ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬಹಿರಂಗ ವಾಗ್ದಾಳಿ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ನಟ ದರ್ಶನ್ ಅವರ ಆಪ್ತ ಗೆಳೆಯರಲ್ಲೊಬ್ಬರಾಗಿದ್ದ ಧನ್ವೀರ್, ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಅವರ ಕುಟುಂಬದ ವಿರುದ್ಧ ಕಟು ಮಾತುಗಳಿಂದ ವಾಗ್ದಾಳಿ ನಡೆಸಿದ್ದರು. ಇದಕ್ಕೆ ವಿಜಯಲಕ್ಷ್ಮಿ ಕೂಡ ಸಖತ್ ತಿರುಗೇಟು ನೀಡಿದ್ದರು.
ಈ ಶೀತಲ ಸಮರ ಇದೀಗ ಕಾನೂನು ಹೋರಾಟವಾಗಿ ಮಾರ್ಪಟ್ಟಿದ್ದು, ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ.
ಕುಟುಂಬದ ವಿರುದ್ಧ (Sandalwood)ವಾಗ್ದಾಳಿ: ಪ್ರತಿಬಂಧಕಾಜ್ಞೆ ಬೆನ್ನಲ್ಲೇ ಹೊಸ ಪ್ರಕರಣ
ಕಳೆದ ಒಂದು ವಾರದಿಂದ ದರ್ಶನ್ ಕುಟುಂಬ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಧನ್ವೀರ್ ನೀಡಿದ್ದ ಹೇಳಿಕೆಗಳು ಸ್ಯಾಂಡಲ್‌ವುಡ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಈ ಬೆಳವಣಿಗೆಯಿಂದ ಆಕ್ರೋಶಗೊಂಡಿದ್ದ ನಟ ದರ್ಶನ್, ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಧನ್ವೀರ್ ವಿರುದ್ಧ ಈಗಾಗಲೇ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ (Injunction Order) ಪಡೆದುಕೊಂಡಿದ್ದರು.
ಆದರೂ ಸಹ ಪ್ರಕರಣ ತಣ್ಣಗಾಗದ ಹಿನ್ನೆಲೆಯಲ್ಲಿ, ಇದೀಗ ವಿಜಯಲಕ್ಷ್ಮಿ ಅವರೇ ನೇರವಾಗಿ ರಂಗಕ್ಕಿಳಿದಿದ್ದು, ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನಹಾನಿ ವ್ಯಾಜ್ಯ ಹೂಡಿದ್ದಾರೆ.
37ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದೂರು: ನವೆಂಬರ್ 30ಕ್ಕೆ ವಿಚಾರಣೆ ನಿಗದಿ
ವಿಜಯಲಕ್ಷ್ಮಿ ದರ್ಶನ್ ಅವರ ಪರವಾಗಿ ಪ್ರಸಿದ್ಧ ವಕೀಲ ರಂಗನಾಥ ರೆಡ್ಡಿ ಅವರು ಬೆಂಗಳೂರಿನ 37ನೇ ಸಿಸಿಹೆಚ್ (CCH) ನ್ಯಾಯಾಲಯದಲ್ಲಿ ಈ ಸಂಬಂಧಿತ ಅರ್ಜಿಯನ್ನು ಸಲ್ಲಿಸಿದ್ದಾರೆ.
ದೂರಿನಲ್ಲಿ ಧನ್ವೀರ್ ಅವರು ನಡೆಸಿರುವ ಮಾನಹಾನಿಕರ ವಾಗ್ದಾಳಿಗಳು ಮತ್ತು ಕುಟುಂಬದ ತೇಜೋವಧೆಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ನಿಗದಿಪಡಿಸಿದೆ.
ಉಲ್ಬಣಗೊಂಡ ಸ್ಯಾಂಡಲ್‌ವುಡ್ ಜಟಾಪಟಿ
ಒಂದಾನೊಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ದರ್ಶನ್ ಹಾಗೂ ಧನ್ವೀರ್ ನಡುವಿನ ಸಂಬಂಧ ಹೀಗೆ ಮುರಿದುಬಿದ್ದು, ಕಾನೂನು ಸಮರಕ್ಕೆ ತಿರುಗಿರುವುದು ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಕೋರ್ಟ್ ನಿಗದಿಪಡಿಸಿರುವ ನವೆಂಬರ್ 30ರ ವಿಚಾರಣೆಯ ವೇಳೆ ನ್ಯಾಯಾಲಯ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಹಾಗೂ ಈ ಮಾನಹಾನಿ ಮೊಕದ್ದಮೆಗೆ ನಟ ಧನ್ವೀರ್ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ದಿಯಾ ಮಿರ್ಜಾ ದೀಪಾವಳಿ ವಿಡಿಯೋ ಡಿಲೀಟ್ ಪ್ರಕರಣ: ಬಿಎಂಸಿ ನಿರ್ಧಾರಕ್ಕೆ ತೀವ್ರ ಆಕ್ರೋಶ
