TOP NEWS

Strait of Hormuz: ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್; ಹೋರ್ಮುಜ್ ಜಲಸಂಧಿ ಮರು ಆರಂಭವಾದ್ರೂ ತಕ್ಷಣವೇ ಮುಗಿಯಲ್ಲ ತೈಲ ಬಿಕ್ಕಟ್ಟು!

Iran america Strait of Hormuz y oil supply face problem

ನ್ಯೂಯಾರ್ಕ್: ಜಾಗತಿಕ ಆರ್ಥಿಕತೆಗೆ ಭಾರಿ ಕಂಟಕ ತಂದಿಟ್ಟಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಪ್ರಪಂಚದ ಇಂಧನ ಸಾಗಾಟದ ಅತ್ಯಂತ ಪ್ರಮುಖ ಕಡಲ ಹೆದ್ದಾರಿಯಾದ ‘ಹೋರ್ಮುಜ್ ಜಲಸಂಧಿ’ಯನ್ನು (Strait of Hormuz) ಮರು ಆರಂಭಿಸುವ ಕುರಿತು ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವೇನೋ ಪ್ರಕಟವಾಗಿದೆ. ಆದರೆ, ಈ ಒಪ್ಪಂದದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಕೊರತೆ ಹಾಗೂ ಗಗನಕ್ಕೇರಿರುವ ಇಂಧನ ಬೆಲೆಯ ಬಿಸಿ ತಕ್ಷಣವೇ ತಣ್ಣಗಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ತಜ್ಞರು ವಿಶ್ಲೇಷಿಸಿದ್ದಾರೆ.

ವಿಶ್ವ ಮಾರುಕಟ್ಟೆಯ ಇಂದಿನ ಭಾರಿ ಬೇಡಿಕೆಗೆ ತಕ್ಕಂತೆ ತೈಲ ಪೂರೈಕೆಯ ಜಾಲ ಮರುಸ್ಥಾಪನೆಯಾಗಲು ಮತ್ತು ತೈಲ ಉತ್ಪಾದನೆಯು ಪೂರ್ಣ ಪ್ರಮಾಣದಲ್ಲಿ ಹಳಿಗೆ ಮರಳಲು ಇನ್ನೂ ಹಲವು ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

3 ತಿಂಗಳಿಂದ ಪರ್ಷಿಯನ್ ಕೊಲ್ಲಿಯಲ್ಲೇ ಸಿಲುಕಿವೆ ನೂರಾರು ತೈಲ ಹಡಗುಗಳು!

ಯುದ್ಧ ಆರಂಭವಾಗುವ ಮುನ್ನ ಇಡೀ ಜಾಗತಿಕ ತೈಲ ಮತ್ತು ಪೆಟ್ರೋಲ್ ಪೂರೈಕೆಯ ಒಟ್ಟು ಪ್ರಮಾಣದಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಕೇವಲ ಈ ಹೋರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲ ಅಮೆರಿಕದ ನೌಕಾಪಡೆ ವಿಧಿಸಿದ್ದ ದಿಗ್ಬಂಧನ ಹಾಗೂ ಭೀಕರ ಯುದ್ಧದ ವಾತಾವರಣದಿಂದಾಗಿ ಈ ಜಲಮಾರ್ಗ ಸಂಪೂರ್ಣ ಸ್ತಬ್ಧವಾಗಿತ್ತು. ಇದರಿಂದಾಗಿ ಕಚ್ಚಾ ತೈಲ ತುಂಬಿದ ನೂರಾರು ಬೃಹತ್ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲೇ (Persian Gulf) ಸಿಲುಕಿಕೊಂಡಿದ್ದವು.

