ಪಾಕಿಸ್ತಾನ: ಇಲ್ಲಿನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರದ ಪ್ರಾರ್ಥನೆಯ (Pakistan) ಸಮಯದಲ್ಲಿ ಪೋಲೀಸ್ ಮಸೀದಿಯೊಂದರಲ್ಲಿ ಸಂಭವಿಸಿದ ಭೀಕರ ಸ್ಪೋಟವು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಕೋಹಾಟ್ ಜಿಲ್ಲೆಯ ಹಳೆಯ ಪೋಲೀಸ್ ಲೈನ್ಸ್ ಬಳಿ ನಡೆದ ಈ ಭೀಕರ ಸ್ಫೋಟದಲ್ಲಿ ಕನಿಷ್ಠ ೧೬ ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಇಷ್ಟಕ್ಕೂ ಆಗಿದ್ದೇನು?
ಶುಕ್ರವಾರದ ವಿಶೇಷ ಪ್ರಾರ್ಥನೆಗಾಗಿ ನೂರಾರು ಜನರು ಮಸೀದಿಯಲ್ಲಿ ಜಮಾಯಿಸಿದ್ದ ವೇಳೆಯಲ್ಲೇ ಈ ಸ್ಪೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಜನರು ಪ್ರಾಣಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಘಟನೆಯ ತೀವ್ರತೆಗೆ ಮಸೀದಿಯ ಗೋಡೆಗಳು ಹಾಗೂ ಪಕ್ಕದ ಕಟ್ಟಡಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ದುರಂತದ ಭೀಕರತೆಯನ್ನು ಬಿಂಬಿಸುತ್ತಿವೆ. ರಕ್ತಸಿಕ್ರವಾಗಿ ಬಿದ್ದಿದ್ದ ಗಾಯಾಳುಗಳನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟಿದ್ದಾರೆ.
ದುರಂತ ಸಂಭವಿಸಿದ ತಕ್ಷಣವೇ ಸ್ಥಳೀಯ ಆಡಳಿತ ಹಾಗೂ ಪೋಲೀಸ್ ಪಡೆಗಳು ಸೇರಿದಂತೆ ರೆಸ್ಕ್ಯೂ ೧೧೨೨ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಖೈಬರ್ ಪಖ್ತುಂಖ್ವಾವಾ ರೆಸ್ಕ್ಯೂ ವಕ್ತಾರ ಬಿಲಾಲ್ ಅಹಮದ್ ಫೈಜಿ ಮಾತನಾಡಿ, “ಸ್ಥಳೀಯ ಪರಿಸ್ಥಿತಿಯನ್ನು ನಮ್ಮ ತಂಡಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಪ್ರಸಕ್ತ ಘಟನೆಯ ಹೊಣೆಯನ್ನು ಈವರೆಗೂ ಯಾವುದೇ ಉಗ್ರ ಸಂಘಟನೆ ಅಧಿಕೃತವಾಗಿ ವಹಿಸಿಕೊಂಡಿಲ್ಲ. ಆದಾಗ್ಯೂ, ಇದು ‘ಇತ್ತಿಹಾದ್-ಉಲ್-ಮುಜಾಹಿದೀನ್ ಪಾಕಿಸ್ತಾನ್’ (IMP) ಎಂಬ ಉಗ್ರ ಸಂಘಟನೆಯಿಂದ ನಡೆಸಲ್ಪಟ್ಟ ಆತ್ಮಹುತಿ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಉದಯವಾಗಿದ್ದ ಈ ಉಗ್ರಗಾಮಿ ಸಂಘಟನೆಯು ಪಾಕಿಸ್ತಾನದ ಭದ್ರತಾ ಪಡೆಗಳನ್ನು ವಿರೋಧಿಸುತ್ತಿದ್ದು, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಗೆ ಎದುರಾಳಿಯಾಗಿ ಬೆಳೆಯುತ್ತಿದೆ.
ಹೊಸ ಉಗ್ರ ಸಂಘಟನೆಯಿಂದ ಕೃತ್ಯ ಶಂಕೆ
ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್ಫ್ಲಿಕ್ಟ್ ಅಂಡ್ ಸೆಕ್ಯೂರಿಟಿ ಸ್ಟಡೀಸ್ (ICSS) ನಡೆಸಿದ ಅಧ್ಯಯನದ ಪ್ರಕಾರ, ಈ ಹೊಸ ಉಗ್ರ ಸಂಘಟನೆಯು ರಚನೆಯಾದಾಗಿನಿಂದ ಉತ್ತರ ವಜೀರಿಸ್ತಾನ್ ಪ್ರದೇಶದಲ್ಲಿ ನಡೆದ ಹಲವು ಆತ್ಮಹುತಿ ದಾಳಿಗಳು ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಷ್ಟೇ ಅಲ್ಲದೆ, ಟಿಟಿಪಿ ಸಂಘಟನೆಯ ಮತ್ತೊಂದು ವೈರಿ ಗುಂಪಾದ ‘ಜಮಾತ್-ಉಲ್-ಅಹ್ರಾರ್’ ಸಂಘಟನೆಯ ಉಗ್ರರು ಕೂಡ ಮುಂದಿನ ದಿನಗಳಲ್ಲಿ ಈ ಐಎಂಪಿ ಸಂಘಟನೆಯನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಸದ್ಯ ಈ ಬಾಂಬ್ ಸ್ಫೋಟವು ಪಾಕಿಸ್ತಾನದ ಆಂತರಿಕ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ: ನಿಠಾರಿ ಸರಣಿ ಕೊಲೆ ಪ್ರಕರಣದಲ್ಲಿ ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಆತ್ಮಹತ್ಯೆ!
