ತಂದು ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ. ಈ ಸಂಬಂಧ ಜೂನ್ 11, 2024 ರಂದು ಪೊಲೀಸರು ಅವರನ್ನು ಬಂಧಿಸಿದ್ದರು. ನಂತರ ಹೈಕೋರ್ಟ್‌ನಿಂದ ದರ್ಶನ್‌ಗೆ ಜಾಮೀನು ಸಿಕ್ಕಿತ್ತಾದರೂ, ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಆಗಸ್ಟ್ 14, 2025 ರಂದು ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನನ್ನು ರದ್ದುಗೊಳಿಸಿತ್ತು. ಅಂದಿನಿಂದ ಜೈಲಿನಲ್ಲಿರುವ ದರ್ಶನ್, ಈಗ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಈ ಹೊಸ ಅರ್ಜಿಯ ಫಲಿತಾಂಶ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದ ಕಥೆ ಲೀಕ್? ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!

Leave a Reply

Your email address will not be published. Required fields are marked *