ಈ ಕುರಿತು ಮಾಹಿತಿ ನೀಡಿರುವ ‘ಎಸ್‌ಪಿ ಗ್ಲೋಬಲ್ ಎನರ್ಜಿ’ ಸಂಸ್ಥೆಯ ಜಾಗತಿಕ ಮುಖ್ಯಸ್ಥ ಡೇನಿಯಲ್ ಇವಾನ್ಸ್, ಯುದ್ಧ ನಿಂತ ತಕ್ಷಣವೇ ಎಲ್ಲವೂ ರಾತ್ರೋರಾತ್ರಿ ಸರಿಯಾಗುವುದಿಲ್ಲ ಎಂದಿದ್ದಾರೆ. ಅಂತರರಾಷ್ಟ್ರೀಯ ಹಡಗು ಉದ್ಯಮದಲ್ಲಿ ಮರಳಿ ವಿಶ್ವಾಸ ಮೂಡಲು, ಯುದ್ಧ ಪೀಡಿತ ಮಾರ್ಗದ ವಿಮಾ ವ್ಯವಸ್ಥೆಗಳು ಮರುಸ್ಥಾಪನೆಯಾಗಲು ಹಾಗೂ ತೈಲ ಉತ್ಪಾದನಾ ಘಟಕಗಳಿಗೆ ಮರಳಿ ನುರಿತ ಸಿಬ್ಬಂದಿಯನ್ನು ನಿಯೋಜಿಸುವುದು ಸದ್ಯದ ದೊಡ್ಡ ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಶಾಂತಿ ಒಪ್ಪಂದದ ಬೆನ್ನಲ್ಲೇ ಕುಸಿದ ಅಂತಾರಾಷ್ಟ್ರೀಯ ತೈಲ ದರ

ಅಮೆರಿಕ ಹಾಗೂ ಇರಾನ್ ನಡುವೆ ಒಪ್ಪಂದ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 3.45 ಡಾಲರ್ ಇಳಿಕೆಯಾಗಿ 83.89 ಡಾಲರ್ ತಲುಪಿದೆ. ಇತ್ತ ಅಮೆರಿಕದ ಮಾನದಂಡದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ತೈಲ ದರವೂ ಕೂಡ 4.03 ಡಾಲರ್ ಕುಸಿದು ಪ್ರತಿ ಬ್ಯಾರೆಲ್‌ಗೆ 80.85 ಡಾಲರ್‌ಗೆ ಇಳಿದಿದೆ. ಆದಾಗ್ಯೂ, ಯುದ್ಧ ಆರಂಭವಾಗುವ ಮುನ್ನ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್ ಆಸುಪಾಸಿನಲ್ಲಿತ್ತು. ಹಾಗಾಗಿ ಸದ್ಯ ಇಳಿಕೆಯಾಗಿರುವ ದರಗಳು ಕೂಡ ಸಾಮಾನ್ಯ ಗ್ರಾಹಕರಿಗೆ ಇಂದಿಗೂ ದುಬಾರಿಯಾಗಿಯೇ ಇವೆ.

ಪೂರೈಕೆ ವಿಳಂಬಕ್ಕೆ ಇರುವ ತಾಂತ್ರಿಕ ಕಾರಣಗಳೇನು?

ಬಿಕ್ಕಟ್ಟು ಮುಗಿದ ತಕ್ಷಣ ತೈಲ ಮಾರುಕಟ್ಟೆಗೆ ಹರಿಯಲು ಹಲವು ತಾಂತ್ರಿಕ ಅಡೆತಡೆಗಳಿವೆ:

  • ಕಡಲ ಸಂಚಾರದ ದಟ್ಟಣೆ: ಮೊದಲ ಹಂತದಲ್ಲಿ ಕಳೆದ ಮೂರು ತಿಂಗಳಿನಿಂದ ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳು ಸುರಕ್ಷಿತವಾಗಿ ಹೊರಬರಬೇಕು. ಆ ಬಳಿಕ ಹೊಸ ಟ್ಯಾಂಕರ್‌ಗಳು ಒಳಗೆ ಹೋಗಿ ತೈಲ ತುಂಬಿಸಿಕೊಳ್ಳಬೇಕು.
  • ಸಂಸ್ಕರಣೆಗೆ ಬೇಕಾಗುವ ಸಮಯ: ಹೋರ್ಮುಜ್ ಜಲಸಂಧಿಯಿಂದ ಹೊರಡುವ ಹಡಗುಗಳು ಭಾರತ ಸೇರಿದಂತೆ ದೂರದ ದೇಶಗಳ ಕರಾವಳಿ ತಲುಪಲು ಹಲವು ದಿನಗಳು ಬೇಕು. ಆ ಬಳಿಕ ಅಲ್ಲಿನ ತೈಲ ಸಂಸ್ಕರಣಾಗಾರಗಳಲ್ಲಿ (Refineries) ಕಚ್ಚಾ ತೈಲವನ್ನು ಪೆಟ್ರೋಲ್, ಡೀಸೆಲ್ ಆಗಿ ಪರಿವರ್ತಿಸಿ ಪಂಪ್‌ಗಳಿಗೆ ತಲುಪಿಸಲು ಕನಿಷ್ಠ ಒಂದು ತಿಂಗಳು ಹಿಡಿಯುತ್ತದೆ.
  • ಸ್ಥಗಿತಗೊಂಡ ತೈಲ ಬಾವಿಗಳು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ತೈಲವನ್ನು ಸಂಗ್ರಹಿಸಿಡಲು ಜಾಗವಿಲ್ಲದೆ (Storage Capacity ಕೊರತೆಯಿಂದ) ಉತ್ಪಾದನೆಯನ್ನು ಸಂಪೂರ್ಣ ನಿಲ್ಲಿಸಿದ್ದವು. ಹೀಗೆ ಸ್ಥಗಿತಗೊಂಡಿರುವ ಬೃಹತ್ ತೈಲ ಬಾವಿಗಳನ್ನು ಮರಳಿ ಚಾಲನೆಗೊಳಿಸುವುದು ತಾಂತ್ರಿಕವಾಗಿ ಸುಲಭದ ಕೆಲಸವಲ್ಲ.

