TOP NEWS

America: ಸಮುದ್ರದಲ್ಲಿ ಭಾರತೀಯ ನಾವಿಕರ ಮೇಲೆ ಸಾಲು ಸಾಲು ದಾಳಿ: ಈ ವಾರದಲ್ಲೇ 2ನೇ ಬಾರಿ ಅಮೆರಿಕ ರಾಯಭಾರಿಗೆ ಭಾರತದ ಸಮನ್ಸ್!

India summons US diplomat second time over attacks on Indian crew vessels

ನವದೆಹಲಿ: ಒಮಾನ್ ಕರಾವಳಿ ತೀರದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿರುವ ಬೆನ್ನಲ್ಲೇ, ಭಾರತ ಸರ್ಕಾರವು ಶುಕ್ರವಾರ ಅಮೆರಿಕದ (America) ಹಿರಿಯ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಈ ವಾರದಲ್ಲೇ ಎರಡನೇ ಬಾರಿಗೆ ಅಮೆರಿಕದ ರಾಜತಾಂತ್ರಿಕರನ್ನು ಕರೆಸಿ ಗಲ್ಫ್ ಪ್ರದೇಶದ ಕಡಲ ಭದ್ರತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಹೆಚ್ಚಾದ ಹಡಗುಗಳ ಮೇಲಿನ ದಾಳಿ

ಗಲ್ಫ್ ವಲಯದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದಂತೆ, ಶಿಪ್ಪಿಂಗ್ ಮಹಾನಿರ್ದೇಶನಾಲಯವು (DGS) ಹಾರ್ಮುಜ್ ಜಲಸಂಧಿ ಮತ್ತು ಒಮಾನ್ ಗಲ್ಫ್ ಸುತ್ತಮುತ್ತಲಿನ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೧೮,000 ಭಾರತೀಯ ನಾವಿಕರಿಗೆ ಹೊಸ ಕಡಲ ಭದ್ರತಾ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಜೂನ್ ೮ ರಂದು ‘ಎಂಟಿ ಮಾರಿವೆಕ್ಸ್’ ತೈಲ ಟ್ಯಾಂಕರ್ ಮೇಲೆ ನಡೆದ ಮೊದಲ ದಾಳಿಯಲ್ಲಿ ಸಿಲುಕಿದ್ದ ೨೪ ಭಾರತೀಯ ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಜೂನ್ ೧0 ರಂದು ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ನಡೆದ ಎರಡನೇ ದಾಳಿಯು ಭಾರಿ ದುರಂತಕ್ಕೆ ಕಾರಣವಾಗಿದ್ದು, ಅದಲ್ಲಿದ್ದ ೨೪ ಭಾರತೀಯರ ಪೈಕಿ ೨೧ ಜನರನ್ನು ರಕ್ಷಿಸಲಾಗಿದ್ದರೂ, ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಗುರುವಾರ ೨0 ಮಂದಿ ಭಾರತೀಯ ಸಿಬ್ಬಂದಿ ಹೊತ್ತಿದ್ದ ‘ಎಂಟಿ ಜಲವೀರ್’ ಎಂಬ ಮೂರನೇ ಹಡಗಿನ ಮೇಲೂ ಒಮಾನ್ ತೀರದಲ್ಲಿ ದಾಳಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಪ್ರಸ್ತುತ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಭಾರತದ ಧ್ವಜ ಹೊತ್ತ ೧೩ ಹಡಗುಗಳಲ್ಲಿ ೬೨೨ ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಗಲ್ಫ್ ಪ್ರದೇಶದ ವಿವಿಧ ವಿದೇಶಿ ಹಡಗುಗಳಲ್ಲಿ ಸುಮಾರು ೧೮,000 ಭಾರತೀಯರು ಉದ್ಯೋಗದಲ್ಲಿದ್ದು, ಸದ್ಯದ ಕಡಲ ಭದ್ರತೆಯ ಬಿಕ್ಕಟ್ಟಿನಿಂದಾಗಿ ಇವರೆಲ್ಲರ ಜೀವಕ್ಕೆ ಆಪತ್ತು ಎದುರಾಗಿದೆ. ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ನಾವಿಕರ ಕಾರ್ಯಪಡೆಯನ್ನು ಹೊಂದಿರುವ ಭಾರತದ ಸುಮಾರು ೩.೨ ಲಕ್ಷ ನಾವಿಕರು ವಿಶ್ವಾದ್ಯಂತ ಸಮುದ್ರಯಾನ ಸೇವೆಗಳಲ್ಲಿದ್ದಾರೆ. ಸದ್ಯ ಗಲ್ಫ್ ರಾಷ್ಟ್ರಗಳ ಸಮುದ್ರ ತೀರದಲ್ಲಿ ನಾವಿಕರ ರಕ್ಷಣೆಗೆ ಸೂಕ್ತ ಅಂತಾರಾಷ್ಟ್ರೀಯ ಕ್ರಮ ಕೈಗೊಳ್ಳುವಂತೆ ಭಾರತವು ಅಮೆರಿಕ ಸೇರಿದಂತೆ ಜಾಗತಿಕ ಶಕ್ತಿಗಳ ಮೇಲೆ ರಾಜತಾಂತ್ರಿಕ ಒತ್ತಡವನ್ನು ತೀವ್ರಗೊಳಿಸಿದೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಮತ್ತೆ ‘ಮೆಲೋಡಿ’ ಸೌಂಡ್

Leave a Reply

Your email address will not be published. Required fields are marked *