ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ಕರ್ಮಫಲದಾತ ಹಾಗೂ ನ್ಯಾಯಾಧೀಶ ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ತಕ್ಕ ಫಲ ನೀಡುವ ಶನಿಯು (Shani Transit) ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹನಾಗಿದ್ದಾನೆ. ಗ್ರಹಗಳ ಚಲನೆಯ ಗಣತಿಯ ಪ್ರಕಾರ, 2027ನೇ ವರ್ಷವು ಜ್ಯೋತಿಷ್ಯ ಲೋಕದಲ್ಲಿ ಅತ್ಯಂತ ಮಹತ್ವದ ಹಾಗೂ ನಿರ್ಣಾಯಕ ವರ್ಷವಾಗಲಿದೆ. ಏಕೆಂದರೆ ಈ ವರ್ಷ ಶನಿದೇವನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿಯು ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹವಾಗಿದ್ದರೂ, ಆತನ ಗೋಚರ ಅಥವಾ ರಾಶಿ ಬದಲಾವಣೆಯ ಪ್ರಭಾವವು ದೀರ್ಘಕಾಲದವರೆಗೆ ಮತ್ತು ತೀವ್ರವಾಗಿ ಇರುತ್ತದೆ.
ಪ್ರಸಿದ್ಧ ಪುರೋಹಿತರಾದ ಉಮೇಶ್ ಭಟ್ ಅವರ ವರದಿ ಹಾಗೂ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, 2027ರ ಜೂನ್ 3ರಂದು ಶನಿದೇವನು ಮೀನ ರಾಶಿಯಿಂದ ನಿರ್ಗಮಿಸಿ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಈ ಬೃಹತ್ ರಾಶಿ ಬದಲಾವಣೆಯು ದೇಶ-ವಿದೇಶಗಳ ಜೊತೆಗೆ ಪ್ರತಿಯೊಬ್ಬರ ವೈಯಕ್ತಿಕ ಜೀವನದ ಮೇಲೂ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಶನಿಯ ಈ ಸಂಚಾರದಿಂದಾಗಿ ಕುಂಭ ರಾಶಿಯವರಿಗೆ ಸಾಡೇಸಾತಿಯಿಂದ ಸಂಪೂರ್ಣ ಮುಕ್ತಿ ಸಿಗಲಿದೆ ಹಾಗೂ ವೃಷಭ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. ಈ ಮಹತ್ವದ ಬದಲಾವಣೆಯಿಂದಾಗಿ ಮುಖ್ಯವಾಗಿ 4 ರಾಶಿಯವರು ಆರ್ಥಿಕ, ವೃತ್ತಿ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು. ಆ ನಾಲ್ಕು ರಾಶಿಗಳ ವಿವರ ಇಲ್ಲಿದೆ.
ಮೇಷ ರಾಶಿ: ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ
2027ರಲ್ಲಿ ಶನಿದೇವನ ಮೇಷ ರಾಶಿ ಪ್ರವೇಶವು ಈ ರಾಶಿಯವರಿಗೆ ಕೆಲವು ಹೊಸ ಸವಾಲುಗಳನ್ನು ತಂದೊಡ್ಡಲಿದೆ. ಈ ವರ್ಷ ನೀವು ನಿಮ್ಮ ದೈನಂದಿನ ನಡವಳಿಕೆ ಹಾಗೂ ಮಹತ್ವದ ನಿರ್ಧಾರಗಳ ಬಗ್ಗೆ ಅತೀವ ಎಚ್ಚರಿಕೆ ವಹಿಸುವುದು ಉತ್ತಮ. ವಿಶೇಷವಾಗಿ ಹಣಕಾಸಿನ ವಲಯದಲ್ಲಿ ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಯಾವುದೇ ಹೊಸ ಬಂಡವಾಳ ಹೂಡಿಕೆ ಮಾಡುವ ಮುನ್ನ ಅಥವಾ ದೊಡ್ಡ ಯೋಜನೆಗಳಿಗೆ ಕೈಹಾಕುವ ಮುನ್ನ ಹಿರಿಯರ ಸಲಹೆ ಪಡೆಯುವುದು ಸೂಕ್ತ. ಆತುರದಿಂದ ತೆಗೆದುಕೊಂಡ ನಿರ್ಧಾರಗಳು ಭವಿಷ್ಯದಲ್ಲಿ ಮಾನಸಿಕ ಆತಂಕವನ್ನು ಹೆಚ್ಚಿಸಲಿವೆ. ಯಾವುದೇ ಹೆಜ್ಜೆ ಇಡುವ ಮುನ್ನ ವಾಸ್ತವ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
ವೃಷಭ ರಾಶಿ: ಆರಂಭವಾಗಲಿದೆ ಸಾಡೇಸಾತಿಯ ಮೊದಲ ಹಂತ
ಶನಿದೇವನು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ ವೃಷಭ ರಾಶಿಯವರಿಗೆ ಸಾಡೇಸಾತಿಯ ಮೊದಲನೇ ಹಂತ ಅಧಿಕೃತವಾಗಿ ಶುರುವಾಗಲಿದೆ. ಹೀಗಾಗಿ 2027ನೇ ವರ್ಷವು ಈ ರಾಶಿಯವರಿಗೆ ಬಹಳ ಎಚ್ಚರಿಕೆಯಿಂದ ಕಳೆಯಬೇಕಾದ ವರ್ಷವಾಗಿದೆ. ಈ ಅವಧಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಉತ್ತಮ ಹೊಂದಾಣಿಕೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯ. ಸಣ್ಣಪುಟ್ಟ ಕಾರಣಗಳಿಗೂ ಮನೆಯವರೊಂದಿಗೆ ವಾದ-ವಿವಾದಕ್ಕಿಳಿಯದೆ, ಎದುರಾಗುವ ಸಮಸ್ಯೆಗಳನ್ನು ಶಾಂತಿಯಿಂದ ಹಾಗೂ ಸಂಯಮದಿಂದ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ದೈನಂದಿನ ಜವಾಬ್ದಾರಿಗಳನ್ನು ಅರಿತು ಮುನ್ಸುದೆದರೆ ಮುಂಬರುವ ಕಷ್ಟಗಳನ್ನು ಸುಲಭವಾಗಿ ದಾಟಬಹುದು.
