TOP NEWS

Bigg Boss: ಬಿಗ್ ಬಾಸ್‌ನಲ್ಲಿ ಸುದೀಪ್ ಖಡಕ್ ಕ್ಲಾಸ್: ವಾರದ ಪಂಚಾಯ್ತಿಯಲ್ಲಿ ನಿಯಮ ಮೀರಿದ ಸ್ಪರ್ಧಿಗಳಿಗೆ ಚಾಟಿ!

Bigg Boss Kannada Season 13 Update Sudeep Confronts Contestants Over Misbehavior in Week 2 Panchayat

ಬೆಂಗಳೂರು: ಬಿಗ್ ಬಾಸ್ (Bigg Boss) ಕನ್ನಡ ಸೀಸನ್ ೧೩ ರ ಎರಡನೇ ವಾರದ ‘ಕಿಚ್ಚನ ಪಂಚಾಯ್ತಿ’ಯ ಸಂಚಿಕೆ ತೀವ್ರ ಕುತೂಹಲ ಮೂಡಿಸಿದ್ದು, ನಿರೂಪಕ ಕಿಚ್ಚ ಸುದೀಪ್ ಅವರು ನಿಯಮ ಮೀರಿದ ಹಾಗೂ ಅಸಭ್ಯವಾಗಿ ವರ್ತಿಸಿದ ಸ್ಪರ್ಧಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ನೂತನ ಪ್ರೋಮೋ ಈ ವಾರದ ಪಂಚಾಯ್ತಿ ಎಷ್ಟು ಕಾವು ಪಡೆದುಕೊಂಡಿರಲಿದೆ ಎಂಬುದರ ಸುಳಿವು ನೀಡಿದೆ.

ಗಡಿ ಮೀರಿದ ದೊಡ್ಮನೆಯಲ್ಲಿ ವಾಗ್ದಾಳಿ ಹಾಗೂ ಜಗಳಗಳು

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದೊಡ್ಮನೆಯಲ್ಲಿ ವಾಗ್ದಾಳಿ ಹಾಗೂ ಜಗಳಗಳ ಗಡಿ ಮೀರಿದೆ. ವಿಶೇಷವಾಗಿ ಮಾಡರ್ನ್ ಕವಿ ಮಂಜ್ಯಾ, ಕಿರಣ್ ಶಾಸ್ತ್ರಿ ಮತ್ತು ಸೌಂದರ್ಯ ಶೆಟ್ಟಿ ಅವರ ನಡುವಿನ ಶೀತಲ ಸಮರ ಹಾಗೂ ಗಲಾಟೆಗಳು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿವೆ. ಮನೆಗೆ ಪ್ರವೇಶಿಸಿದ ಕಿರಣ್ ಶಾಸ್ತ್ರಿ ಅವರು ಸಹ-ಸ್ಪರ್ಧಿಗಳಿಗೆ “ಬಳೆ ಹಾಕಿಕೋ” ಎನ್ನುವಂತಹ ವಿವಾದಾತ್ಮಕ ಮಾತುಗಳನ್ನಾಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸೀಸನ್ ೧೦ ರ ಬಳಿಕ ಇಂತಹ ಹೇಳಿಕೆಗಳು ಬಂದಿರಲಿಲ್ಲವಾದರೂ, ಕಿರಣ್ ಶಾಸ್ತ್ರಿ ಅವರ ಈ ಮಾತುಗಳಿಗೆ ಸುದೀಪ್ ವೇದಿಕೆಯಲ್ಲಿ ಕಠಿಣ ಎಚ್ಚರಿಕೆ ನೀಡುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಇತ್ತ ಸದಾ ಶಾಂತ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಿದ್ದ ಅವಿನಾಶ್ ಸಹ ಮಂಜ್ಯಾನ ಕಿರಿಕಿರ ತಾಳ್ಮೆ ಕಳೆದುಕೊಂಡು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ಕೋಪದ ರಭಸದಲ್ಲಿ ಕೈಯಲ್ಲಿದ್ದ ನೀರಿನ ಬಾಟಲಿಯನ್ನು ನೆಲಕ್ಕೆ ಅಪ್ಪಳಿಸಿ ಅಬ್ಬರಿಸಿದ್ದಾರೆ. ಮತ್ತೊಂದೆಡೆ ಸೌಂದರ್ಯ ಶೆಟ್ಟಿ ಮತ್ತು ಮಂಜ್ಯ ನಡುವಿನ ವೈಯಕ್ತಿಕ ಕಿತ್ತಾಟ ಭೌತಿಕ ಹಲ್ಲೆಯ ಹಂತಕ್ಕೂ ತಲುಪಿದ್ದು, ಸೌಂದರ್ಯ ಅವರು ಮಂಜ್ಯಾನಿಗೆ ಹೊಡೆದಿರುವುದು ಮನೆ ಮಂದಿಯನ್ನು ಬೆಚ್ಚಿಬೀಳಿಸಿದೆ.

ಸರಿಯಾಗಿ ಕ್ಲಾಸ್‌ ತೆಗೆದುಕೊಂಡ ಕಿಚ್ಚ ಸುದೀಪ್

ಈ ಎಲ್ಲಾ ಅಹಿತಕರ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಿಚ್ಚ ಸುದೀಪ್, ಪ್ರೋಮೋದಲ್ಲಿ ಸ್ಪರ್ಧಿಗಳಿಗೆ ಪ್ರಸಕ್ತ ವಾರದ ವರ್ತನೆಯ ಕುರಿತು ಖಾರವಾದ ಪ್ರಶ್ನೆಗಳನ್ನು ಎಸೆದಿದ್ದಾರೆ. ಬಿಗ್ ಬಾಸ್ ನೀಡಿದ ಅವಕಾಶ ಹಾಗೂ ವೇದಿಕೆಗೆ ಗೌರವ ನೀಡಲಾಗುತ್ತಿದೆಯೇ? ಮಾತಿನ ಮಿತಿಗಳನ್ನು ಮೀರಿ ನಡೆದುಕೊಳ್ಳಲಾಗುತ್ತಿದೆಯೇ? ಮನೆಯೊಳಗಿನ ಸ್ಪರ್ಧಿಗಳು ಮಾನವೀಯತೆಯನ್ನು ಮರೆಯುತ್ತಿದ್ದಾರೆಯೇ? “ನಾನು ಮಾಡಿದ್ದೇ ಸರಿ” ಎನ್ನುವ ಮೂರ್ಖತನದ ಅಹಂ ತಲೆಗೇರಿದೆಯೇ? ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯ ತಪ್ಪುಗಳನ್ನು ಎತ್ತಿಹಿಡಿಯುವ ಈ ವಾರದ ಪಂಚಾಯ್ತಿ ಸಂಚಿಕೆಯು ಅತ್ಯಂತ ರೋಚಕವಾಗಿರಲಿದೆ.

ಇದನ್ನೂ ಓದಿ: ಅಪ್ಪು ಅಗಲಿಕೆ ವೇಳೆ ನಿಂದನಾತ್ಮಕ ಪೋಸ್ಟ್: ಹೈಕೋರ್ಟ್‌ನಿಂದ ಯುವಕನಿಗೆ ತೀವ್ರ ತರಾಟೆ

Leave a Reply

Your email address will not be published. Required fields are marked *