ಸೌದಿಗೆ ಸುಲಭ, ಇರಾಕ್‌ಗೆ ಕಷ್ಟದ ಹಾದಿ!

‘ವುಡ್ ಮಕೆಂಜಿ’ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಲನ್ ಗೆಲ್ಡರ್ ಅವರ ವಿಶ್ಲೇಷಣೆಯ ಪ್ರಕಾರ, ಈ ಯುದ್ಧದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ವೇಗ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳು ಹೋರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಬೇರೆ ಪೈಪ್‌ಲೈನ್ ಹಾಗೂ ಭೂಮಾರ್ಗಗಳನ್ನು ಹೊಂದಿರುವುದರಿಂದ ಅವು ಬೇಗನೆ ತೈಲ ಉತ್ಪಾದನೆಯನ್ನು ಮರುಸ್ಥಾಪಿಸಬಲ್ಲವು. ಆದರೆ ಇರಾಕ್‌ನಂತಹ ದೇಶಗಳು ತೀವ್ರ ಸವಾಲು ಎದುರಿಸಲಿವೆ. ಇರಾಕ್‌ನಲ್ಲಿ ತೈಲ ಕ್ಷೇತ್ರಗಳ ಪರಿಸ್ಥಿತಿ ಸಂಕೀರ್ಣವಾಗಿದ್ದು, ಅಲ್ಲಿ ಉತ್ಪಾದನೆ ಸಂಪೂರ್ಣ ನಿಂತುಹೋಗಿದೆ. ಇರಾಕ್ ಮತ್ತೆ ಹಳೇ ಸ್ಥಿತಿಗೆ ಮರಳಿ ಪೂರ್ಣ ಪ್ರಮಾಣದಲ್ಲಿ ತೈಲ ಉತ್ಪಾದಿಸಲು ಕನಿಷ್ಠ ಒಂದು ವರ್ಷ ಬೇಕಾಗಬಹುದು.

ಜೊತೆಗೆ, ಜಲಸಂಧಿ ಮುಚ್ಚಿದ ನಂತರ ಇಂಧನ ಕ್ಷೇತ್ರದಲ್ಲಿ ಜಾಗತಿಕ ಹೂಡಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಈ ಹೊಸ ಹೂಡಿಕೆಗಳು ಮತ್ತೆ ಮಾರುಕಟ್ಟೆಗೆ ಹರಿದುಬಂದು ಅದರ ಫಲಿತಾಂಶ ಗ್ರಾಹಕರಿಗೆ ಸಿಗಬೇಕಾದರೆ ಜಾಗತಿಕ ಇಂಧನ ಮಾರುಕಟ್ಟೆ ಇನ್ನು ಕೆಲವು ತಿಂಗಳುಗಳ ಕಾಲ ಕಾಯಲೇಬೇಕಾಗುತ್ತದೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಪ್ರಶ್ನೆಪತ್ರಿಕೆ ಹೆಸರಲ್ಲಿ ಭಾರಿ ವಂಚನೆ: ಸೈಬರ್ ಕಿಲಾಡಿಗಳ ಬಂಧನ

Leave a Reply

Your email address will not be published. Required fields are marked *