ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ಅವರ ನಿಕಟವರ್ತಿಯಾಗಿರುವ ನಟ ಧನ್ವೀರ್ (Actor Dhanveer) ಸುತ್ತಲಿನ ಕಾನೂನು ತೊಂದರೆಗಳು ಸದ್ಯಕ್ಕಂತೂ ಶಮನವಾಗುವಂತೆ ಕಾಣುತ್ತಿಲ್ಲ. ಈಗಾಗಲೇ ಒಂದರ ಮೇಲೊಂದರಂತೆ ಕಾನೂನು ದೂರುಗಳನ್ನು ಎದುರಿಸುತ್ತಿರುವ ಈ ಯುವ ನಟನಿಗೆ ಇದೀಗ 4ನೇ ದೂರು ದಾಖಲಾಗುವ ಮೂಲಕ ಮತ್ತಷ್ಟು ದೊಡ್ಡ ಹಿನ್ನಡೆಯಾಗಿದೆ. ನಟ ಧನ್ವೀರ್ ಹಾಗೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಾಗಿ ಬೃಹತ್ ಪ್ರಮಾಣದ ನಿಯಮಬಾಹಿರ ನಗದು ವ್ಯವಹಾರಗಳನ್ನು ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಗೆ (IT) ಅಧಿಕೃತವಾಗಿ ದೂರು ರವಾನೆಯಾಗಿದೆ.
ಬರೋಬ್ಬರಿ 10 ಕೋಟಿ (Actor Dhanveer) ರೂಪಾಯಿ ನಗದು ವ್ಯವಹಾರದ ಶಂಕೆ
ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲ ಪ್ರಶಾಂತ್ ಮೆತಲ್ ಅವರು ಈ ದೂರನ್ನು ಸಲ್ಲಿಸಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಐಟಿ ಹಾಗೂ ಇಡಿ ಇಲಾಖೆಯ ಉನ್ನತಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆಯನ್ವಯ ಇಬ್ಬರು ವ್ಯಕ್ತಿಗಳ ನಡುವೆ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವ್ಯವಹಾರವನ್ನು ಕೈಗೊಳ್ಳುವುದು ಕಾನೂನುಬಾಹಿರವಾಗಿದೆ. ಆದರೆ, ನಟ ದರ್ಶನ್ ಅವರಿಗೆ ಸಂಬಂಧಿಸಿದ ಕಾನೂನು ಹೋರಾಟಗಳು ಮತ್ತು ಕೋರ್ಟ್ ವೆಚ್ಚಗಳ ನಿರ್ವಹಣೆಯ ನೆಪದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕಪ್ಪು ಹಣವನ್ನು ನಗದು ರೂಪದಲ್ಲಿಯೇ ಕೈಬದಲಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಪ್ರಮುಖವಾಗಿ ಬೆಟ್ಟುಮಾಡಲಾಗಿದೆ.
ಹಣದ ಮೂಲ ಪತ್ತೆಗೆ ಆಗ್ರಹ: ಶ್ರೀಮಂತರಿಗೂ ಉಂಟು ಕಾನೂನು!
ಈ ಅಕ್ರಮ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಹಣದ ನೈಜ ಮೂಲ ಯಾವುದು ಹಾಗೂ ಇಷ್ಟೊಂದು ಬೃಹತ್ ಮಟ್ಟದ ಹಣ ಎಲ್ಲಿಂದ ಹರಿದುಬಂತು ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖಾ ಸಂಸ್ಥೆಗಳ ಪ್ರವೇಶ ಅಗತ್ಯ ಎಂದು ದೂರುದಾರ ವಕೀಲರು ಪ್ರತಿಪಾದಿಸಿದ್ದಾರೆ. “ದೇಶದ ಸಂವಿಧಾನ ಮತ್ತು ಕಾನೂನಿನ ಮುಂದೆ ಶ್ರೀಮಂತರು ಅಥವಾ ಪ್ರಭಾವಿಗಳು ಎಂಬ ತಾರತಮ್ಯವಿಲ್ಲ; ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಒಂದೇ” ಎಂದು ಉಲ್ಲೇಖಿಸಿರುವ ಅವರು, ದರ್ಶನ್ ಕೇಸಿನ ನೆಪದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ನಗದು ವಹಿವಾಟಿನ ಹಿನ್ನೆಲೆಯನ್ನು ಪಾರದರ್ಶಕವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಡಬಲ್ ಧಮಾಕಾ: ಅಭಿನಯದ ಜೊತೆಗೆ ಕರ್ನಾಟಕ ವಿತರಣೆಯೂ ಯಶ್ ಪಾಲು!
