ಲಂಡನ್: ಕಲ್ಲಿದ್ದಲು, ಅನಿಲ ಹಾಗೂ ತೈಲ ಸೇರಿದಂತೆ ವಿವಿಧ ಪಳೆಯುಳಿಕೆ ಇಂಧನಗಳ ಮಿತಿಮೀರಿದ ಬಳಕೆಯಿಂದಾಗಿ ಜಾಗತಿಕ ಹವಾಮಾನ ವೈಪರೀತ್ಯ (Heat Wave) ದಿನದಿಂದ ದಿನಕ್ಕೆ ಭೀಕರ ರೂಪ ತಾಳುತ್ತಿದೆ. ಇದರ ಪರಿಣಾಮವಾಗಿ ಮೆಕ್ಸಿಕೋ, ಇಟಲಿ ಹಾಗೂ ಕೀನ್ಯಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ ಪ್ರಸ್ತುತ ವರ್ಷಗಳಲ್ಲಿ ಹೆಚ್ಚುವರಿಯಾಗಿ ಒಂದರಿಂದ ಎರಡು ತಿಂಗಳುಗಳ ಕಾಲ ತೀವ್ರವಾದ ‘ಹೀಟ್ ಸ್ಟ್ರೆಸ್’ (ಉಷ್ಣತೆಯ ಒತ್ತಡ) ಎದುರಿಸುತ್ತಿವೆ ಎಂದು ಖ್ಯಾತ ವಿಜ್ಞಾನ ನಿಯತಕಾಲಿಕೆ ‘ನೇಚರ್ ಕ್ಲೈಮೇಟ್ ಚೇಂಜ್’ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯೊಂದು ಗಂಭೀರ ಎಚ್ಚರಿಕೆ ನೀಡಿದೆ.
ಏನಿದು ‘ಫೀಲ್ಸ್-ಲೈಕ್’ ತಾಪಮಾನ? ಮನುಷ್ಯನಿಗೆ ಏಕೆ ಅಪಾಯಕಾರಿ? ಈ ಹೊಸ ಅಧ್ಯಯನದಲ್ಲಿ ವಿಜ್ಞಾನಿಗಳು ಕೇವಲ ವಾತಾವರಣದ ಸಾಮಾನ್ಯ ಉಷ್ಣಾಂಶವನ್ನು ಮಾತ್ರ ಲೆಕ್ಕ ಹಾಕಿಲ್ಲ. ಬದಲಾಗಿ ತೇವಾಂಶ (ಹ್ಯುಮಿಡಿಟಿ) ಮತ್ತು ಗಾಳಿಯ ವೇಗವನ್ನು ಒಳಗೊಂಡ ‘ಫೀಲ್ಸ್-ಲೈಕ್ ತಾಪಮಾನ’ (ಅಂದರೆ ಮಾನವನ ದೇಹಕ್ಕೆ ನೈಜವಾಗಿ ಅನುಭವಕ್ಕೆ ಬರುವ ತಾಪಮಾನ) ಆಧಾರದ ಮೇಲೆ ಸಂಶೋಧನೆ ನಡೆಸಿದ್ದಾರೆ. ಗಾಳಿಯಲ್ಲಿ ಅತಿಯಾದ ಶಾಖ ಮತ್ತು ತೇವಾಂಶ ಒಟ್ಟಿಗೆ ಸೇರಿದಾಗ ಅದು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ಒಣ ಹವೆಗಿಂತ ತೇವಾಂಶಯುಕ್ತ ಬಿಸಿಗಾಳಿ ತುಂಬಾನೇ ಅಪಾಯಕಾರಿ. ಏಕೆಂದರೆ, ವಾತಾವರಣದಲ್ಲಿ ಹ್ಯುಮಿಡಿಟಿ ಹೆಚ್ಚಾದಾಗ ದೇಹವನ್ನು ನೈಸರ್ಗಿಕವಾಗಿ ತಂಪು ಮಾಡುವ ‘ಬೆವರಿನ ಪ್ರಕ್ರಿಯೆ’ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ದೇಹವು ಬೇಗನೆ ತಂಪಾಗಲು ಸಾಧ್ಯವಾಗದೆ ಮನುಷ್ಯನ ಜೀವಕ್ಕೇ ಕಂಟಕ ಎದುರಾಗುತ್ತದೆ. ಕಳೆದ ಆರು ದಶಕಗಳಲ್ಲಿ ಇಂತಹ ಉಷ್ಣವಲಯದ ರಾತ್ರಿಗಳು (ಟ್ರಾಪಿಕಲ್ ನೈಟ್ಸ್) ಮತ್ತು ತೇವಾಂಶದ ತೀವ್ರತೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಂಶೋಧಕರು ಆತಂಕ ಹೊರಹಾಕಿದ್ದಾರೆ.
