TOP NEWS

Rahul Gandhi: ಮೋದಿ ಮತ್ತು ಅವರ ತಾಯಿಗೆ ಅಪಮಾನ ಆರೋಪ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಭಾರಿ ಆಕ್ರೋಶ!

Political Storm Over Indore Event BJP Accuses Rahul Gandhi of Laughing at Insults to PM Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವೃದ್ಧೆಯೊಬ್ಬರೊಂದಿಗೆ ನಡೆಸಿದ ಸಂವಾದವನ್ನು ರಾಹುಲ್ ಗಾಂಧಿ (Rahul Gandhi) ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಣಕು ಮಾಡಲಾಗಿರುವುದು ಇದೀಗ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ‘ಛತ್ರೋನ್ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಭೀರ ಆರೋಪ ಮಾಡಿದ ಬಿಜೆಪಿ

ಕಾರ್ಯಕ್ರಮದ ವೇದಿಕೆಯಲ್ಲಿ ಕಮಿಡಿಯನ್ ಪುಲ್ಕಿತ್ ಮನಿ ಎಂಬುವವರು ಕಾಮಿಡಿ ಶೋ ನಡೆಸಿಕೊಡುತ್ತಿದ್ದರು. ಈ ವೇಳೆ ಅವರು ಪ್ರಧಾನಿ ಮೋದಿ ಅವರ ಮಾತನಾಡುವ ಶೈಲಿ, ವಿದೇಶಿ ನಾಯಕರೊಂದಿಗಿನ ಭೇಟಿಯ ನಡೆ-ನುಡಿ ಹಾಗೂ ಇತ್ತೀಚೆಗೆ ಮೋದಿಯವರು ವೃದ್ಧೆಯೊಬ್ಬರ ಬಳಿ ಮಾತನಾಡಿದ ಪ್ರಸಂಗವನ್ನು ಅಣಕು ಪ್ರದರ್ಶನ ಮಾಡಿದರು. ಇದಷ್ಟೇ ಅಲ್ಲದೆ, ಪ್ರಧಾನಿಯವರ ವಿದೇಶಾಂಗ ನೀತಿ, ಅವರ ದಿವಂಗತ ತಾಯಿ ಮತ್ತು ಮಕ್ಕಳೊಂದಿಗೆ ಮಾಡಿದ ನಾಣ್ಯದ ಟ್ರಿಕ್‌ಗಳ ಕುರಿತಾಗಿಯೂ ಹಾಸ್ಯ ಪ್ರಸಂಗಗಳನ್ನು ಉಲ್ಲೇಖಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ಅವರು ನಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಪ್ರಧಾನಿಯವರನ್ನು ಹಾಗೂ ಅವರ ತಾಯಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಈ ಘಟನೆಯ ವಿಡಿಯೋ ಹಂಚಿಕೊಂಡು ಎಕ್ಸ್ (X) ಖಾತೆಯಲ್ಲಿ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಘಟಕ, ಒಂದು ಕಡೆ ಪ್ರಧಾನಿ ಮೋದಿ ಅವರು ಹಿರಿಯ ತಾಯಿಗೆ ಗೌರವ ಮತ್ತು ಪ್ರೀತಿಯನ್ನು ನೀಡಿದರೆ, ಇನ್ನೊಂದೆಡೆ ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಅವರನ್ನು ಅಣಕು ಮಾಡಿ ನಗುತ್ತಿದ್ದಾರೆ. ಇದು ಮೌಲ್ಯಗಳ ರಾಜಕೀಯಕ್ಕೂ ಮತ್ತು ಪ್ರದರ್ಶನಕಾರಿ ರಾಜಕೀಯಕ್ಕೂ ಇರುವ ಪ್ರಮುಖ ವ್ಯತ್ಯಾಸ ಎಂದು ವೀಡಿಯೋಗೆ ಶೀರ್ಷಿಕೆ ನೀಡಿದೆ. ಈ ವಿಚಾರವಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿದಾಯ್ದಿದ್ದಾರೆ.

ಕಾಂಗ್ರೆಸ್‌ ನೈತಿಕತೆ ಕುಸಿದಿದೆ

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ನೈತಿಕವಾಗಿ ತೀರಾ ಕೆಳಮಟ್ಟಕ್ಕೆ ಕುಸಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರ ದಿವಂಗತ ತಾಯಿಯನ್ನು ನಿಂದಿಸಲು ಮತ್ತು ಅಪಹಾಸ್ಯ ಮಾಡಲು ಬಳಸಿಕೊಂಡಿರುವುದು ಮಾನವೀಯತೆ ಹಾಗೂ ರಾಜಕೀಯ ಸಂಸ್ಕೃತಿಯ ಅಭಾವವನ್ನು ತೋರಿಸುತ್ತದೆ ಎಂದಿದ್ದಾರೆ. ಉತ್ತರಾಖಂಡ ಸಿಎಂ ಧಾಮಿ ಮಾತನಾಡಿ, ತಾಯಿ ಎಂದಿಗೂ ರಾಜಕೀಯದ ವಸ್ತುವಲ್ಲ, ನಾಗರಿಕ ಸಮಾಜದಲ್ಲಿ ತಾಯಿಗೆ ಆಗುವ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಖಂಡಿಸಿದ್ದಾರೆ. ಹಾಗೆಯೇ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಅವರು, ಮಹಿಳೆಯರನ್ನು ಮತ್ತು ಹಿರಿಯರನ್ನು ನಿಂದಿಸುವವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅನಾಗರಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆಯು ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಟೆಹ್ರಾನ್‌ನಲ್ಲಿ ಹಿಜಾಬ್ ಮುಕ್ತ ಓಟ: ಕಡ್ಡಾಯ ನಿಯಮ ಮೀರಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಇರಾನ್ ಮಹಿಳೆಯರು!

Leave a Reply

Your email address will not be published. Required fields are marked *