ಕುಂಭ ರಾಶಿ: ಸಾಡೇಸಾತಿಯಿಂದ ಮುಕ್ತಿ, ಆದರೆ ವೃತ್ತಿಯಲ್ಲಿ ಶಿಸ್ತು ಇರಲಿ
ಕುಂಭ ರಾಶಿಯವರಿಗೆ ಶನಿಯ ಈ ಬದಲಾವಣೆಯಿಂದ ಸಾಡೇಸಾತಿಯ ಕಾಟದಿಂದ ಸಂಪೂರ್ಣ ಮುಕ್ತಿ ಸಿಗಲಿದೆ ಎಂಬುದು ಸಮಾಧಾನಕರ ಸಂಗತಿ. ಆದರೆ 2027ರಲ್ಲಿ ಕೆಲಸದ ಸ್ಥಳದಲ್ಲಿ ಮತ್ತು ಉದ್ಯೋಗದಲ್ಲಿ ಕಟ್ಟುನಿಟ್ಟಾದ ಶಿಸ್ತನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ವೃತ್ತಿಜೀವನದಲ್ಲಿ ಯಾವುದೇ ಪ್ರಮುಖ ಬದಲಾವಣೆ ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಸಾಧಕ-ಬಾಧಕಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿ. ಅಪೂರ್ಣ ಮಾಹಿತಿಯ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಇದರೊಂದಿಗೆ ನಿಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯವಾಗಿದ್ದು, ದೈನಂದಿನ ದಿನಚರಿಯನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಿ.
ಮೀನ ರಾಶಿ: ಎಚ್ಚರಿಕೆ ಹಾಗೂ ತಾಳ್ಮೆಯಿಂದ ಮುಂದುವರಿಯುವ ಕಾಲ
ಮೀನ ರಾಶಿಯವರು 2027ರಲ್ಲಿ ಪ್ರತಿ ಹಂತದಲ್ಲೂ ಬಹಳ ತಾಳ್ಮೆ ಹಾಗೂ ಜವಾಬ್ದಾರಿಯಿಂದ ಮುಂದುವರಿಯಬೇಕಾಗುತ್ತದೆ. ಕುಟುಂಬ ಹಾಗೂ ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಚರ್ಚಿಸುವಾಗ ನಾಲಿಗೆ ಹಾಗೂ ಮನಸ್ಸಿನ ಮೇಲೆ ಹಿಡಿತವಿಟ್ಟುಕೊಳ್ಳಿ. ಪರಸ್ಪರ ಭಿನ್ನಾಭಿಪ್ರಾಯಗಳು ಎದುರಾದಾಗ ತಕ್ಷಣವೇ ಆವೇಶದಿಂದ ಪ್ರತಿಕ್ರಿಯಿಸುವ ಬದಲು, ಕೂತು ಮಾತನಾಡಿ ಬಗೆಹರಿಸಿಕೊಳ್ಳುವುದು ಜಾಣತನ. ನಿಮ್ಮ ದೈನಂದಿನ ಕೆಲಸಗಳಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಮತ್ತು ಯಾವುದೇ ವಿಷಯದಲ್ಲೂ ಆತುರಪಡದೆ ಆಳವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಮುಂದುವರಿಯುವುದು ಈ ಸಮಯದಲ್ಲಿ ನಿಮಗೆ ಹೆಚ್ಚು ನೆರವಾಗಲಿದೆ.
ಇದನ್ನೂ ಓದಿ: ನವೆಂಬರ್ 16ರಿಂದ ಗ್ರಹಗಳ ರಾಜ ಸೂರ್ಯನ ವೃಶ್ಚಿಕ ಪ್ರವೇಶ: ಈ 5 ರಾಶಿಯವರ ಭಾಗ್ಯದ ಬಾಗಿಲು ಓಪನ್!
