ಅಹಮದಾಬಾದ್: ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಬರೆಯಲಿರುವ ಅಭ್ಯರ್ಥಿಗಳ ಆತಂಕವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಸೈಬರ್ ದಗಾಬಾಜರ ಗ್ಯಾಂಗ್ ಒಂದನ್ನು ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. “ನಮ್ಮ ಬಳಿ ರೀ-ನೀಟ್ (NEET) ಪರೀಕ್ಷೆಯ ಅಸಲಿ ಪ್ರಶ್ನೆಪತ್ರಿಕೆ ಇದೆ” ಎಂದು ನಂಬಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೇಶದಲ್ಲಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ, ಇದು ಕೇವಲ ನಕಲಿ ಭರವಸೆ ನೀಡಿ ಹಣ ಪೀಕುತ್ತಿದ್ದ ಸೈಬರ್ ಜಾಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನದ ಜೈಪುರ ಮೂಲದ ಐಟಿಐ ಪದವೀಧರ ಸುಮೇರ್ ಸಿಂಗ್ ಭರತ್ ಲಾಲ್ ಮೀನಾ ಹಾಗೂ ಕೋಟಾ ನಗರದ ಆಕಾಶ್ ಪಪ್ಪುಲಾಲ್ ಮೀನಾ ಎಂದು ಗುರುತಿಸಲಾಗಿದೆ.
ಟೆಲಿಗ್ರಾಮ್‌ನಲ್ಲಿ ನಕಲಿ ಸ್ಟೂಡೆಂಟ್ಸ್ ಹಾವಳಿ: ಬಯಲಾಯ್ತು ವಂಚನೆಯ ಪ್ಲಾನ್
ಆರೋಪಿಗಳು ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್‌ಗಳಲ್ಲಿ ಆಕರ್ಷಕ ಪ್ರಚಾರದ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು. ಇದಕ್ಕಾಗಿ “ರಾಘವ್_ಸಿಂಗ್_ನೀಟ್” ಸೇರಿದಂತೆ ಒಟ್ಟು ಎಂಟು ಟೆಲಿಗ್ರಾಮ್ ಚಾನೆಲ್‌ಗಳನ್ನು ಇವರು ನಡೆಸುತ್ತಿದ್ದರು. ಜನರಿಗೆ ಅನುಮಾನ ಬಾರದಿರಲು ಇವರು ಥರ್ಡ್ ಪಾರ್ಟಿ ಆ್ಯಪ್‌ಗಳ ಸಹಾಯದಿಂದ ತಮ್ಮ ಚಾನೆಲ್‌ಗಳಲ್ಲಿ ಲಕ್ಷಾಂತರ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂದು ಸುಳ್ಳು ಲೆಕ್ಕ ತೋರಿಸುತ್ತಿದ್ದರು.
ಇಷ್ಟೇ ಅಲ್ಲದೆ, ಚಾನೆಲ್‌ನಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆರೋಪಿಗಳ ಸಹಚರರೇ ವಿದ್ಯಾರ್ಥಿಗಳ ಸೋಗಿನಲ್ಲಿ ಗ್ರೂಪ್ ಸೇರಿಕೊಳ್ಳುತ್ತಿದ್ದರು. “ನಮಗೆ ಈ ಚಾನೆಲ್‌ನಿಂದಲೇ ಅಸಲಿ ಪ್ರಶ್ನೆಪತ್ರಿಕೆ ಸಿಕ್ಕಿದೆ” ಎಂದು ಫೇಕ್ ಮೆಸೇಜ್‌ಗಳನ್ನು ಹಾಕಿ ಇತರರನ್ನು ನಂಬಿಸುತ್ತಿದ್ದರು. ಮರುಪರೀಕ್ಷೆಯ ಸುದ್ದಿಯಿಂದ ಕಂಗಾಲಾಗಿದ್ದ ವಿದ್ಯಾರ್ಥಿಗಳು ಇವರ ಮಾತುಗಳನ್ನು ನಂಬಿ ಅಡ್ವಾನ್ಸ್ ಹಣ ಪಾವತಿಸಿ ಮೋಸ ಹೋಗಿದ್ದಾರೆ.
ಗೇಮಿಂಗ್ ಆ್ಯಪ್ ಮೂಲಕ ಹಣ ವರ್ಗಾವಣೆ; ಷೇರು ಮಾರುಕಟ್ಟೆ ಹೆಸರಲ್ಲೂ ದರೋಡೆ!
ಈ ಖದೀಮರು ಕೇವಲ ನೀಟ್ ಪರೀಕ್ಷೆ ಮಾತ್ರವಲ್ಲದೆ, “ಟ್ರೇಡ್ ವಿತ್ ಕರೋಲ್” ಹಾಗೂ “ಪಂಕಜ್ ಭಾರದ್ವಾಜ್” ಎಂಬ ಹೆಸರಿನ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಶೇರು ಮಾರುಕಟ್ಟೆಯಲ್ಲಿ ಭಾರಿ ಲಾಭ ನೀಡುವುದಾಗಿ ನಂಬಿಸಿ ಹೂಡಿಕೆ ವಂಚನೆಯನ್ನೂ ನಡೆಸುತ್ತಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಆರೋಪಿಗಳು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳ ಬದಲಿಗೆ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳಿಗೆ ಲಿಂಕ್ ಆಗಿದ್ದ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಳ್ಳುತ್ತಿದ್ದರು.
ಪೊಲೀಸರು ಸದ್ಯ ವಂಚಕರ ಖಾತೆಗಳಲ್ಲಿದ್ದ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ವಹಿವಾಟನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಒಂದು ವರ್ಷದಲ್ಲಿ 80 ಲಕ್ಷಕ್ಕೂ ಹೆಚ್ಚು ಹಣ ಜಮೆಯಾಗಿರುವ ಆರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಇವುಗಳ ವಿರುದ್ಧ ಈಗಾಗಲೇ ದೇಶದ ವಿವಿಧೆಡೆಗಳಿಂದ 12 ದೂರುಗಳು ದಾಖಲಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಸೈಬರ್ ನೆಟ್‌ವರ್ಕ್ ಬರೋಬ್ಬರಿ 1,000ಕ್ಕೂ ಹೆಚ್ಚು ಜನರನ್ನು ವಂಚಿಸಲು ಯತ್ನಿಸಿದ್ದು, ನೀಟ್ ಪರೀಕ್ಷೆಯೊಂದರ ಹೆಸರಲ್ಲೇ 70ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕಿದೆ. ಕೇವಲ ಒಂದು ತಿಂಗಳಲ್ಲೇ ಜನರನ್ನು ಸಂಪರ್ಕಿಸಲು 250ಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಬಳಸಲಾಗಿತ್ತು. ಸದ್ಯ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಜಾಲದ ಇತರೆ ಸಹಚರರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
