ಮುಂಬೈ: ನಟಿ ಶ್ರುತಿ ಹಾಸನ್ (Shruti Hassan) ತಮ್ಮ ಮುಟ್ಟಿನ ಸಮಯದ ತೀವ್ರ ನೋವು ಮತ್ತು ಮುಟ್ಟಿನ ಆರೋಗ್ಯದ ಕುರಿತು ಸಮಾಜದಲ್ಲಿರುವ ಅರಿವಿನ ಕೊರತೆಯ ಬಗ್ಗೆ ಇತ್ತೀಚೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಮಹಿಳೆಯರು ಎದುರಿಸುವ ಈ ಮಾಸಿಕ ಸವಾಲನ್ನು ಪುರುಷರೂ ಸಹ ಅನುಭವಿಸುವಂತಿದ್ದರೆ ಇದರ ಗಾಂಭೀರ್ಯ ಅವರಿಗೆ ಅರ್ಥವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಪ್ರಮುಖವಾಗಿ ಉದ್ಯೋಗ ಒಪ್ಪಂದಗಳಲ್ಲಿಯೇ ಮುಟ್ಟಿನ ರಜೆಯನ್ನು (ಪಿರಿಯಡ್ ಲಿವ್) ಕಡ್ಡಾಯವಾಗಿ ಸೇರಿಸಬೇಕು ಎಂಬುದು ತಮ್ಮ ಇಚ್ಛೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಟ್ಟಿನ ನೋವನ್ನು ಬಹುತೇಕ ಸಂದರ್ಭಗಳಲ್ಲಿ ಗಂಭೀರವಾಗಿ ಪರಿಗಣಿಸದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೈಯಕ್ತಿಕ ಅನುಭವಗಳನ್ನ ಹಂಚಿಕೊಂಡ ನಟಿ
ನಟಿ ಸೋಹಾ ಅಲಿ ಖಾನ್ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ಶ್ರುತಿ, ಮುಟ್ಟಿನ ಕುರಿತು ಸಮಾಜದಲ್ಲಿರುವ ತಪ್ಪು ಪರಿಕಲ್ಪನೆಗಳು ಮತ್ತು ತಾವು ವೈಯಕ್ತಿಕವಾಗಿ ಎದುರಿಸಿದ ಅನುಭವಗಳನ್ನು ಹಂಚಿಕೊಂಡರು. “ಇದಕ್ಕಿರುವ ಒಂದೇ ಪರಿಹಾರವೆಂದರೆ ಪುರುಷರಿಗೂ ಮುಟ್ಟು ಬರಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಹಾಗೇನಾದರೂ ಆದಲ್ಲಿ, ಉದ್ಯೋಗಿಗಳಿಗೆ ಸಿಗುವ ಒಪ್ಪಂದ ಪತ್ರಗಳಲ್ಲೇ ‘ಪಿರಿಯಡ್ ರಜೆ’ಗಳನ್ನು ಕಡ್ಡಾಯವಾಗಿ ಸೇರಿಸಲಾಗುತ್ತದೆ” ಎಂದು ಶ್ರುತಿ ತಮಾಷೆಯಾಗಿ ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಸೋಹಾ ಅಲಿ ಖಾನ್, ಪುರುಷರಿಗೆ ಮುಟ್ಟು ಬರುವಂತಿದ್ದರೆ ಅವರು ರಕ್ತಸ್ರಾವದ ಪ್ರಮಾಣ ಮತ್ತು ಟ್ಯಾಂಪೂನ್ಗಳ ಗಾತ್ರದ ಮೇಲೆಯೇ ಸ್ಪರ್ಧೆಗೆ ಇಳಿಯುತ್ತಿದ್ದರು ಎಂದು ತಮಾಷೆ ಮಾಡಿದರು.
ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿರುವ ಶ್ರುತಿ ಹಾಸನ್, ತಮಗೆ ಮುಟ್ಟಿನ ದಿನಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಈ ವಿಷಯವನ್ನು ಯಾರ ಬಳಿಯೂ ಚರ್ಚಿಸುತ್ತಿರಲಿಲ್ಲ, ಏಕೆಂದರೆ ಜನರು ಈ ವಿಷಯವನ್ನು ಕೇಳಲು ಇಷ್ಟಪಡುವುದಿಲ್ಲ ಎಂದು ಭಾವಿಸಿದ್ದಾಗಿ ಅವರು ನೆನಪಿಸಿಕೊಂಡರು. ಆದರೆ, ಒಮ್ಮೆ ನಿರ್ದೇಶಕರೊಬ್ಬರಿಗೆ ಈ ವಿಷಯ ತಿಳಿಸಿದಾಗ, ಅವರು ಧನಾತ್ಮಕವಾಗಿ ಸ್ಪಂದಿಸಿದರು. ಆ ನಿರ್ದೇಶಕರ ಮಗಳಿಗೂ ತೀವ್ರ ರೀತಿಯ ಮುಟ್ಟಿನ ನೋವಿತ್ತು. ಹೀಗಾಗಿ ಅವರು ತಮ್ಮ ಪರಿಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಂಡರು ಎಂದು ಶ್ರುತಿ ತಿಳಿಸಿದ್ದಾರೆ.
ಶ್ರುತಿ ಮುಂದಿನ ಸಿನಿಮಾ ಯಾವುದು?
ತಮ್ಮ ಶಾರೀರಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಶ್ರುತಿ ನಿರ್ಧರಿಸಿದ್ದಕ್ಕೂ ಒಂದು ವಿಶೇಷ ಕಾರಣವಿದೆ. ಸಹನಟರೊಬ್ಬರು ತಮಗೆ ಮೊಣಕಾಲು ಶಸ್ತ್ರಚಿಕಿಚಿಕಿತ್ಸೆಯಾಗಿದೆ ಎಂದು ಹೇಳಿದಾಗ, ಚಲನಚಿತ್ರ ತಂಡವು ಅವರ ಪರಿಸ್ಥಿತಿಗೆ ತಕ್ಕಂತೆ ಚಿತ್ರೀಕರಣದ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡಿದ್ದನ್ನು ಅವರು ಗಮನಿಸಿದರು. ಶಾರೀರಿಕ ಅಸ್ವಸ್ಥತೆಯನ್ನು ಮುಕ್ತವಾಗಿ ಹಂಚಿಕೊಂಡಾಗ ಕೆಲಸದ ವಾತಾವರಣವು ಪರಸ್ಪರ ಸಹಕಾರದಿಂದ ಕೂಡ ಕೂಡಿರುತ್ತದೆ ಎಂಬುದನ್ನು ಅರಿತ ಶ್ರುತಿ, ಅಂದಿನಿಂದ ತಮಗೂ ಮುಟ್ಟಿನ ನೋವಿದ್ದಾಗ ಅದನ್ನು ಮುಚ್ಚಿಡದೆ ಮುಕ್ತವಾಗಿ ಹೇಳಲು ಪ್ರಾರಂಭಿಸಿದರು.
ಶ್ರುತಿ ಹಾಸನ್ ಅವರು ಕೊನೆಯದಾಗಿ 2025 ರಲ್ಲಿ ತೆರೆಕಂಡ ‘ಕೂಲಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂಬರುವ ದಿನಗಳಲ್ಲಿ ಅವರು ವಿಜಯ್ ಸೇತುಪತಿ ಜೊತೆ ‘ಟ್ರೇನ್’ ಮತ್ತು ದುಲ್ಕರ್ ಸಲ್ಮಾನ್ ಜೊತೆ ‘ಆಕಾಶಂಲೊ ಒಕ ತಾರಾ’ ಚಿತ್ರಗಳಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ, ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ವಾರಣಾಸಿ’ ಚಿತ್ರದ ಹಾಡೊಂದಕ್ಕೆ ಅವರು ಧ್ವನಿಯಾಗಿದ್ದಾರೆ. ವಾರಣಾಸಿ ನಗರಕ್ಕೆ ಕ್ಷುದ್ರಗ್ರಹದ ಬೆದರಿಕೆ ಎದುರಾಗುವ ಕಥಾಹಂದರ ಹೊಂದಿರುವ ಈ ಸಿನಿಮಾ, ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಜಾಗತಿಕ ಸಾಹಸ ಕಥೆಯನ್ನು ವಿಭಿನ್ನ ಕಾಲಘಟ್ಟಗಳಲ್ಲಿ ತೆರೆದಿಡಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಸುದೀಪ್ ಖಡಕ್ ಕ್ಲಾಸ್: ವಾರದ ಪಂಚಾಯ್ತಿಯಲ್ಲಿ ನಿಯಮ ಮೀರಿದ ಸ್ಪರ್ಧಿಗಳಿಗೆ ಚಾಟಿ!
