TOP NEWS

MP Renukacharya: ರಾಜ್ಯ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸದ್ದು: ಸದಾನಂದಗೌಡರ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಬಹಿರಂಗ ಆಕ್ರೋಶ!

MP renukacharya reaction regarding dv sadananda gowda audio

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪದಚ್ಯುತಗೊಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ ಬೆನ್ನಲ್ಲೇ, ಕಮಲ ಪಾಳಯದ ಆಂತರಿಕ ಭಿನ್ನಮತ ಮತ್ತೆ ಬೀದಿಗೆ ಬಂದಿದೆ. ಈ ಸ್ಫೋಟಕ ಆಡಿಯೋ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, (MP Renukacharya) ಡಿ.ವಿ. ಸದಾನಂದಗೌಡರ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್‌ವೈ ಕೃಪೆಯಿಂದ ಸಿಎಂ ಆದದ್ದನ್ನು ಮರೆಯಬೇಡಿ!

ವಿಜಯೇಂದ್ರ ವಿರುದ್ಧ ನಡೆಯುತ್ತಿದೆ ಎನ್ನಲಾದ ಪಿತೂರಿಯನ್ನು ಖಂಡಿಸಿದ ರೇಣುಕಾಚಾರ್ಯ, ಹಳೆಯ ಇತಿಹಾಸವನ್ನು ನೆನಪಿಸಿದ್ದಾರೆ. “ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಇಲ್ಲದಿದ್ದರೆ ಡಿ.ವಿ. ಸದಾನಂದಗೌಡರು ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಯಡಿಯೂರಪ್ಪನವರು ರಕ್ತ ಸುರಿಸಿ ರಾಜ್ಯಾದ್ಯಂತ ಬಿಜೆಪಿ ಕಟ್ಟಿ ಬೆಳೆಸದಿದ್ದರೆ, ಇವತ್ತು ದೊಡ್ಡದಾಗಿ ಮಾತನಾಡುತ್ತಿರುವ ಯಾವೊಬ್ಬ ನಾಯಕನಿಗೂ ಈ ಮಟ್ಟದ ರಾಜಕೀಯ ಭವಿಷ್ಯ ಸಿಗುತ್ತಿರಲಿಲ್ಲ” ಎಂದು ಟಾಂಗ್ ನೀಡಿದ್ದಾರೆ.

ವಿಜಯೇಂದ್ರ ಕೆಲಸವನ್ನು ಮೆಚ್ಚಿದ ರೇಣುಕಾಚಾರ್ಯ

ರಾಜ್ಯಾಧ್ಯಕ್ಷರ ಪರವಾಗಿ ಬ್ಯಾಟ್ ಬೀಸಿದ ರೇಣುಕಾಚಾರ್ಯ, ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದ ಮೂಲೆ ಮೂಲೆಗೆ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇಂತಹ ಸಕ್ರಿಯ ನಾಯಕರ ವಿರುದ್ಧ ತೆರೆಮರೆಯಲ್ಲಿ ಸಂಚು ರೂಪಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಆಡಿಯೋದಲ್ಲಿ ಏನಿದೆ? ಲಿಂಗಾಯತ ನಾಯಕರ ಕೆಂಗಣ್ಣು

ದೆಹಲಿಯ ಪ್ರಭಾವಿ ನಾಯಕರೊಬ್ಬರ ಜೊತೆ ಸದಾನಂದಗೌಡರು ನಡೆಸಿದ್ದಾರೆ ಎನ್ನಲಾದ ರಹಸ್ಯ ಸಂಭಾಷಣೆಯ ಆಡಿಯೋ ಸದ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. “ವಿಜಯೇಂದ್ರ ಅವರನ್ನು ಆಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ. ಏಕಾಏಕಿ ಕೆಳಗಿಳಿಸಿದರೆ ಬಿಜೆಪಿಗೆ ‘ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿ ಬರಬಹುದು ಮತ್ತು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಇನ್ನು ಮೂರು ತಿಂಗಳು ಬಿಟ್ಟು ಆಮೇಲೆ ಅವರನ್ನು ಕಿತ್ತು ಬಿಸಾಡಿ” ಎಂದು ಆಡಿಯೋದಲ್ಲಿ ಹೇಳಲಾಗಿದೆ ಎನ್ನಲಾದ ಮಾತುಗಳು ಲಿಂಗಾಯತ ಸಮುದಾಯದ ಮುಖಂಡರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರೇಣುಕಾಚಾರ್ಯ ಅವರ ಈ ಪ್ರತ್ಯುತ್ತರದಿಂದಾಗಿ ಬಿಜೆಪಿಯ ಒಳಗಿನ ಬಣ ರಾಜಕೀಯ ಈಗ ಮತ್ತಷ್ಟು ಕಾವೇರಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಚಪ್ಪಲಿ ರಾಜಕೀಯದ ಕಿಡಿ: ಕಾರ್ಯಕರ್ತರ ಕೇಸ್‌ಗೆ ಸುಧಾಕರ್ ಸಾಥ್

Leave a Reply

Your email address will not be published. Required fields are marked *