TOP NEWS

R Ashok: ಕಾಂಗ್ರೆಸ್ ವಿರುದ್ಧ ಆರ್‌ ಅಶೋಕ್ ತೀವ್ರ ವಾಗ್ದಾಳಿ: ಬಿಡದಿ ಟೌನ್‌ಶಿಪ್ ಹೆಸರಲ್ಲಿ 2 ಲಕ್ಷ ಮರಗಳಿಗೆ ಕೊಡಲಿ

National Security at Risk R Ashok Demands Immediate Halt to Congress SIR Process

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ನೀತಿಗಳು ಹಾಗೂ ಕಾನೂನು ಸುವ್ಯವಸ್ಥೆಯ ವೈಫಲ್ಯದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಬಿಡದಿ ಗ್ರೇಟರ್ ಟೌನ್‌ಶಿಪ್ ಹೆಸರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದ್ದು, ಸುಮಾರು 2 ಲಕ್ಷ ಹಸಿರು ಮರಗಳನ್ನು ಧ್ವಂಸ ಮಾಡಲು ಸರ್ಕಾರ ಸಂಚು ರೂಪಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪರಿಸರ ಪ್ರೇಮವನ್ನು ಪ್ರಶ್ನಿಸಿರುವ ಅಶೋಕ್, “ದೇಶದ ಬೇರೆ ರಾಜ್ಯಗಳಲ್ಲಿ ಪರಿಸರ ಹೋರಾಟಗಾರನಂತೆ ನಟಿಸುವ ರಾಹುಲ್ ಗಾಂಧಿ ಅವರ ಪರಿಸರ ಕಾಳಜಿ ಕರ್ನಾಟಕದ ಗಡಿಗೆ ಮುಕ್ತಾಯವಾಗುತ್ತದೆಯೇ?” ಎಂದು ಕಟುವಾಗಿ ಲೇವಡಿ ಮಾಡಿದ್ದಾರೆ.

9 ಹಳ್ಳಿಗಳ ರೈತರ ಆಸ್ತಿ ನಾಶ: ಬಯಲಾದ ‘ಪರಿಸರ ಹತ್ಯೆ’ಯ ಅಂಕಿ-ಅಂಶಗಳು

ಬಿಡದಿ ಟೌನ್‌ಶಿಪ್ ನೆಪದಲ್ಲಿ ಬೆಂಗಳೂರಿನ ಅಂಗಳದಲ್ಲೇ ದೊಡ್ಡ ಮಟ್ಟದ ಪರಿಸರ ವಿನಾಶಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ಆರ್‌ ಅಶೋಕ್ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದಾಗಿ ಒಟ್ಟು 9 ಹಳ್ಳಿಗಳ ಕೃಷಿಕರ ಬದುಕು ಬೀದಿಗೆ ಬರಲಿದ್ದು, ರೈತರು ಕಷ್ಟಪಟ್ಟು ಬೆಳೆಸಿದ 83,536 ಅಡಿಕೆ ಮರಗಳು, 87,903 ತೆಂಗಿನ ಮರಗಳು ಹಾಗೂ 12,550 ಮಾವಿನ ಮರಗಳು ನೆಲಸಮವಾಗಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮುಂಬೈನ ಆರೇ ಕಾಲೋನಿ ಹಾಗೂ ಗ್ರೇಟ್ ನಿಕೋಬಾರ್ ಯೋಜನೆಗಳ ವಿರುದ್ಧ ಟ್ವೀಟ್ ಮಾಡಿ ಕಣ್ಣೀರು ಸುರಿಸುವ ರಾಹುಲ್ ಗಾಂಧಿ, ಕರ್ನಾಟಕದ ಕಮಿಷನ್ ಮಾಸ್ಟರ್‌ಗಳ ರಿಯಲ್ ಎಸ್ಟೇಟ್ ಮಾಫಿಯಾಗೆ ಲಕ್ಷಾಂತರ ಮರಗಳು ಬಲಿಯಾಗುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದ ಅನ್ನದಾತರ ಹಸಿರು ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ಅಭಿವೃದ್ಧಿಯೇ? ಇವರ ಪರಿಸರ ಪ್ರೇಮ ಕೇವಲ ರಾಜಕೀಯ ನಾಟಕ ಎಂದು ಅಶೋಕ್ ಕಿಡಿಕಾರಿದ್ದಾರೆ.

ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸರ ದರೋಡೆ: ಗೃಹ ಇಲಾಖೆ ಸಂಪೂರ್ಣ ಶೂನ್ಯ!

ರಾಜ್ಯದ ಕಾನೂನು ಸುವ್ಯವಸ್ಥೆಯ ಹಳಿ ತಪ್ಪಿದ ಸ್ಥಿತಿಯ ಬಗ್ಗೆಯೂ ತರಾಟೆಗೆ ತೆಗೆದುಕೊಂಡಿರುವ ಆರ್‌ ಅಶೋಕ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಗೃಹ ಇಲಾಖೆಯ ಘನತೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದ್ದು, ಡ್ರಗ್ಸ್ ಮಾರಾಟ ಹಾಗೂ ದರೋಡೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾದ ಕಾರಣಕ್ಕೆ ರಾಜ್ಯದ 124 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿರುವುದು ಇಡೀ ಇಲಾಖೆಗೆ ನಾಚಿಕೆಗೇಡು ಎಂದಿದ್ದಾರೆ. ವರದಕ್ಷಿಣೆ ಪ್ರಕರಣದ ತನಿಖೆಗಾಗಿ ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಎಚ್‌ಎಎಲ್ ಠಾಣೆಯ ಮೂವರು ಪೊಲೀಸರು ಅಲ್ಲಿನ ಲಂಚ ನಿರೋಧಕ ದಳಕ್ಕೆ (ACB) ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದನ್ನು ಅವರು ನೆನಪಿಸಿದ್ದಾರೆ.

ಆರ್‌ಎಸ್‌ಎಸ್ ನಿಷೇಧ ಅಥವಾ ಧರ್ಮಸ್ಥಳದ ಬುರುಡೆ ಪ್ರಕರಣದಂತಹ ಅನಗತ್ಯ ವಿಷಯಗಳ ಚರ್ಚೆಯಲ್ಲೇ ಕಾಲ ಕಳೆಯುವ ಗೃಹ ಸಚಿವರು, ಪೊಲೀಸ್ ಇಲಾಖೆಯಲ್ಲಿ ಶಿಸ್ತು ತರಲು ಪ್ರಯತ್ನಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. “10 ರೂಪಾಯಿ ಲಂಚ ಕೇಳಿದರೂ ನಮಗೆ ತಿಳಿಸಿ” ಎನ್ನುವ ಸಿಎಂ-ಡಿಸಿಎಂ ಅವರೇ, ನಿಮ್ಮದೇ ಇಲಾಖೆಯ ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಜನಸಾಮಾನ್ಯರು ಯಾರಿಗೆ ದೂರು ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಬಿಡದಿಯ ರೈತರ ಮತ್ತು ಪರಿಸರದ ಉಳಿವಿಗಾಗಿ ಬಿಜೆಪಿ ದೃಢವಾಗಿ ಹೋರಾಡಲಿದ್ದು, ಸರ್ಕಾರದ ಈ ರಿಯಲ್ ಎಸ್ಟೇಟ್ ದಂಧೆಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಐದು ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ; ಲೋಪದೋಷ ಸರಿಪಡಿಸಲು ಸಿದ್ದರಾಮಯ್ಯ ಸ್ಪಷ್ಟನೆ!

Leave a Reply

Your email address will not be published. Required fields are marked *