ಚೆನ್ನೈ: ಚಿತ್ರರಂಗದ ದೃಶ್ಯಕಾವ್ಯ, ಭಾರತೀಯ ಸಿನಿಮಾದ ಪರಮೋಚ್ಛ ತಾರೆ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಜೀವನ ಚರಿತ್ರೆ ಇದೀಗ ಬೆಳ್ಳಿಪರದೆಗೆ ಬರಲು ಸಿದ್ಧವಾಗುತ್ತಿದೆ ಎಂಬ ಭಾರಿ ಸುದ್ದಿಯೊಂದು ಹರಿದಾಡುತ್ತಿದ್ದು, ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಹೊಸ ರೋಮಾಂಚನ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ, ಇಂದು ಭಾರತೀಯ ಚಿತ್ರರಂಗದ ಅಧಿಪತಿಯಾಗಿ ಬೆಳೆದು ನಿಂತಿರುವ ತಲೈವಾ ಅವರ ಬದುಕಿನ ಯಶೋಗಾಥೆ ಚಿತ್ರ ರೂಪದಲ್ಲಿ ಮೂಡಿಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕೃತ ಪ್ರಕಟಣೆ ಇನ್ನು ಹೊರಬೀಳಬೇಕಾಗಿದ್ದರೂ, ಅವರ ಆತ್ಮಕಥನೆಯನ್ನು ಆಧರಿಸಿ ಸಿನೆಮಾ ಮಾಡುವ ಕುರಿತು ಈಗಾಗಲೇ ಸಮಾಲೋಚನೆಗಳು ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.
ಆತ್ಮಕಥೆ ಬರೆಯುವಲ್ಲಿ ರಜನಿ ಬ್ಯುಸಿ
ಪ್ರಸ್ತುತ ರಜನಿಕಾಂತ್ ಅವರು ತಮ್ಮ ಆತ್ಮಕಥನ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದು, ಈ ಪುಸ್ತಕದಲ್ಲಿ ಅವರ ವೈಯಕ್ತಿಕ ಜೀವನದ ಏಳುಬೀಳುಗಳು, ಸಿನಿಮಾ ರಂಗದ ಮಹತ್ವದ ಘಟ್ಟಗಳು, ಅವರು ಎದುರಿಸಿದ ಕಠಿಣ ಸವಾಲುಗಳು ಹಾಗೂ ರೋಚಕ ಸಾಧನೆಗಳ ಸಂಪೂರ್ಣ ವಿವರಗಳು ಒಳಗೊಂಡಿರಲಿವೆ. ತಮಿಳು ಚಿತ್ರರಂಗದ ಖ್ಯಾತ ಮಾಧ್ಯಮಗಳ ವರದಿಯ ಪ್ರಕಾರ, ರಜನಿಕಾಂತ್ ಅವರು ತಮ್ಮ ಈ ಆತ್ಮಕಥನವನ್ನು ದೊಡ್ಡ ಪರದೆಯ ಮೇಲೆ ತರುವ ಆಲೋಚನೆಯಲ್ಲಿದ್ದು, ಈ ಬಗ್ಗೆ ತಮಗೆ ಆಪ್ತರಾಗಿರುವ ನಿರ್ದೇಶಕರು ಹಾಗೂ ಆಪ್ತ ವಲಯದಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ರಜನಿಕಾಂತ್ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್ ಅವರು ಕೂಡ ತಮ್ಮ ತಂದೆ ಆತ್ಮಕಥೆ ಬರೆಯುತ್ತಿರುವುದನ್ನು ಸ್ಪಷ್ಟಪಡಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಸ್ವಂತ ಪರಿಶ್ರಮದಿಂದಲೇ ಸ್ವತಂತ್ರ ಹಾದಿ ನಿರ್ಮಿಸಿಕೊಂಡ ನಮ್ಮ ಪ್ರೀತಿಯ ತಲೈವಾ, ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿದ್ದ ದಿನಗಳಿಂದ ಹಿಡಿದು ಕಾಲಿವುಡ್‌ನ ಸೂಪರ್‌ಸ್ಟಾರ್ ಆಗುವವರೆಗಿನ ತಮ್ಮ ಇಡೀ ಜೀವನದ ಇತಿಹಾಸವನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದ್ದರು. ಈ ಪುಸ್ತಕವು ಅವರ ಪ್ರತಿಯೊಂದು ಸಿನಿಮಾ ಪಾತ್ರದ ಹಿಂದಿನ ಶ್ರಮ ಹಾಗೂ ಬದುಕಿನ ರೋಚಕ ಪಯಣವನ್ನು ಜಗತ್ತಿಗೆ ಪರಿಚಯಿಸಲಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಿನಿಮಾಗಳಲ್ಲಿ ಸೂಪರ್‌ಸ್ಟಾರ್ ಬ್ಯುಸಿ
ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಜನಿಕಾಂತ್ ಅವರು ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರರಂಗದಲ್ಲಿ ನಟಿಸಿ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಭಾರತ ಸರ್ಕಾರ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಚಿತ್ರರಂಗದ ಪರಮೋಚ್ಛ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಸದ್ಯ ರಜನಿಕಾಂತ್ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಇದೇ ಅಕ್ಟೋಬರ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ನಿರ್ದೇಶಕ ಅಶ್ವಥ್ ಮರಿಮುತ್ತು ಅವರ ‘ಧರ್ಮನ್’ ಚಿತ್ರದಲ್ಲೂ ರಜನಿಕಾಂತ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಬಿಡುಗಡೆಗೆ ಕೌಂಟ್‌ಡೌನ್ ಶುರು: ಹೊಸ ಪೋಸ್ಟರ್ ರಿಲೀಸ್
