Bengaluru: ಪರಪ್ಪನ ಅಗ್ರಹಾರದಲ್ಲಿ ಹೊಸ ಬದಲಾವಣೆ: ಜೈಲಿನಲ್ಲೇ ಆರಂಭವಾಯ್ತು ನವ ಸಂಕಲ್ಪ ಬೇಕರಿ

New Beginning Behind Bars Parappana Agrahara Starts Bakery Unit to Empower Inmates

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗಳ ಜೀವನದಲ್ಲಿ ಹೊಸ ಭರವಸೆಯ ಬೆಳಕು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರಾಗೃಹ ಇಲಾಖೆಯು ಅತ್ಯಂತ (Bengaluru) ಮಹತ್ವದ ಮತ್ತು ಶ್ಲಾಘನೀಯ ಹೆಜ್ಜೆಯೊಂದನ್ನು ಇಟ್ಟಿದೆ. ಸಜಾ ಬಂಧಿಗಳ ಪುನರ್ವಸತಿ ಹಾಗೂ ಅವರ ಕೌಶಲ್ಯಾಭಿವೃದ್ಧಿಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ಜೈಲಿನ ಆವರಣದಲ್ಲಿಯೇ ‘ನವ ಸಂಕಲ್ಪ ಬೇಕರಿ’ ಘಟಕವನ್ನು ಇಂದು ಸಂಭ್ರಮದಿಂದ ಪ್ರಾರಂಭಿಸಲಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಈ ವಿನೂತನ ಬೇಕರಿ ಘಟಕವನ್ನು ಲೋಕಾರ್ಪಣೆ ಮಾಡಿದ್ದು, ಇದೇ ಸಂದರ್ಭದಲ್ಲಿ ತಯಾರಾದ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಲುಪಿಸಲು ‘ಬೇಕರಿ ಆನ್ ವೀಲ್ಸ್’ ಮೊಬೈಲ್ ವಾಹನ ಸೇವೆಗೂ ಚಾಲನೆ ನೀಡಿದ್ದಾರೆ.

ಖೈದಿಗಳಿಗೆ ಬೇಕರಿ ಉತ್ಪನ್ನ ತಯಾರಿಸುವ ತರಬೇತಿ

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹೊಸ ಸಜಾ ಬಂಧಿಗಳಿಗೆ ಉಪಯುಕ್ತ ಕೌಶಲ್ಯಗಳನ್ನು ಕಲಿಸಿಕೊಡುವುದಾಗಿದೆ. ಈ ಭಾಗವಾಗಿ ಹಲವು ಬಂಧಿಗಳಿಗೆ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕುರಿತು ವೃತ್ತಿಪರ ತರಬೇತಿ ನೀಡಲಾಗಿದ್ದು, ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಕೈದಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜೈಲಾಸವಾಸ ಮುಗಿದು ಹೊರಬಂದ ಮೇಲೆಯೂ ಈ ಕೈದಿಗಳು ಸಮಾಜದಲ್ಲಿ ಗೌರವಯುತವಾಗಿ, ಯಾರ ಹಾರೈಕೆಯೂ ಇಲ್ಲದೆ ಸ್ವಾವಲಂಬಿ ಜೀವನ ನಡೆಸಲು ಈ ತರಬೇತಿಯು ನೆರವಾಗಲಿದೆ.

ತಯಾರಾದ ರುಚಿಕರ ಬೇಕರಿ ತಿಂಡಿಗಳನ್ನು ಬೆಂಗಳೂರಿನ ವಿವಿಧ ನ್ಯಾಯಾಲಯಗಳ ಆವರಣಗಳು ಮತ್ತು ಪ್ರಮುಖ ಬಸ್ ನಿಲ್ದಾಣಗಳಲ್ಲಿ ‘ಬೇಕರಿ ಆನ್ ವೀಲ್ಸ್’ ಮೂಲಕ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ ಬರುವ ಆದಾಯವನ್ನು ಕಾರಾಗೃಹದ ಅಭಿವೃದ್ಧಿ ಹಾಗೂ ಕೈದಿಗಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಕೈದಿಗಳ ಈ ಪ್ರತಿಭೆಗೆ ಈಗಾಗಲೇ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, 2026ರ ಗಣರಾಜ್ಯೋತ್ಸವದಂದು ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಸಮಾರಂಭದಲ್ಲಿ ರಾಜ್ಯಪಾಲರು ಸೇರಿದಂತೆ ಹಲವು ಮುಖಂಡರಿಗೆ ಈ ಕೈದಿಗಳು ತಯಾರಿಸಿದ ಉಪಹಾರವನ್ನೇ ನೀಡಲಾಗಿತ್ತು ಎಂಬುದು ವಿಶೇಷ.

ಇನ್ನೂ ಬಹುದೂರ ಸಾಗಬೇಕಿದೆ ಎಂದ ಆಲೋಕ್‌ ಕುಮಾರ್

ಈ ಯೋಜನೆಯ ಯಶಸ್ಸಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ಡಿಜಿಪಿ ಅಲೋಕ್ ಕುಮಾರ್, ಬೇಕರಿ ಘಟಕ ಹಾಗೂ ಮೊಬೈಲ್ ಸೇವೆಗೆ ಸಹಕರಿಸಿದ ‘HCL ಇ-ಹಾಟ್’ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಈ ಮಹತ್ವದ ಯೋಜನೆ ಸಾಕಾರಗೊಳ್ಳಲು ಶ್ರಮಿಸಿದ ಐಪಿಎಸ್ ಅಧಿಕಾರಿ ಅನುಶ್ ಕುಮಾರ್ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಅಪರಾಧಿಗಳನ್ನು ಸುಧಾರಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಈ ಪಯಣದಲ್ಲಿ ನಾವು ಇನ್ನೂ ಬಹುದೂರ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಇಸ್ರೇಲ್ ಪ್ರಜೆ ವಶಕ್ಕೆ: ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಮಾರ್ಚಾವಿ ಅಸ್ಸಾಪ್

Leave a Reply

Your email address will not be published. Required fields are marked *