ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಮುಂದಿನ ಎರಡು ವರ್ಷಗಳು ಮಾತ್ರವಲ್ಲದೆ, ಮುಂಬರುವ ಚುನಾವಣೆಯಲ್ಲೂ ನಾವು ಮತ್ತೆ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದ್ದೇವೆ ಹಾಗೂ ಆ ಬಳಿಕವೂ ಈ ಯೋಜನೆಗಳು ಮುಂದುವರಿಯಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುವ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸುವ ಪ್ರಕ್ರಿಯೆ ಮೊದಲಿನಿಂದಲೂ ನಡೆಯುತ್ತಿದ್ದು, ಈಗಲೂ ಅದು ಮುಂದುವರಿದಿದೆ. ಹೀಗಾಗಿ ಫಲಾನುಭವಿಗಳು ವಿರೋಧ ಪಕ್ಷಗಳ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಬಡವರ ವಿರೋಧಿ, ಗ್ಯಾರಂಟಿ ನಿಲ್ಲುವ ಪುಕಾರು ಅವರ ಹತಾಶೆ!
ವಿರೋಧ ಪಕ್ಷವಾದ ಬಿಜೆಪಿ ಮೂಲತಃ ಬಡವರ ವಿರೋಧಿ ನೀತಿಯನ್ನು ಹೊಂದಿದೆ. ಗ್ಯಾರಂಟಿ ಯೋಜನೆಗಳು ಘೋಷಣೆಯಾದ ಮೊದಲ ದಿನದಿಂದಲೂ ಅವರು ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದರು, ಆಮೇಲೆ ಹಣಕಾಸಿನ ಕೊರತೆಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಲಿದೆ ಎಂದು ಜರಿದರು. ಈಗ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎನ್ನುವ ವದಂತಿ ಹರಡುತ್ತಿದ್ದಾರೆ. ಇದೆಲ್ಲವೂ ಅವರ ರಾಜಕೀಯ ಹತಾಶೆಯ ಸಂಕೇತವಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ, ಈಗಲೂ…
— Siddaramaiah (@siddaramaiah) June 15, 2026
ರಾಜ್ಯದಲ್ಲಿ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಷ್ಟೇ ಅಲ್ಲದೆ, ಇದರಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ದಕ್ಷವಾಗಿ ನಿಭಾಯಿಸಿದ್ದೇನೆ. ಪ್ರಸ್ತುತ ಕರ್ನಾಟಕ ರಾಜ್ಯವು ದೇಶದಲ್ಲೇ ತಲಾವಾರು ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರದ ಎರಡನೇ ಅತಿ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ಇಂತಹ ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಿತ್ತೇ? ಎಂದು ಸಿಎಂ ಪ್ರಶ್ನಿಸಿದರು.
ಬೇರೆ ರಾಜ್ಯಗಳಲ್ಲಿ ನಮ್ಮದೇ ಯೋಜನೆಗಳ ನಕಲು
ನಮ್ಮ ಯೋಜನೆಗಳನ್ನು ಟೀಕಿಸುವ ಬಿಜೆಪಿ, ಇದೇ ಗ್ಯಾರಂಟಿಗಳನ್ನು ಮಧ್ಯಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ನಕಲು ಮಾಡಿ ಅಧಿಕಾರ ಹಿಡಿದಿದೆ. ಇಂತಹವರಿಗೆ ನಮ್ಮನ್ನು ವಿರೋಧಿಸುವ ಯಾವ ನೈತಿಕ ಹಕ್ಕಿದೆ? ಕೆಲವು ರಾಜ್ಯಗಳಲ್ಲಿ ಚುನಾವಣಾ ಪೂರ್ವದಲ್ಲಿ ಬಿಜೆಪಿ ಭರವಸೆಗಳನ್ನು ನೀಡಿದೆಯಾದರೂ, ಅವುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಸಿಎಂ ತಿರುಗೇಟು ನೀಡಿದರು.
ಅನರ್ಹರ ಪತ್ತೆ ಸರ್ಕಾರದ ಕರ್ತವ್ಯ
ಈ ಯೋಜನೆಗಳ ಲಾಭ ನಿಜವಾದ ಅರ್ಹ ಜನರಿಗೆ ತಲುಪಬೇಕು. ಯೋಜನೆಯು ಅನರ್ಹರ ಪಾಲಾಗುತ್ತಿದ್ದರೆ ಅದನ್ನು ತಡೆಗಟ್ಟುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ಸಾರ್ವಜನಿಕರು ಕೂಡ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದುರಾಸೆಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಗ್ಯಾರಂಟಿ ಸೌಲಭ್ಯ ಪಡೆಯುವುದು ಕಾನೂನುಬಾಹಿರ ಮಾತ್ರವಲ್ಲ, ಇಡೀ ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಇಂತಹ ಸೂಕ್ಷ್ಮ ವಿಷಯದಲ್ಲಿ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದನ್ನು ಬಿಟ್ಟು, ಅರ್ಹರಿಗೆ ಯೋಜನೆ ತಲುಪಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.