100 ಕೋಟಿಗೂ ಹೆಚ್ಚು ಜನರಿಗೆ ನೇರ ಪರಿಣಾಮ! ವರದಿಯ ಸಾರಾಂಶದ ಪ್ರಕಾರ, ಪೂರ್ವ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೋದ ಕೆಲವು ಪ್ರಾಂತ್ಯಗಳಲ್ಲಿ 1970ರ ದಶಕದ ದಿನಗಳಿಗೆ ಹೋಲಿಸಿದರೆ ವಾರ್ಷಿಕವಾಗಿ ಸುಮಾರು 50ಕ್ಕೂ ಹೆಚ್ಚು ದಿನಗಳು ಅತಿಯಾದ ಉಷ್ಣದ ಒತ್ತಡ ದಾಖಲಾಗುತ್ತಿವೆ. ಇತ್ತ ದಕ್ಷಿಣ ಯುರೋಪ್ ಪ್ರಾಂತ್ಯಗಳು ಹಾಗೂ ಅಮೆರಿಕದ ಟೆಕ್ಸಾಸ್, ಫ್ಲೋರಿಡಾದಂತಹ ಭಾಗಗಳೂ ಕೂಡ ಕನಿಷ್ಠ ಒಂದು ತಿಂಗಳಿನಷ್ಟು ಸುಡುವ ಬೇಸಿಗೆಯ ದಿನಗಳನ್ನು ಹೆಚ್ಚುವರಿಯಾಗಿ ಕಾಣುತ್ತಿವೆ. ಇನ್ನು ರಾತ್ರಿಯ ಅವಧಿಯಲ್ಲೂ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿಯುತ್ತಿಲ್ಲ. ಹೀಗಾಗಿ ಹಗಲಿನ ಸುಡುವ ಬಿಸಿಲಿನಿಂದ ಹೈರಾಣಾಗುವ ಜನರಿಗೆ ರಾತ್ರಿಯ ವೇಳೆಯಲ್ಲೂ ದೇಹವನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಒಟ್ಟಾರೆ ಪರಿಣಾಮವಾಗಿ, 1970ರ ದಶಕಕ್ಕೆ ಹೋಲಿಸಿದರೆ ಇಂದು ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಹೆಚ್ಚುವರಿ ಜನರು ವರ್ಷದಲ್ಲಿ ಕನಿಷ್ಠ ಒಂದು ದಿನವಾದರೂ ತೀವ್ರ ಉಷ್ಣದ ಬೇಗೆಗೆ ಸಿಲುಕುವಂತಾಗಿದೆ.
ಈ ಜಾಗತಿಕ ಹವಾಮಾನ ಆಪತ್ತಿನಿಂದ ಮಾನವ ಕುಲವನ್ನು ರಕ್ಷಿಸಬೇಕಾದರೆ ಭವಿಷ್ಯದ ತಾಪಮಾನ ಏರಿಕೆಯನ್ನು ತಡೆಗಟ್ಟುವುದು ಮತ್ತು ಮುಂಚೂಣಿ ತಾಪಮಾನ ಎಚ್ಚರಿಕೆ ವ್ಯವಸ್ಥೆಗಳನ್ನು (Early Warning Systems) ಜಾಗತಿಕವಾಗಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಬ್ರಿಟನ್‌ನ ಹವಾಮಾನ ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ಈ ವರದಿಯ ಮುಖ್ಯ ಲೇಖಕಿ ರೆಬೆಕ್ಕಾ ಎಮರ್ಟನ್ ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ರಕ್ಷಣಾ ರಂಗದಲ್ಲಿ ಭಾರತದ ಹವಾ: ಬ್ರಹ್ಮೋಸ್, ಆಕಾಶತೀರ್ ಖರೀದಿಗೆ ಯುಎಇ ಭಾರಿ ಆಸಕ್ತಿ
