Sandalwood: ಬಣ್ಣದ ಲೋಕದಲ್ಲಿ ಮತ್ತೆ ಅಣ್ಣಾವ್ರ ಕ್ರೇಜ್: ಚಿತ್ರಮಂದಿರಗಳಿಗೆ ಬರಲಿದೆ ‘ಜಗಮೆಚ್ಚಿದ ಮಗ’!

Sandalwood Black and White to Vivid Color Dr Rajkumar Starrer Jagamechida maga Restored with 5 1 Surround Sound

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಸಾರ್ವಕಾಲಿಕ ಯಶಸ್ವಿ ಚಲನಚಿತ್ರ ‘ಜಗಮೆಚ್ಚಿದ ಮಗ’ ಇದೀಗ ನೂತನ ರಂಗಿನಲ್ಲಿ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದೆ. ದಶಕಗಳ (Sandalwood) ಹಿಂದೆ ಕಪ್ಪು-ಬಿಳುಪಿನಲ್ಲಿ ಮೂಡಿಬಂದು ಇಡೀ ಕರುನಾಡನ್ನು ಮಂತ್ರಮುಗ್ಧಗೊಳಿಸಿದ್ದ ಈ ಕ್ಲಾಸಿಕ್ ಸಿನಿಮಾ, ಆಧುನಿಕ ಬಣ್ಣದ ಸ್ಪರ್ಶದೊಂದಿಗೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲದೊಡನೆ ಶೀಘ್ರದಲ್ಲೇ ಮರು ಬಿಡುಗಡೆಯಾಗಲಿದೆ.

ಚಿತ್ರದ ಕಲರ್ ವರ್ಷನ್ ಬಿಡುಗಡೆ

ಬರುವ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಸೂಪರ್ ಹಿಟ್ ಚಿತ್ರದ ಕಲರ್ ವರ್ಷನ್ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ. ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಗುರುತಿಸಿಕೊಂಡಿರುವ ಎಸ್.ಜೆ. ಉದಯ್ ಶಂಕರ್ ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಡಾ. ರಾಜ್ ಅವರ ಪರಮ ಅಭಿಮಾನಿಯಾಗಿರುವ ಇವರು, ಅಣ್ಣಾವ್ರ ಈ ಹಳೆಯ ಕಪ್ಪು-ಬಿಳುಪು ಕಲಾಕೃತಿಯನ್ನು ಇಂದಿನ ಡಿಜಿಟಲ್ ಕಾಲಘಟ್ಟಕ್ಕೆ ತಕ್ಕಂತೆ ಸಿನಿಮಾಸ್ಕೋಪ್ ಹಾಗೂ 5.1 ಸರೌಂಡ್ ಸೌಂಡ್ ಸೌಲಭ್ಯದೊಂದಿಗೆ ಹೊಸತನ ನೀಡಿ ತೆರೆಗೆ ತರುತ್ತಿದ್ದಾರೆ.

೧೯೭೨ರಲ್ಲಿ ತೆರೆಕಂಡಿದ್ದ ಈ ಭವ್ಯ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ರಂಗಭೂಮಿ ಹಾಗೂ ಚಿತ್ರರಂಗದ ದಿಗ್ಗಜರಾದ ಭಾರತಿ ವಿಷ್ಣುವರ್ಧನ್, ಕೆ.ಎಸ್. ಅಶ್ವಥ್, ಎಂ.ಪಿ. ಶಂಕರ್ ಮತ್ತು ಶಕ್ತಿ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನದ ಜವಾಬ್ದಾರಿ ಹೊರಿದ್ದರೆ, ಭಾವನನಾರಾಯಣ್ ಅವರು ಕಥೆ ಬರೆದು ನಿರ್ಮಾಣದ ಹೊಣೆ ಹೊತ್ತಿದ್ದರು. ಜಿ. ಕೆ. ವೆಂಕಟೇಶ್ ಹಾಗೂ ಸತ್ಯಂ ಅವರ ಅದ್ಭುತ ಸಂಗೀತ ನಿರ್ದೇಶನ ಚಿತ್ರಕ್ಕಿತ್ತು.

ಈ ಹಿಂದೆ ಡಾ. ರಾಜ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಹಾಗೂ ‘ಕಸ್ತೂರಿ ನಿವಾಸ’ ಚಿತ್ರಗಳು ಬಣ್ಣದಲ್ಲಿ ಮರು ಬಿಡುಗಡೆಯಾಗಿ ಕನ್ನಡಿಗರ ಪ್ರೀತಿ ಗಳಿಸಿದ್ದವು. ಆ ಸಾಲಿಗೆ ಈಗ ‘ಜಗಮೆಚ್ಚಿದ ಮಗ’ ಸೇರ್ಪಡೆಯಾಗುತ್ತಿದೆ. ಹಳೆಯ ಬ್ಲ್ಯಾಕ್ ಅಂಡ್ ವೈಟ್ ರೀಲನ್ನು ಡಿಜಿಟಲೈಸ್ ಮಾಡಿ ಬಣ್ಣ ತುಂಬುವುದು ಸುಲಭದ ಮಾತಾಗಿರಲಿಲ್ಲ. ಚೆನ್ನೈನ ಪ್ರಸಿದ್ಧ ಪ್ರಸಾದ್ ಸ್ಟುಡಿಯೋದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ರಾತ್ರಿ-ಹಗಲು ಶ್ರಮಿಸಿ ಈ ತಾಂತ್ರಿಕ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಈ ಚಿತ್ರದ ಯಶಸ್ಸಿನ ನಂತರ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನೂ ಬಣ್ಣದಲ್ಲಿ ತರುವ ಆಲೋಚನೆ ಉದಯ್ ಶಂಕರ್ ಅವರಿಗಿದೆ.

ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ

ಚಿತ್ರದ ಮರು ಬಿಡುಗಡೆಯ ಮುನ್ಸೂಚನೆಯಾಗಿ, ಆಗಸ್ಟ್ ತಿಂಗಳಿನಲ್ಲಿ ಡಾ. ರಾಜ್‌ಕುಮಾರ್ ಅವರ ಆಪ್ತ ಸಹಾಯಕ ವಜ್ರೇಶ್ವರಿ ಚೆನ್ನಣ್ಣ ಅವರ ಹಸ್ತದಿಂದ ಕಂಠೀರವ ಸ್ಟುಡಿಯೋದ ಅಣ್ಣಾವ್ರ ಸ್ಮಾರಕದ ಎದುರು ಈ ಬಣ್ಣದ ಚಿತ್ರದ ಪೋಸ್ಟರ್ ಅನ್ನು ಅಭಿಮಾನಿಗಳು ಅನಾವರಣಗೊಳಿಸಿದ್ದರು. ರಾಜ್ಯೋತ್ಸವದ ವೇಳೆಗೆ ಗಾಂಧಿನಗರ ಸೇರಿದಂತೆ ಇಡೀ ರಾಜ್ಯದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದ್ದು, ಡಾ. ರಾಜ್ ಅಭಿಮಾನಿಗಳು ಈ ಐತಿಹಾಸಿಕ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸತತ 5 ಸಿನಿಮಾಗಳ ಸೋಲು: ನಟನೆಯಿಂದ ದೂರವುಳಿಯಲು ಅಸಲಿ ಕಾರಣ ಬಿಚ್ಚಿಟ್ಟ ಅನಂತ್ ನಾಗ್!

Leave a Reply

Your email address will not be published. Required fields are marked *